Karnataka Weather: ರಾಜ್ಯದಲ್ಲಿ ಮೈ ಕೊರೆಯುವ ಚಳಿ ಜೊತೆ ಇಂದಿನಿಂದ ಮಳೆ: ಐಎಂಡಿ ರಿಪೋರ್ಟ್
Karnataka Weather: ಕರ್ನಾಟಕದಲ್ಲಿ ಕಳೆದ ಒಂದು ವಾರದಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಮೈ ಕೊರೆಯುವ ಚಳಿ ಇದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಇಂದಿನಿಂದ ಚಳಿಯೊಂದಿಗೆ ಮೂರು ದಿನಗಳ ಕಾಲ ವಿವಿಧ ಭಾಗದಲ್ಲಿ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಯಾವ ಭಾಗದಲ್ಲಿ ಮಳೆ ಆಗಲಿದೆ ಎನ್ನುವ ವಿವರ ಇಲ್ಲಿದೆ.
ಕರ್ನಾಟಕದ ವಿವಿಧ ಭಾಗದಲ್ಲಿ ಕನಿಷ್ಠ ತಾಪಮಾನವು ಭಾರೀ ಇಳಿಕೆಯಾಗಿದೆ. ಬೆಂಗಳೂರು, ಬೀದರ್ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ತೀವ್ರ ಚಳಿ ಮುಂದುವರಿದಿದೆ. ಇನ್ನು ಉತ್ತರ ಕರ್ನಾಟಕದ ಒಳನಾಡಿನ ಹಲವೆಡೆ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಬರೋಬ್ಬರಿ 3ರಿಂದ 6 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗಿದೆ. ಕರ್ನಾಟಕದ ಒಳನಾಡಿನ ವಿವಿಧ ಸ್ಥಳಗಳಲ್ಲಿ ಮಂಜು ಕವಿದ ವಾತಾವರಣ ನಿರ್ಮಾಣವಾಗಿತ್ತು. ಕಳೆದ 24 ಗಂಟೆ ಅವಧಿಯಲ್ಲಿ ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತಿ ಕನಿಷ್ಠ ತಾಪಮಾನವು 9 ಡಿಗ್ರಿ ಸೆಲ್ಸಿಯಸ್ ಬೀದರ್, ವಿಜಯಪುರ ಹಾಗೂ ದಾವಣಗೆರೆಯಲ್ಲಿ ದಾಖಲಾಗಿತ್ತು.

ಈ ಜಿಲ್ಲೆಗಳಲ್ಲಿ ಮಳೆ
ರಾಜ್ಯದಾದ್ಯಂತ ಚಳಿ ಹೆಚ್ಚಾಗುತ್ತಿರುವ ಬೆನ್ನಲ್ಲೇ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಆಗಿರುವುದರಿಂದ ರಾಜ್ಯದ ವಿವಿಧ ಭಾಗದಲ್ಲಿ ಮಳೆ ಮುಂದುವರಿದಿದೆ. ಚಾಮರಾಜನಗರ, ಕೋಲಾರ ಜಿಲ್ಲೆಗಳಲ್ಲಿ ಮಳೆ ಆಗಲಿದೆ. ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ರಾಮನಗರ, ಚಿತ್ರದುರ್ಗ, ದಾವಣಗೆರೆ, ಮೈಸೂರು, ಕೊಡಗು, ಮಂಡ್ಯ, ಶಿವಮೊಗ್ಗ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿಯು ಮುನ್ಸೂಚನೆ ನೀಡಲಾಗಿದೆ.
ಇನ್ನೆರಡು ದಿನ ಮಳೆ
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇನ್ನೆರಡು ದಿನ ಮಳೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.
ಹವಾಮಾನ ಹೇಗಿದೆ ?
ಬಂಗಾಳಕೊಲ್ಲಿಯ ಆಗ್ನೇಯ ಮತ್ತು ಪೂರ್ವ ಸಮಭಾಜಕ ಹಿಂದೂ ಮಹಾಸಾಗರದ ನೈಋತ್ಯ ಮತ್ತು ಪಕ್ಕದ ಪ್ರದೇಶಗಳಲ್ಲಿ ಆಳವಾದ ವಾಯುಭಾರ ಕುಸಿತವು ಗಂಟೆಗೆ 13 ಕಿ.ಮೀ ವೇಗದಲ್ಲಿ ಪಶ್ಚಿಮ-ವಾಯುವ್ಯಕ್ಕೆ ಸರಿದಿದೆ. ಅಲ್ಲದೇ ನೈಋತ್ಯ ಬಂಗಾಳಕೊಲ್ಲಿಯ ಮತ್ತು ಪಕ್ಕದ ಪೂರ್ವ ಸಮಭಾಜಕ ಹಿಂದೂ ಮಹಾಸಾಗರದ ಮೇಲೆ ತ್ರಿಂಕೋಣಮಾಲಿ (ಶ್ರೀಲಂಕಾ) ದಿಂದ 520 ಕಿ.ಮೀ., ಕಾರೈಕಲ್ (ಪುದುಚೇರಿ) ಯಿಂದ ಆಗ್ನೇಯಕ್ಕೆ 810 ಕಿ.ಮೀ. ಮತ್ತು ಚೆನ್ನೈ (ತಮಿಳುನಾಡು) ದಿಂದ ಆಗ್ನೇಯಕ್ಕೆ 980 ಕಿ.ಮೀ. ದೂರದಲ್ಲಿ ಕೇಂದ್ರೀಕೃತವಾಗಿತ್ತು. ಇದು ಮುಂದಿನ 36 ಗಂಟೆಗಳಲ್ಲಿ ನೈಋತ್ಯ ಬಂಗಾಳಕೊಲ್ಲಿಯ ಮೂಲಕ ಪಶ್ಚಿಮ-ವಾಯುವ್ಯ ದಿಕ್ಕಿಗೆ ಚಲಿಸುವ ಸಾಧ್ಯತೆಯಿದೆ.
ದಕ್ಷಿಣ ಕೇರಳ ಕರಾವಳಿಗೆ ಹೊಂದಿಕೊಂಡಿರುವ ಆಗ್ನೇಯ ಅರೇಬಿಯನ್ ಸಮುದ್ರದ ಮೇಲೆ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿ ಮೇಲ್ಮಟ್ಟದ ವಾಯು ಚಂಡಮಾರುತದ ಪರಿಚಲನೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿಯು ಉಲ್ಲೇಖಿಸಿದೆ.











Click it and Unblock the Notifications