ಮಳೆಯಿಂದ ಬೆಳೆ ಹಾನಿ ಆಗಿರುವ ರೈತರಿಗೆ ಪರಿಹಾರದ ಹಣ ಬಿಡುಗಡೆ: ಅಪ್‌ಡೇಟ್
ಹಾಸನ ಆಗಸ್ಟ್ 26: ಮುಂಗಾರು ಮುನ್ನವೇ ಕರ್ನಾಟಕದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಜನ ಜೀವನ ಅಸ್ತವ್ಯಸ್ಥವಾಗಿದೆ. ಕೆಲವರು ಮನೆ, ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ. ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಬೆಳೆಹಾನಿ ಹಾಗೂ ಬರ ಸ್ಥಿತಿಯ ಬಗೆಗಿನ ಜಿಲ್ಲಾಧಿಕಾರಿಗಳ ಸಭೆಯನ್ನು ಸಚಿವ ಕೃಷ್ಣ ಬೈರೇಗೌಡ ಅವರು ನಡೆಸಿದರು
ಮಂಗಳವಾರ ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಗಿತ್ತು. ಸಚಿವ ಕೃಷ್ಣ ಬೈರೇಗೌಡ ಅವರು ಜಿಲ್ಲೆಯ ಸಚಿವರಾದ ನಂತರ ನಡೆಸುತ್ತಿರುವ ಮೊದಲ ಸಭೆ ಇದಾಗಿದ್ದು, ಎಲ್ಲಾ ಜಿಲ್ಲಾಧಿಕಾರಿಗಳು, ವಿಪತ್ತು ನಿರ್ವಹಣಾ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಹಾಗೂ ಆಯುಕ್ತರ ಸಭೆ ನಡೆಸಿದರು.

ಸಭೆಯಲ್ಲಿ "ರಾಜ್ಯಾದ್ಯಂತ ಈ ವರ್ಷದ ಮಳೆಯ ಪ್ರಮಾಣದ ಬಗ್ಗೆ ಚರ್ಚಿಸಲಾಯಿತು. ಪ್ರಸ್ತುತ ಸಾಲಿನಲ್ಲಿ ಉತ್ತಮ ಮಳೆಯಾಗಿದ್ದು ಬೀದರ್ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಮಾತ್ರ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಉಳಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು, ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ಆದರೆ, ಕೆಲ ಜಿಲ್ಲೆಗಳಲ್ಲಿ ಮಾತ್ರ ಮಳೆಯಿಂದಾಗಿ ಬೆಳೆ ನಾಶವಾಗಿದ್ದು, ಶೀಘ್ರ ಈ ಮಾಹಿತಿಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸಲು ಸೂಚಿಸಲಾಯಿತು. ಅಲ್ಲದೆ ಮಳೆ ಹಾಗೂ ಸಿಡಿಲಿನ ಕಾರಣಕ್ಕೆ 51 ಜನ ಮೃತಪಟ್ಟಿದ್ದರೆ, 329 ಜಾನುವಾರುಗಳು ಮೃತಪಟ್ಟಿವೆ. ಮಳೆಗೆ 121 ಮನೆಗಳೂ ಸಂಪೂರ್ಣ ಕುಸಿದಿದ್ದು ಎಲ್ಲರಿಗೂ ಶೀಘ್ರ ಪರಿಹಾರ ನೀಡಲು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯಾದ್ಯಂತ ಪೋಡಿ ದುರಸ್ಥಿ ಅಭಿಯಾನಕ್ಕೆ ಚಾಲನೆ ನೀಡಿದ್ದರೂ ಈ ಕೆಲಸ ನಿರೀಕ್ಷಿತ ವೇಗ ಪಡೆದಿಲ್ಲ ಎಂದು ತಹಶೀಲ್ದಾರರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಅಸಮಾಧಾನ ಹೊರಹಾಕಿದರು. ದಶಕಗಳ ಹಿಂದೆಯೇ ಸರ್ಕಾರ ಬಡ ರೈತರಿಗೆ ಜಮೀನು ಮಂಜೂರು ಮಾಡಿದೆ. ಆದರೆ, ನಾನಾ ಕಾರಣಗಳಿಂದ ಜಮೀನು ದುರಸ್ಥಿಯಾಗದೆ ಲಕ್ಷಾಂತರ ರೈತರು ಸಂಕಷ್ಟಕ್ಕೆ ಒಳಗಾಗಬೇಕಾದ ಸ್ಥಿತಿ ಇದೆ. ರೈತರು ತಮ್ಮ ಪಾಲಿನ ಜಮೀನು ಇದ್ದರೂ ಸಹ ಅದರ ಪೋಡಿಯಾಗದೆ ಸರ್ಕಾರಿ ಕಚೇರಿಗಳಿಗೆ ಸುತ್ತುವುದು ಪರಿಪಾಟವಾಗಿದೆ. ಹೀಗಾಗಿಯೇ ಪೋಡಿ ಅಭಿಯಾನಕ್ಕೆ ಚಾಲನೆ ನೀಡುವ ಮೂಲಕ ನಮೂನೆ 1-5 ಹಾಗೂ 6-10 ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲಾಗಿತ್ತು.
ನಿಯಮದಂತೆ ತಹಶೀಲ್ದಾರರು ನಿಗದಿತ ಜಮೀನಿಗೆ ಸಂಬಂಧಿಸಿದ ನಮೂನೆ 1-5 ದಾಖಲೆಯನ್ನು ಸಿದ್ದಪಡಿಸಿ ಮುಂದಿನ ಹಂತಕ್ಕೆ ನಮೂನೆ 6-10 ಕೆಲಸಕ್ಕಾಗಿ ಭೂ ಮಾಪನ ಇಲಾಖೆಗೆ ಕಡತ ಕಳುಹಿಸಬೇಕು. ಆದರೆ, ಬಹುತೇಕ ಜಿಲ್ಲೆಗಳಲ್ಲಿ ಈ ಸಂಖ್ಯೆ ಸಮಾಧಾನಕರವಾಗಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಸಮಾಧಾನ ಹೊರಹಾಕಿದರು.












Click it and Unblock the Notifications