ಕರಾವಳಿ Vs ಕರ್ನಾಟಕ: ಕನ್ನಡಿಗರ ಸಹಾಯವಿಲ್ಲದೆ ತುಳು ಪ್ರದೇಶ ಬೆಳೆದಿದೆಯೇ, ಕೆಲ ತುಳುನಾಡಿಗರ ನಡೆಗೆ ಕನ್ನಡಿಗರ ವಿರೋಧ
Coastal vs Karnataka: ಕರಾವಳಿ Vs ಕರ್ನಾಟಕ: ಕನ್ನಡಿಗರ ಸಹಾಯವಿಲ್ಲದೆ ತುಳು ಪ್ರದೇಶ ಬೆಳೆದಿದೆಯೇ ಎನ್ನುವ ಪ್ರಶ್ನೆ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಕೆಲವು ತುಳುನಾಡಿಗರ ನಡೆಗೆ ಕನ್ನಡಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬರಹಗಾರ ಹಾಗೂ ಅನುವಾದಕ ಸುನೀಲ್ ಜೆ ಅವರ ಬರಹ ಇಲ್ಲಿದೆ.
ಹಿಂದಿ ಹೇರಿಕೆಯ ವಿರುದ್ಧ ಕನ್ನಡಿಗರ ಹೋರಾಟ ನಿರಂತರವಾಗಿ ಸ್ವಾತಂತ್ರ್ಯ ಸಿಕ್ಕಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ನಡೆದುಕೊಂಡೇ ಬಂದಿದೆ. ಹಿಂದಿ ಹೇರಿಕೆ ಕನ್ನಡಿಗರ ಮೇಲೆ ಆಗುತ್ತಿರುವಷ್ಟೇ ತುಳುವರ ಮೇಲೆ ಆಗುತ್ತಿರುವುದೂ ನಿಜ. ಹಿಂದಿ ಎಂಬ ಪೆಡಂಭೂತವನ್ನು ಕನ್ನಡಿಗರ ಜೊತೆ ಸೇರಿ ವಿರೋಧಿಸುವುದನ್ನು ಬಿಟ್ಟು ಕನ್ನಡ ಹೇರಿಕೆ ಅಂತ ಬೊಬ್ಬೆ ಹೊಡೆಯುವ ಆ ಕೆಲವರಿಗೆ ನನ್ನ ಕೆಲ ಪ್ರಶ್ನೆಗಳು.

1. ತುಳುನಾಡಿನ ಇತಿಹಾಸವನ್ನು ಕನ್ನಡ ಇಲ್ಲದೆ ತೋರಿಸಬಲ್ಲಿರೇ ? ತುಳುನಾಡನ್ನು ಇತಿಹಾಸದ ಬಹುಪಾಲು ಆಳಿದ ಆಳುಪರು ತುಳುವರಲ್ಲವೇ ? ಅವರೇ ಅಲ್ಲವೇ
2ರಿಂದ 15ನೆಯ ಶತಮಾನದ ತನಕವೂ ತುಳು ಪ್ರದೇಶಗಳನ್ನು ಆಳಿದ್ದು ? ತುಳು ರಾಜರುಗಳಾದ ಈ ಆಳುಪರ ಮೊದಲನೆಯ ಶಾಸನ ಇರುವುದೇ ಕನ್ನಡ ಭಾಷೆ, ಕನ್ನಡ ಲಿಪಿಯಲ್ಲಿ - ಅದೇ 7ನೆಯ ಶತಮಾನದ ಆಳುವರಸನ ವಡ್ಡರಸೆ ಶಾಸನ.
2. ಇನ್ನು ತುಳು ಲಿಪಿಯ ಶಾಸನ ಸಿಗುವುದು 12ನೆಯ ಕಾಲದಲ್ಲಿ ಕುಲಶೇಖರ ಕೆತ್ತಿಸಿದಂತಹದು. ಅಲ್ಲಿಗೆ ಮೊದಲು ಕನ್ನಡವನ್ನು ತುಳು ಪ್ರದೇಶಗಳಿಗೆ ಪರಿಚಯಿಸಿದವರು ತುಳುವರೇ ಎಂದಾಯಿತು.
3. ಇದಾದ ನಂತರ ಚೌಟರು 18ನೆಯ ಶತಮಾನದ ತನಕವೂ ತುಳುನಾಡನ್ನು ಆಳಿದರು.ಇವರು ಕೂಡಾ ತುಳುವರೇ ಆಗಿದ್ದರು. ಇವರ ಕಾಲದಲ್ಲಿ ಕನ್ನಡ ಇತ್ತೇ ? ಇತ್ತೆಂದರೆ ಅದು ಹೇಗೆ ಕನ್ನಡಿಗರ ತಪ್ಪು ?
4. 1843ರಲ್ಲಿ ಬ್ರಿಟಿಷರು ಮಂಗಳೂರು ಸಮಾಚಾರ ಎಂಬ ಕನ್ನಡ ಪತ್ರಿಕೆಯನ್ನು ಶುರು ಮಾಡಿದಾಗ ಅದನ್ನೇಕೆ ವಿರೋಧಿಸಲಿಲ್ಲ ?
5. 1858ರಲ್ಲಿ ಇದೇ ಬ್ರಿಟಿಷರು ರೊಸಾರಿಯೋ ಸ್ಕೂಲ್ ಎಂಬ ಶಾಲೆಯನ್ನು ತೆರೆದಾಗ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಮಾತ್ರವೇ ಶಿಕ್ಷಣಕ್ಕೆ ಅವಕಾಶವಿತ್ತು. ಆಗ ಏಕೆ ವಿರೋಧಿಸಲಿಲ್ಲ? ಇದಾದ ನಂತರ ಇನ್ನೂ ಹಲವಾರು ಶಾಲೆಗಳನ್ನು ತೆರೆದರೂ ಅಲ್ಲಿ ತುಳುವನ್ನು ಒಂದು ವಿಷಯವನ್ನಾಗಿ ಕೊಡಲೇ ಇಲ್ಲ. ಆಗಲೂ ಕನ್ನಡಕ್ಕೆ ಯಾವುದೇ ವಿರೋಧವಿರಲಿಲ್ಲ.
6. ಬ್ರಿಟಿಷರು 1947ರಲ್ಲಿ ಭಾರತವನ್ನು ಬಿಟ್ಟು ಹೋದರು. ನಿಮ್ಮ ತುಳು ಮಾತನಾಡುವ ಜಿಲ್ಲೆಗಳು ನಮ್ಮ ಜೊತೆ ಬಂದು ಸೇರಿದ್ದು 1956ರಲ್ಲಿ. ಈ ನಡುವೆ ಒಂಭತ್ತು ವರ್ಷಗಳಲ್ಲಿ ನಿಮ್ಮ ಜಿಲ್ಲೆಗಳಲ್ಲಿ ಎಷ್ಟು ತುಳು ಶಾಲೆಗಳನ್ನು ಕಟ್ಟಿಕೊಂಡಿರಿ ? ಆಗಲೂ ಕನ್ನಡ ಮಾಧ್ಯಮ ಶಾಲೆಗಳನ್ನು ತುಳು ಶಾಲೆಗಳನ್ನಾಗಿ ಬದಲಾಯಿಸುವ ಅವಕಾಶ ನಿಮ್ಮ ಕೈಯ್ಯಲ್ಲಿಯೇ ಇತ್ತು. ಈಗಿರುವ ಎಲ್ಲಾ ತುಳು ಮಾಧ್ಯಮ ಶಾಲೆಗಳು, ತುಳು ಸಾಹಿತ್ಯ ಅಕಾಡೆಮಿ ಹೀಗೆ ಮುಂತಾದ ವ್ಯವಸ್ಥೆಗಳೆಲ್ಲ ದೊರಕಿದ್ದು ಕರ್ನಾಟಕಕ್ಕೆ ಸೇರಿದ ಮೇಲೆಯೇ.
7. ತುಳು ಪ್ರದೇಶ ಬೆಳೆಯಲು ಬ್ಯಾಂಕಿಂಗ್ ಕ್ಷೇತ್ರದ ಪಾತ್ರ ದೊಡ್ಡದು ಎನ್ನುವುದು ಗೊತ್ತಿರುವ ವಿಷಯವೇ ಆಗಿದೆ.
1906ರಲ್ಲಿ ಕೆನರಾ ಬ್ಯಾಂಕ್
1924ರಲ್ಲಿ ಕರ್ನಾಟಕ ಬ್ಯಾಂಕ್
1925ರಲ್ಲಿ ಸಿಂಡಿಕೇಟ್ ಬ್ಯಾಂಕ್
1931ರಲ್ಲಿ ವಿಜಯ ಬ್ಯಾಂಕ್
ಈ ಎಲ್ಲಾ ಬ್ಯಾಂಕುಗಳು ಕರ್ನಾಟಕಕ್ಕೆ ತುಳು ಪ್ರದೇಶಗಳು ಬಂದು ಸೇರುವ ಮೊದಲೇ ಸ್ಥಾಪನೆಯಾಗಿವೆ. ಎಲ್ಲವೂ ಬಂದಿದ್ದು ಕನ್ನಡವನ್ನು ಬಳಸಿಕೊಂಡೇ. ಆಗ ನಿಮ್ಮ ಮೇಲೆ ಯಾವ ಕನ್ನಡಿಗರು ಕನ್ನಡವನ್ನು ಹೇರಿದ್ದರು ?
8. ಕರ್ನಾಟಕದ ಪ್ರತೀ ಊರಿನಲ್ಲಿ ಕಂಡುಬರುವ ಉಡುಪಿ ಹೋಟೆಲ್‌ಗಳು, ಬೆಂಗಳೂರಿನಲ್ಲಿ ಇರುವ ಮೀನಿನ ಹೋಟೆಲುಗಳು ಎಲ್ಲಾ ಕಡೆಯೂ ಕನ್ನಡವನ್ನು ಬಳಸಿಕೊಂಡೇ ಬೆಳೆದಂತವು. ಆಗ ಕನ್ನಡ ಬೇಕಾಗಿತ್ತು. ಈಗ ಹೇರಿಕೆ ?
9. ಕನ್ನಡಿಗರು ನಿಮಗೇನು ಮೋಸವನ್ನಂತೂ ಮಾಡಿಲ್ಲ. ನಿಮ್ಮ ಹೋಟೆಲ್, ಬ್ಯಾಂಕಿಂಗ್ ವ್ಯವಹಾರಗಳನ್ನು ಹೊರತುಪಡಿಸಿ ಎಷ್ಟೋ ಜನ ತುಳುವರು ಈಗಲೂ ಕನ್ನಡ ಸುದ್ದಿ ಮಾಧ್ಯಮಗಳು, ಕನ್ನಡ ಚಿತ್ರರಂಗ/ಕಿರುತೆರೆ, ಕನ್ನಡ ರಿಯಾಲಿಟಿ ಶೋಗಳು ಎಲ್ಲದರಲ್ಲೂ ನಿಮಗೆ ಬೇಕಾದಷ್ಟು ಪ್ರಾತಿನಿಧ್ಯ ಸಿಕ್ಕಿದೆ.
