ಹೊರರಾಜ್ಯಗಳಿಂದ ಅಕ್ಕಿ ಖರೀದಿಸುವುದು ಕಮಿಷನ್ ಪಡೆಯುವ ಹುನ್ನಾರ: ಬಿ.ವೈ. ವಿಜಯೇಂದ್ರ
ಬೆಂಗಳೂರು, ಜೂನ್ 16: ಹೊರ ರಾಜ್ಯಗಳಿಂದ ಅಕ್ಕಿ ಖರೀದಿಸಲು ರಾಜ್ಯ ಸರಕಾರ ಮುಂದಾಗಿರುವುದು ಹಾಸ್ಯಾಸ್ಪದ, ಹೊರ ರಾಜ್ಯದಿಂದ ಅಕ್ಕಿ ಖರೀದಿಸುವುದು ಕಮಿಷನ್ ಪಡೆಯುವ ಹುನ್ನಾರ ಎಂದು ಶಾಸಕ ಬಿ.ವೈ. ವಿಜಯೇಂದ್ರ ಆರೋಪಿಸಿದರು.
ಈ ಕುರಿತು ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿ, ನಮ್ಮ ರಾಜ್ಯದಲ್ಲಿ ಅಕ್ಕಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಇಲ್ಲಿಂದಲೇ ಖರೀದಿ ಮಾಡಿದರೆ ರೈತರಿಗೆ ಅನುಕೂಲವಲ್ಲವೇ? ಛತ್ತೀಸಗಡ, ತೆಲಂಗಾಣದಿಂದ ತರುವುದರ ಹಿಂದೆ ಕಮಿಷನ್ ಗಿಟ್ಟಿಸುವ ಹುನ್ನಾರ ಇದೆ ಆರೋಪಿಸಿದರು.

ಕಾಂಗ್ರೆಸ್ ಪಕ್ಷವು ತಾವು ಕೊಟ್ಟ ಭರವಸೆ, ಗ್ಯಾರಂಟಿ ಅನುಷ್ಠಾನ ಅಸಾಧ್ಯವಾದ ಸಂದರ್ಭದಲ್ಲಿ ಮತಾಂತರ ನಿಷೇಧ ಕಾಯ್ದೆ ಹಿಂತೆಗೆತ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಿಂದಕ್ಕೆ ಪಡೆಯುವುದು ಹಾಗೂ ಪಠ್ಯಪುಸ್ತಕ ಪರಿಷ್ಕರಣೆಯಂಥ ನಿರ್ಧಾರಗಳನ್ನು ಮಾಡುತ್ತಿದೆ. ಈ ಮೂಲಕ ಜನರ ಗಮನ ಬೇರೆಡೆ ಸೆಳೆಯಲು ಮುಂದಾಗಿದೆ. ಅಲ್ಲದೆ, ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸಲು ಹೊರಟಿದೆ ಎಂದು ಕಿಡಿಕಾರಿದರು.
ಮತಾಂತರ ನಿಷೇಧ ಕಾಯ್ದೆ ಹಿಂತೆಗೆತ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಿಂದಕ್ಕೆ ಪಡೆಯಲು ಜನತೆ ನಿಮಗೆ ಮತ ಕೊಟ್ಟರೇ? ಎಂದ ಅವರು, ಕುಣಿಯಲು ಬರದವರು ನೆಲ ಡೊಂಕು ಎಂಬಂತಾಗಿದೆ ಕಾಂಗ್ರೆಸ್ ಪರಿಸ್ಥಿತಿ. ಸಂಪೂರ್ಣ ಬಹುಮತ ಇದೆ ನಾವು ಹೇಗಾದರೂ ಆಡಳಿತ ಮಾಡುತ್ತೇವೆ ಎಂಬ ಧೋರಣೆಯನ್ನು ಬಿಜೆಪಿ ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ಯಡಿಯೂರಪ್ಪನವರು ತಾವೊಬ್ಬರೇ ಜನಪ್ರತಿನಿಧಿ ಇದ್ದಾಗಲೂ ವಿಧಾನಸಭೆ ಒಳಗೆ ಮತ್ತು ಹೊರಗಡೆ ರಾಜ್ಯಾದ್ಯಂತ ಹೋರಾಟಗಳನ್ನು ಸಂಘಟಿಸಿದ್ದರು.
