Waqf: ಸುಳ್ಳು ಸುದ್ದಿ ಹರಡಿದ ಆರೋಪ- ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು ದಾಖಲು!
ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹಾವೇರಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸುಳ್ಳು ಮಾಹಿತಿ ಹರಡಿದ ಆರೋಪದ ಮೇಲೆ ತೇಜಸ್ವಿ ವಿರುದ್ಧ ದೂರು ದಾಖಲಿಸಲಾಗಿದೆ. ರೈತರೊಬ್ಬರ ಆತ್ಮಹತ್ಯೆ ವಿಚಾರದಲ್ಲಿ ಸುಳ್ಳು ಸುದ್ದಿ ಹರಡಿದ್ದಾರೆನ್ನುವ ಆರೋಪ ಇವರ ಮೇಲೆ ಕೇಳಿ ಬಂದಿದೆ. ಹೀಗಾಗಿ ಹಾವೇರಿಯ ಸಿಇಎನ್ ಠಾಣೆಯಲ್ಲಿ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ.
ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದ ರಾಜಕೀಯ ಅಲೆಯನ್ನು ಸೃಷ್ಟಿಸಿದೆ. ಈ ಸಮಯದಲ್ಲಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಆತ್ಮಹತ್ಯೆಗೆ ಕಾರಣ ವಕ್ಫ್ ನೋಟೀಸ್ ನೀಡಿರುವುದು ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದರು. ಇದರಿಂದೀಗ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ.

ನೋಟೀಸ್‌ಗೆ ಹೆದರಿ ರೈತ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತೇಜಸ್ವಿ ಸೂರ್ಯ ಟ್ವೀಟ್‌ನಲ್ಲಿ ಬರೆದಿದ್ದರು. ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿದ್ದರಿಂದ ರೈತ ರುದ್ದಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಸದರು ಟ್ವೀಟ್ ಮೂಲಕ ಹಂಚಿಕೊಂಡ ಬೆನ್ನಲ್ಲೆ ಮಾಧ್ಯಮಗಳಲ್ಲೂ ಇದೇ ರೀತಿಯ ಸುದ್ದಿ ಪ್ರಸಾರವಾಗಿತ್ತು.
'ಸಿಎಂ ಹಾಗೂ ವಕ್ಫ್ ಸಚಿವರ ಅಲ್ಪಸಂಖ್ಯಾತರ ತುಷ್ಟೀಕರದಿಂದ ಕರ್ನಾಟಕದಲ್ಲಿ ದುರಂತಗಳು ಸಂಭವಿಸುತ್ತಿವೆ. ಪ್ರತಿ ದಿನ ಇಂಥ ಘಟನೆಗಳು ಸಂಭವಿಸುತ್ತಿವೆ' ಎಂದು ತೇಜಸ್ವಿ ಸೂರ್ಯ ಉಲ್ಲೇಖಿಸಿದ್ದರು. ಅವರ ವಿರುದ್ಧ ಅಪಸ್ವರ ಕೇಳಿ ಬಂದ ಬೆನ್ನಲ್ಲೆ ಇದೀಗ ಟ್ವಿಟ್ ಡಿಲೀಟ್ ಮಾಡಲಾಗಿದೆ.
ಹಾವೇರಿ ಜಿಲ್ಲಾಡಳಿತ ಈ ಬಗ್ಗೆ ಪರಿಶೀಲನೆ ನಡೆಸಿದೆ. ಆಸ್ತಿ ದಾಖಲೆಯಲ್ಲಿ ವಕ್ಫ್ ಹೆಸರು ನಮೂದಾಗಿರುವುದಕ್ಕೂ ರೈತನ ಆತ್ಮಹತ್ಯೆಗೂ ಸಂಬಂಧವಿಲ್ಲ ಎಂದು ಅದು ಸ್ಪಷ್ಟನೆ ನೀಡಿದೆ. ರೈತ ಸಾಲಬಾಧೆಯಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವ ಮಾಹಿತಿಯನ್ನು ಹಾವೇರಿ ಜಿಲ್ಲಾಡಳಿತ ಹಂಚಿಕೊಂಡಿದೆ. ಜೊತೆಗೆ ಈ ಬಗ್ಗೆ ಪೊಲೀಸರು ಖಾತರಿಪಡಿಸಿದ್ದಾರೆ.
ರುದ್ರಪ್ಪ ಆತ್ಮಹತ್ಯೆ ಬಳಿಕ ಪೊಲೀಸರು ಕೂಡ ಈ ಬಗ್ಗೆ ತನಿಖೆ ನಡೆಸಿದರು. ತನಿಖೆಯಿಂದ ರುದ್ರಪ್ಪ ಸಾವಿಗೆ ಕಾರಣ ವಕ್ಫ್ ನೋಟೀಸ್ ಅಲ್ಲ ಎನ್ನುವುದು ಸ್ಪಷ್ಟವಾಗಿದೆ. ಇದನ್ನು ಪೊಲೀಸರು ಕೂಡ ಸ್ಪಷ್ಟಪಡಿಸಿದ್ದಾರೆ. ಅಂತಿಮ ವರದಿಯನ್ನು ತಹಶೀಲ್ದಾರ ಹಾನಗಲ್ ರವರಿಗೆ ಸಲ್ಲಿಸಿದ್ದಾರೆ. ಮೃತನ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ನೀಡಿರುವ ಬಗ್ಗೆಯೂ ಹಾವೇರಿ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಲ್ಲದೆ ರುದ್ರಪ್ಪ ಕುಟುಂಬಸ್ಥರು ವಕ್ಫ್ ಜಂಟಿ ಸಮಿತಿಯ ಅಧ್ಯಕ್ಷರಿಗೂ ಮನವಿ ಸಲ್ಲಿಸಿ ತಮಗೆ ಅನ್ಯಾಯ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ರುದ್ರಪ್ಪ ಸಾವಿಗೆ ವಕ್ಫ್ ಕಾರಣ ಅಲ್ಲ ಎನ್ನುವುದನ್ನು ಸ್ಥಳೀಯ ಪೊಲೀಸರು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications