Coastal Minerals: ಕರ್ನಾಟಕದ ಕರಾವಳಿಯಲ್ಲಿ ಶ್ರೀಮಂತವಾಗಿ ಲಭ್ಯವಿರುವ ಅಪರೂಪದ ಖನಿಜಗಳಿಗಾಗಿ ಹುಡುಕಾಟ
Coastal Minerals: ಕರ್ನಾಟಕದ ಕರಾವಳಿಯಲ್ಲಿ ಶ್ರೀಮಂತವಾಗಿ ಲಭ್ಯವಿರುವ ಅಪರೂಪದ ಖನಿಜಗಳಿಗಾಗಿ ಹುಡುಕಾಟ ನಡೆದಿದೆ. ಈ ಬಗ್ಗೆ ಹಿರಿಯ ಪತ್ರಕರ್ತರಾದ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ.
ತಲೆಯ ಮೇಲೆ ವಿಮಾನ ಹಾರಿ ಹೋಗುತ್ತಿದೆ ಎಂದರೆ... ಹೆಚ್ಚಿನಂಶ ಇನ್ನು 50 ವರ್ಷದ ಬಳಿಕದ ಕರಾವಳಿಯ ಚಿತ್ರ ಇದು. ಕರಾವಳಿಯ ಉದ್ದಕ್ಕೂ ಕೆಳಮಟ್ಟದಲ್ಲಿ ವಿಮಾನವೊಂದು ಪ್ರತಿದಿನವೆಂಬಂತೆ ಹಾರಾಡುತ್ತಿದೆ ಮತ್ತು ಅದು ಕರಾವಳಿಯಲ್ಲಿ ಶ್ರೀಮಂತವಾಗಿ ಲಭ್ಯವಿರುವ ಅಪರೂಪದ ಖನಿಜಗಳಿಗಾಗಿ ಹುಡುಕಾಟ ನಡೆಸುತ್ತಿದೆ ಎಂಬುದು ಈಗ ಬಹುತೇಕ ಎಲ್ಲರಿಗೆ ಗೊತ್ತಾಗಿದೆ. ಇಲ್ಲೊಂದು ಚಿತ್ರ ಕೊಟ್ಟಿಇದ್ದೇನೆ. ನಿನ್ನೆಯ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟಿತ ವರದಿಯ ಜೊತೆ ಇದ್ದ ಚಿತ್ರ ಇದು.

ಲ್ಯಾಟಿನ್ ಅಮೆರಿಕದ ಕೊಲಂಬಿಯಾದಲ್ಲಿ ನೇಚಿ ನದಿ (ಯಾಮೇಸಿ ಭಾಷೆಯಲ್ಲಿ ಅರ್ಥ ಚಿನ್ನದ ನದಿ ಅಂತೆ) ದಡವನ್ನು ಸಂಪೂರ್ಣವಾಗಿ ತರಿದು, ನೆಲಸಮ ಮಾಡಿ ಅಲ್ಲಿಂದ ಪಡೆದ ಚಿನ್ನದ ಅದಿರನ್ನು ಅಮೆರಿಕಕ್ಕೆ ಅಕ್ರಮವಾಗಿ ಸಾಗಿಸುವ ದಂಧೆಯ ಕುರಿತ ತನಿಖಾ ವರದಿ ಅದು. ಈ ಬಹುಪಾಲು ಅನಧಿಕೃತ ಮತ್ತು ಸ್ವಲ್ಪ ಪಾಲು ಅಧಿಕೃತ ಮೈನಿಂಗ್ ಕಾರಣಕ್ಕೆ ಆ ಇಡಿಯ ಪ್ರದೇಶ ಮಲಿನಗೊಂಡಿದೆ; ಅರಣ್ಯ ನಾಶವಾಗಿದೆ.
ನಮ್ಮಲ್ಲಿ ಗ್ರೀನ್ ಇಕಾನಮಿ ಹೆಸರಲ್ಲಿ ನೆಟ್ ಜೀರೊ ಸಾಧಿಸಲು, ಅದಕ್ಕೆ ವಿವಿಧ ಹಂತಗಳಲ್ಲಿ ಕಚ್ಛಾವಸ್ತು ಆಗಿರುವ ಅಪರೂಪದ ಖನಿಜಗಳನ್ನು ಗಣಿಗಾರಿಕೆ ಮಾಡಿ ಸಂಗ್ರಹಿಸಲು ಸರ್ಕಾರಗಳು ಸಮಗ್ರ ಸಿದ್ಧತೆಯಲ್ಲಿವೆ. ನಮ್ಮ ದುರಾದೃಷ್ಟಕ್ಕೆ, ಕರಾವಳಿಯ ಅಳಿವೆ ಬಾಗಿಲುಗಳಲ್ಲಿ (ಅರ್ಥಾತ್ ಹರಿವ ನದಿ ತಂದು ಗುಡ್ಡೆಹಾಕುವ ಮಣ್ಣಿನಲ್ಲಿ) ಮತ್ತು ಒಳನಾಡಿನಲ್ಲಿ ಈ ಅಪರೂಪದ ಖನಿಜಗಳು ವಿಪುಲವಾಗಿವೆಯಂತೆ.
ಈಗಾಗಲೇ, ಇಲ್ಲಿ ಸಮುದ್ರ ತೀರದಲ್ಲಿ ಮತ್ತು ಒಳನಾಡಿನಲ್ಲಿ ವಿವಿಧ ಯೋಜನೆಗಳ ಹೆಸರಿನಲ್ಲಿ ಈ ಸಮೃದ್ಧವಾದ ನೆಲವನ್ನು ಜನವಸತಿಗೆ ಸಂಪೂರ್ಣವಾಗಿ ಅಯೋಗ್ಯಗೊಳಿಸುವ ಕೆಲಸ ಇಂಚಿಂಚಾಗಿ ನಡೆಯುತ್ತಿದೆ. ನಿಧಾನಕ್ಕೆ ಇಲ್ಲಿ ಅಪರೂಪದ ಖನಿಜಗಳ ಗಣಿಗಾರಿಕೆ ಆರಂಭ ಆಗಲಿದೆ. ಈಗಾಗಲೇ ಮರಳು ಗಣಿಗಾರಿಕೆಯ ಹೆಸರಲ್ಲಿ- ಆಳಸಮುದ್ರ ಮೀನುಗಾರಿಕೆಯ ಹೆಸರಲ್ಲಿ ಮಾಫಿಯಾ-ಗೂಂಡಾಗರ್ದಿ, ಭ್ರಷ್ಟಾಚಾರ ಎಲ್ಲವೂ ಇಲ್ಲಿ ಒಳಹೊಕ್ಕಾಗಿದೆ. ಅವರದೇ ಸಾಮ್ರಾಜ್ಯ ಆದಮೇಲೆ ಏನೇನಾಗಬಹುದು ಎಂಬ ಅನುಭವ ಈಗ ನಮ್ಮಲ್ಲಿ ಕೆಲವರಿಗಾದರೂ ಪ್ರತ್ಯಕ್ಷವಾಗಿ ಸಿಕ್ಕಿದೆ. ನಿಧಾನಕ್ಕೆ ಎಲ್ಲರ ಅನುಭವಕ್ಕೂ ಬರಲಿದೆ.
ಕರಾವಳಿಯನ್ನು ಆನಿ ನುಂಗಿಕೊಂಡು ಹೋದ ಬಳಿಕ ಕರಾವಳಿ ಹೇಗಿರಲಿದೆ ಎಂಬುದನ್ನು ನೋಡಲಿಕ್ಕೆ ಹೆಚ್ಚಿನಂಶ ನಾನು-ನೀವು ಇರಲಾರೆವು. ಈಗಲೇ ಈ ಚಿತ್ರ ನೋಡಿ ಕಣ್ಣು ತುಂಬಿಕೊಂಡುಬಿಡಿ. ಯಾಕೆಂದರೆ, ಅಪರೂಪದ ಖನಿಜಗಳ ಗಣಿಗಾರಿಕೆಗೂ ಚಿನ್ನದ ಗಣಿಗಾರಿಕೆಗೂ ತಾಂತ್ರಿಕ್ವಾಗಿ ಹೆಚ್ಚು ವ್ಯತ್ಯಾಸ ಇಲ್ಲವಂತೆ!
ಇವೆಲ್ಲ ಒಂದು ವಿಸ್ತ್ರತ ನೀಲನಕಾಶೆಯ ಪ್ರಕಾರವೇ ನಡೆಯುತ್ತಿರುವಂತಿದೆ. ಯಾಕೆಂದರೆ, ಸಣ್ಣ ಸಣ್ಣ ವಿಷಯಗಳಿಗೂ ನೂರು ಪ್ರಶ್ನೆ ಕೇಳಿ, ಅತಿ ಬುದ್ಧಿವಂತ ತರ್ಲೆಗಳು ಅನ್ನಿಸಿಕೊಂಡಿದ್ದ ಕರಾವಳಿ ಈಗ ಮಾತು ಮರೆತಿದೆ. ಎರಡು ಮೂರು ಬೇರೆ ಬೇರೆ ನಶೆಗಳನ್ನು ತಲೆಗೇರಿಸಿಕೊಂಡಿರುವ ನಮಗೀಗ ಅಮಲು ಪೂರ್ಣ ಹತ್ತಿದೆ. ಅಮಲಿಳಿಯದಂತೆ ಆಳುವವರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದಾರೆ.
ಸಕಾಲದಲ್ಲಿ ಎಚ್ಚರಗೊಂಡರೆ ಬಚಾವಾಗುತ್ತೀರಿ. ಇಲ್ಲದಿದ್ದರೆ ಕುಸಿದು ಬಿದ್ದು ಸಾವಿಗೆ ನಮ್ಮ ಸರದಿ ಯಾವಾಗ ಎಂದು ಕಾಯುತ್ತಿರಿ.
ಬರಹ: ರಾಜಾರಾಂ ತಲ್ಲೂರು












Click it and Unblock the Notifications