Ghati Subramanya Temple: ₹29 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ
ಬೆಂಗಳೂರು, ನವೆಂಬರ್ 25: ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಡಿಯಲ್ಲಿ ಬಹುಕೋಟಿ ವೆಚ್ಚದ ಸಮಗ್ರ ಅಭಿವೃದ್ಧಿ ಯೋಜನೆಗಳಿಗೆ ರಾಜ್ಯ ಮುಜರಾಯಿ ಖಾತೆ ಸಚಿವ ಮತ್ತು ಸಾರಿಗೆ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರು ಚಾಲನೆ ನೀಡಿದರು. ಕ್ಷೇತ್ರದಲ್ಲಿ ಏನೆಲ್ಲ ಅಭಿವೃದ್ಧಿ ಆಗಲಿದೆ. ಯಾವೆಲ್ಲ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂಬ ಮಾಹಿತಿ ಇಲ್ಲಿದೆ.
ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕ್ಷೇತ್ರದಲ್ಲಿ ಬರೋಬ್ಬರಿ 29.00 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಬಗ್ಗೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು. ಈ ವೇಳೆ ಆಹಾರ ಹಾಗೂ ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ಅವರು ಸಾಕ್ಷಿಯಾದರು ಎಂದು ಮುಜರಾಯಿ ಇಲಾಖೆ ತಿಳಿಸಿದೆ.

ಬಹುಕೋಟಿ ವೆಚ್ಚದ ಯೋಜನೆಗಳ ವಿವರ
ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸ್ಥಳದಲ್ಲಿ ಸಕಲ ವ್ಯವಸ್ಥೆ ಮಾಡಲಾಗುತ್ತಿದೆ. ನಿತ್ಯ ಆಗಮಿಸುವ ಹಾಗೂ ವಿಶೇಷ ಸಂದರ್ಭಗಳಲ್ಲಿ ಬರುವ ಭಕ್ತಗಣ ಗಮನದಲ್ಲಿಟ್ಟುಕೊಂಡು ಯೋಜನೆಗಳ ಕಾಮಗಾರಿ ಆರಂಭಿಸಲಾಗುತ್ತದೆ. ಅದರ ವಿವರ ಹೀಗಿದೆ.
* 16 ಕೋಟಿ ರೂಪಾಯಿ ವೆಚ್ಚದಲ್ಲಿ ದಾಸೋಹ ಭವನ ನಿರ್ಮಾಣ
* 1.96 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಅಭಿವೃದ್ಧಿ
* 3.53 ಕೋಟಿ ರೂಪಾಯಿ ವೆಚ್ಚದಲ್ಲಿ ರಥ ಬೀದಿ
* ರೂಪಾಯಿ 1.62 ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸ ಮೇಲ್ದರ್ಜೆರಿಗೇರಿಸುವುದು
* ರೂಪಾಯಿ 28 ಲಕ್ಷ ವೆಚ್ಚದಲ್ಲಿ 1 ಲಕ್ಷ ಲೀಟರ್ ಸಾಮರ್ಥ್ಯವುಳ್ಳ ನೀರಿನ ಟ್ಯಾಂಕ್ ನಿರ್ಮಾಣ
* 43 ಲಕ್ಷ ರೂಪಾಯಿ ವೆಚ್ಚದಲ್ಲಿ ಹೊಸ ಶೌಚಾಲಯಗಳ ನಿರ್ಮಾಣ ಯೋಜನೆಗಳು ಇದರಲ್ಲಿ ಒಳಗೊಂಡಿವೆ.
ಡಿಸೆಂಬರ್ ನಲ್ಲಿ ದೇವರ ಬ್ರಹ್ಮರಥೋತ್ಸವ
2025-26ನೇ ಸಾಲಿನ ಶ್ರೀ ಘಾಟಿ ಸುಬ್ರಹ್ಮಣ್ಯಸ್ವಾಮಿ ರವರ ಬ್ರಹ್ಮರಥೋತ್ಸವವು ದಿನಾಂಕ: 25/12/2025 ರ ಗುರುವಾರದಂದು ನೆರವೇರುತ್ತದೆ. ಈ ಬಾರಿ ವಿಶೇಷವಾಗಿ ಹೂವಿನ ಅಲಂಕಾರ ಮತ್ತು ವಿದ್ಯುತ್ ದೀಪಾಲಂಕಾರದ ವ್ಯವಸ್ಥೆ ಕಲ್ಪಿಸಲಾಗಿದೆ.
ಭಕ್ತಾಧಿಗಳ ಅನುಕೂಲಕ್ಕಾಗಿ ಕುಡಿಯುವ ನೀರಿನ ವ್ಯವಸ್ಥೆ, ಸೂಕ್ತ ಸರತಿ ಸಾಲಿನ ವ್ಯವಸ್ಥೆ, ಪ್ರಸಾದದ ವ್ಯವಸ್ಥೆ, ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆ, ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆಗಳನ್ನು ಮಾಡಲಾಗುವುದು. 2025-26ನೇ ಸಾಲಿನ ಡಿಸೆಂಬರ್ 01 ನೇ ತಾರೀಖಿನಿಂದ ಶ್ರೀ ಕ್ಷೇತ್ರಕ್ಕೆ ಆಗಮಿಸುವ ವಾಹನಗಳ ಸುಂಕ ವಸೂಲಾತಿಯನ್ನು ರದ್ದುಗೊಳಿಸಿ ಉಚಿತವಾಗಿ ವಾಹನಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು.
ಹಿರಿಯ ನಾಗರೀಕರು, ವಿಶೇಷ ಚೇತನರು, 01 ವರ್ಷದ ಒಳಗಿನ ಶಿಶುಗಳ ತಾಯಂದಿರಿಗೆ ಮತ್ತು ಗರ್ಭಿಣಿ ಸ್ತ್ರೀಯರಿಗೆ ವಿಶೇಷ ದರ್ಶನದ ವ್ಯವಸ್ಥೆ ಕಲ್ಪಿಸಲಾಗುವುದು. 2025-26ನೇ ಸಾಲಿನ ರಾಸುಗಳ ಜಾತ್ರೆಯು ದಿನಾಂಕ 10/12/2025 ರಿಂದ 18/12/2025ರ ವರೆಗೂ ಜರುಗಲಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಬಾರಿ ರಾಸುಗಳ ಜಾತ್ರಾ ಸಮಯದಲ್ಲಿ ವಿಶೇಷ ದೀಪಾಲಂಕಾರ, ರೈತರಿಗೆ ಮತ್ತು ರಾಸುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ರಾಸುಗಳಿಗೆ ರೋಗಗಳು ಹರಡದಂತೆ ಪಶು ವೈದ್ಯರ ವ್ಯವಸ್ಥೆ ಮಾಡಲಾಗುವುದು. ರಾಸುಗಳ ಜಾತ್ರೆಗೆ ಆಗಮಿಸುವ ರೈತರಿಗೆ ತಿಂಡಿ ಮತ್ತು ಊಟದ ವ್ಯವಸ್ಥೆ ಯನ್ನು ದೇವಾಲಯದ ವತಿಯಿಂದ ಕಲ್ಪಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.












Click it and Unblock the Notifications