ಬಿಜೆಪಿ 66 ಶಾಸಕರೊಂದಿಗೆ ಬಲಿಷ್ಠ ವಿರೋಧ ಪಕ್ಷವಾಗಿದೆ. ನಿಮ್ಮ ಧೋರಣೆಯನ್ನು ಸಹಿಸಲಸಾಧ್ಯ. ನೀವು ಕೊಟ್ಟ ಭರವಸೆ ಈಡೇರಿಸಲೇಬೇಕು. ಇಲ್ಲವಾದರೆ ಜನರ ಕ್ಷಮೆ ಕೇಳಿ ಎಂದು ಆಗ್ರಹಿಸಿದರು. ನಿಮ್ಮ ವಿದ್ಯುತ್ ದರ ಏರಿಸುವ ಕ್ರಮದಿಂದ ಇರುವ ಕೈಗಾರಿಕೆಗಳು ಬೇರೆ ರಾಜ್ಯಕ್ಕೆ ಓಡಿ ಹೋಗುವ ಸಂದರ್ಭ ಸೃಷ್ಟಿ ಮಾಡುತ್ತಿದ್ದೀರಲ್ಲವೇ? ಎಂದು ಪ್ರಶ್ನಿಸಿದ ಅವರು, ಭರವಸೆಗಳನ್ನು ಕಂಡಿಷನ್‍ಗಳಿಲ್ಲದೆ ಜಾರಿಗೊಳಿಸಿ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಆಡಳಿತದಲ್ಲಿ ಗೂಂಡಾಗಿರಿ ಹೆಚ್ಚಳ : ಆರ್.ಅಶೋಕ್
ಮರಳು ಮಾಫಿಯಾ ತಡೆಗಟ್ಟುವ ಸ್ಕ್ವಾಡಿನ ಸದಸ್ಯರಾಗಿದ್ದ ಕಾನ್‍ಸ್ಟೆಬಲ್ ಹತ್ಯೆಯಾಗಿದೆ. ಸಾವಿರಾರು ಟನ್ ಈ ಥರ ಕದ್ದು ಸಾಗಿಸುವುದಕ್ಕೆ ತಡೆಯೊಡ್ಡಿದ್ದ ಅವರ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಇದು ಖಂಡನೀಯ ಎಂದು ಮಾಜಿ ಸಚಿವ ಆರ್.ಅಶೋಕ್ ಅವರು ತಿಳಿಸಿದರು.
ಎಸ್ಪಿ ಕಣ್ಣೀರು ಹಾಕಿ ಅಸಹಾಯಕತೆ ತೋರಿದ್ದಾರೆ. ಕಾಂಗ್ರೆಸ್ ಸರಕಾರ ಬಂದ ಬಳಿಕ ಈ ಥರ ಗೂಂಡಾಗಿರಿ ಹೆಚ್ಚುತ್ತಿದೆ. ಬಹಳ ದಿನಗಳಿಂದ ಗೂಂಡಾಗಿರಿ ಸ್ಥಗಿತವಾಗಿತ್ತು. ಮತ್ತೆ ಅದು ಆರಂಭವಾಗಿದೆ ಎಂದು ಆಕ್ಷೇಪಿಸಿದರು. ಮಾನ್ಯ ಡಿ.ಕೆ.ಶಿವಕುಮಾರ್ ಅವರು ಈ ಹಿಂದೆಯೇ ಪೊಲೀಸರು ಹುಷಾರಾಗಿರಿ ಎಂದು ಹೇಳಿಕೆ ಕೊಟ್ಟಿದ್ದರು. ಈ ಘಟನೆಗಳನ್ನು ಗಮನಿಸಿದರೆ ಮತ್ತೆ ಕರ್ನಾಟಕದಲ್ಲಿ ಗೂಂಡಾಗಿರಿ ಪರ್ವ ಆರಂಭವಾಗಿದೆ ಎಂದು ಸ್ಪಷ್ಟಗೊಂಡಿದೆ ಎಂದು ತಿಳಿಸಿದರು.
ಸರಕಾರ ಮತ್ತು ಪೊಲೀಸ್ ಅಧಿಕಾರಿಗಳು ಇದರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನಿಷ್ಠಾವಂತ ಪೊಲೀಸ್ ಅಧಿಕಾರಿಗಳು ಕೈಚೆಲ್ಲಿ ಕುಳಿತರೆ ಸರಕಾರ ನಡೆಸುವುದು ಕಷ್ಟವಾಗುತ್ತದೆ. ಕೂಡಲೇ ದಂಧೆಕೋರರನ್ನು ಬಂಧಿಸಿ ಎಂದು ಆಗ್ರಹಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೂಂಡಾಗಿರಿ ಹೆಚ್ಚಾಗುವುದು ಪ್ರತೀತಿ ಎಂದು ತಿಳಿಸಿದರು.












Click it and Unblock the Notifications