ಕನ್ನಡ ಸಂಘಟನೆಗಳು ಕೂಡಾ ಧ್ವನಿ ಎತ್ತಿದ್ದಾರೆ
ಇಷ್ಟೆಲ್ಲಾ ಇರುವಾಗ, ಕನ್ನಡವನ್ನೇ ಬಳಸಿ ಬೆಳೆದಿರುವ ನೀವು ಇದ್ದಕ್ಕಿದ್ದಂತೆಯೇ ಕನ್ನಡ ಹೇರಿಕೆ ಆಯಿತು ಎಂದರೆ ಹೇಗೆ ? ಕರ್ನಾಟಕ ಏಕೀಕರಣದ ಮೊದಲು ನಿಮ್ಮ ಮೇಲೆ ನಿಮ್ಮವರೇ ಕನ್ನಡ ಹೇರಿದ್ದು, ನೀವೇ ಹೇರಿಕೊಂಡಿದ್ದೇ ಹೊರತು ಅದರಲ್ಲಿ ಕನ್ನಡಿಗರ ಪಾಲಿಲ್ಲ. ಹಿಂದೆ ಆದದ್ದು ಆಯ್ತು.ಈಗ ಕನ್ನಡ ಹೇರಿಕೆ ಆಗುತ್ತಿದೆ ಎನಿಸಿದರೆ ನಿಮಗೆ ಅದನ್ನು ವಿರೋಧಿಸುವ ಎಲ್ಲಾ ಹಕ್ಕಿದೆ. ಈಗಲೂ ಹೆಚ್ಚಿನ ಕನ್ನಡಿಗರು ತುಳು ಭಾಷೆಗೆ 8ನೆಯ ಪರಿಚ್ಛೇದದಲ್ಲಿ ಸ್ಥಾನಮಾನ ಸಿಗಬೇಕು ಎಂದರೆ ಬೆಂಬಲಿಸುತ್ತಾರೆ. ತುಳು ಭಾಷೆಯ ಪರವಾಗಿ ಹಲವಾರು ಕನ್ನಡ ಸಂಘಟನೆಗಳು ಕೂಡಾ ಧ್ವನಿ ಎತ್ತಿದ್ದಾರೆ. ನಿಮ್ಮ ಮೇಲೆ ಕನ್ನಡ ಹೇರಬೇಕು ಎಂಬ ಉದ್ದೇಶ ಒಂದುವೇಳೆ ರಾಜ್ಯ ಸರ್ಕಾರಕ್ಕೆ ಇರಬಹುದೇ ಹೊರತು ಕನ್ನಡದ ಜನರಿಗಂತೂ ಇಲ್ಲ. ಒಂದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.
ಯಾವುದೇ ಸರ್ಕಾರಕ್ಕೆ ಆಗಲಿ ವೈವಿಧ್ಯತೆ ಇಷ್ಟವಾಗುವುದಿಲ್ಲ. ಪ್ರತಿಯೊಂದು ಸರ್ಕಾರವೂ ತನ್ನ ಪ್ರಜೆಗಳಲ್ಲಿ ಏಕರೂಪತೆ ತರಲು ಪ್ರಯತ್ನಿಸುತ್ತಲೇ ಇರುತ್ತದೆ. ಕರ್ನಾಟಕ ಸರ್ಕಾರ ನಿಮ್ಮ ಮೇಲೆ ಕನ್ನಡ ಹೇರಿಕೆ ಮಾಡುತ್ತಿದೆ ಎಂದಾದರೆ ಅದನ್ನು ನಿಮ್ಮ ನಿಮ್ಮ ಜನಪ್ರತಿನಿಧಿಗಳ ಮೂಲಕ ಬಗೆಹರಿಸಿಕೊಳ್ಳಿ. ಕನ್ನಡ ಹೇರಿಕೆ ಎಂಬ ಇಲ್ಲದ ನೆಪ ಹೇಳಿ ಸಾಮಾನ್ಯ ಕನ್ನಡಿಗರ ಮೇಲೆ ವಿಷ ಕಕ್ಕುವುದರಿಂದ ನಿಮಗೆ ಏನೂ ದಕ್ಕುವುದಿಲ್ಲ. ಈ ತೆರನಾದ ನಾಟಕಗಳಿಂದ ಕನ್ನಡ ಹೋರಾಟವನ್ನು ಮಣಿಸಬಹುದು ಎಂದುಕೊಂಡರೆ ಅವರಷ್ಟು ದೊಡ್ಡ ಮೂರ್ಖರು ಇನ್ನೊಬ್ಬರಿಲ್ಲ ಎನ್ನಬಹುದು.












Click it and Unblock the Notifications