Karnataka Weather: ಶೀತಗಾಳಿ ನಡುವೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಉತ್ತಮ ಮಳೆ ಸಾಧ್ಯತೆ
Karnataka Weather: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭೀಕರ ಚಳಿ ಮುಂದುವರೆದಿದ್ದು, ಕೆಲವೆಡೆ ಶೀತಗಾಳಿ ಪ್ರಮಾಣ ಕಡಿಮೆಯಾಗುತ್ತಿದೆ. ಈ ನಡುವೆ ಕೆಲವೇ ಕೆಲವು ಭಾಗಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಉತ್ತಮ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು (ಜನವರಿ 2) ಬೆಳಗ್ಗೆ ಚಳಿ ನಡುವೆ ಮೋಡ ಕವಿದ ವಾತವರಣ ಇದ್ದು, ಹಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎನ್ನುವ ಮುನ್ಸೂಚನೆ ಇದೆ. ಈಗಾಗಲೇ ಹೊಸ ವರ್ಷದ ದಿನದಂದು ನಗರದ ಅಲ್ಲಲ್ಲಿ ಮಳೆಯಾಗಿರುವ ಬಗ್ಗೆ ವರದಿಯಾಗಿದ. ಇನ್ನೂ ಇಂದು ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ಚಳಿ ಪ್ರಮಾಣ ಕಡಿಮೆಯಾಗಲಿದ್ದು, ತಾಪಮಾನದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಈ ನಡುವೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಕೆಲವೆಡೆ ಗುಡುಗು ಸಹಿತ ಉತ್ತಮ ಮಳೆ ಸುರಿಯುವ ಸಾಧ್ಯತೆ ಇದೆ. ಉಳಿದೆಡೆ ಚಳಿ ಜೊತೆ ಒಳಹವೆ ಇರಲಿದೆ ಎನ್ನುವ ಮುನ್ಸೂಚನೆ ಇದೆ.
ಎಲ್ಲೆಲ್ಲಿ ಮಳೆ?: ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಸಾಧಾರಣ ಮಳೆ ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಾಮರಾಜನಗರ, ಕೊಡಗು, ಮಂಡ್ಯ, ಬೆಂಗಳೂರು ನಗರ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂದುವರಿದ ಶೀತಗಾಳಿ: ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ರಾಮನಗರ, ಹಾಸನ, ಕೋಲಾರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಲ್ಲಿ ಚಳಿ ಜೊತೆ ಒಳಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಭಾಗಗಳಲ್ಲಿ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರ ಭಾಗಗಳಲ್ಲಿ ಇದೇ ರೀತಿಯ ವಾತಾವರಣ ಇರಲಿದೆ ಎಂದು ತಿಳಿಸಿದೆ.
ಕಳೆದ ಮೂರು ದಿನಗಳಿಂದ ಕೆಲವೆಡೆ ಚಳಿ ಪ್ರಮಾಣ ತಗ್ಗಿದ್ದು, ತಾಪಮಾನದಲ್ಲಿ ನಿಧಾನವಾಗಿ ಏರಿಕೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಬಹುತೇಕ ಭಾಗಗಳಲ್ಲಿ ಚಳಿ ಪ್ರಮಾಣ ತಗ್ಗಲಿದ್ದು, ಶಿವರಾತ್ರಿ ವೇಳೆಗೆ ಸಂಪೂರ್ಣವಾಗಿ ಕಡಿಮೆಯಾಗಿ ಬಳಿಕ ಬೇಸಿಗೆ ಎಂಟ್ರಿ ಕೊಡಲಿದೆ. ಈ ನಡುವೆಯೇ ಕೆಲವೆಡೆ ಅಲ್ಲಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎನ್ನುವ ಮುನ್ಸೂಚನೆಯಿದೆದೆ.
ಕಳೆದ ವರ್ಷ 2025ರಲ್ಲಿ ಮುಂಗಾರು ಜೂನ್ ಆರಂಭದಲ್ಲೇ ರಾಜ್ಯಕ್ಕೆ ಎಂಟ್ರಿ ಕೊಟ್ಟಿದ್ದು, ಬಹುತೇಕ ಜಿಲ್ಲೆಗಳಲ್ಲಿ ರಣಮಳೆ ಸುರಿದಿದೆ. ಪರಿಣಾಮ ಕೆರೆ-ಕಟ್ಟೆಗಳು, ನದಿಗಳು, ಪ್ರಮುಖ ಜಲಾಶಯಗಳು ತುಂಬಿ ಹರಿದಿವೆ. ಇದರಿಂದ ಅನ್ನದಾತರ ಮುಖದಲ್ಲಿ ಮಂದಹಾಸ ಮೂಡಿದೆ. ಇನ್ನೂ ಕೆಲವೆಡೆ ಭಾರೀ ಮಳೆಯಿಂದಾಗಿ ಅತೀವೃಷ್ಟಿಯಾಗಿ ರೈತರು ಬೆಳೆದ ಬೆಳೆಗಳೆಲ್ಲಾ ಜಲಾವೃತ ಆಗಿರುವ ಘಟನೆಗಳು ನಡೆದಿವೆ.
ರಾಜ್ಯದಲ್ಲಿ ಈ ತಿಂಗಳು ಕಳೆದರೆ ಸಾಕು ಚಳಿ ನಿಧಾನವಾಗಿ ಮಾಯವಾಗಲಿದೆ. ಬೇಸಿಗೆ ಎಂಟ್ರಿ ಕೊಡಲಿದ್ದು, ಈ ವೇಳೆ ಕಳೆದ ಬಾರಿಗಿಂತಲೂ ದಾಖಲೆ ಪ್ರಮಾಣದಲ್ಲಿ ತಾಪಮಾನ ದಾಖಲಾಗುವ ಸಾಧ್ಯತೆಯಿದೆ. ಜೂನ್ ಆರಂಭವಾಗುತ್ತಿದ್ದಂತೆ ರಾಜ್ಯಾದ್ಯಂತ ಮುಂಗಾರು ಆವರಿಸಲಿದೆ ಎನ್ನುವ ಮುನ್ಸೂಚನೆ ಇದೆ.












Click it and Unblock the Notifications