ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಕುರಿತು ತಜ್ಞರ ಜತೆ ಸಿಎಂ ಯಡಿಯೂರಪ್ಪ ಸಭೆ: ಪ್ರಮುಖಾಂಶಗಳು
ಬೆಂಗಳೂರು, ಮಾರ್ಚ್ 15: ಕರ್ನಾಟಕದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಆರೋಗ್ಯ ತಜ್ಞರ ಜತೆ ಸಭೆ ನಡೆಸಿದರು.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ, ಕೋವಿಡ್ ಪರಿಸ್ಥಿತಿ ಅವಲೋಕನ ನಡೆಸಿ ತಜ್ಞರ ಜೊತೆ ಸಮಾಲೋಚನೆ ನಡೆಸಲಾಗಿದೆ.
ತಜ್ಞರ ಅಭಿಪ್ರಾಯದಂತೆ 14 ದಿನಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಮರಣ ಪ್ರಮಾಣ ಕಡಿಮೆ ಇದೆ. ಬೀದರ್ ಕಲಬುರಗಿ, ಬೆಂಗಳೂರುಗ್ರಾಮಾಂತರ ಉಡುಪಿ ತುಮಕೂರು,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ ಕೋವಿಡ್ ಎರಡನೆ ಅಲೆಯ ಭೀತಿಗೆ ಲಸಿಕೆ ಕಾರ್ಯಕ್ರಮ ಹೆಚ್ಚಳ ಮಾಡಬೇಕಿದೆ ಎಂದರು.
ಸಭೆಯಲ್ಲಿ ಕೇರಳ ಮತ್ತು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರಿಗೆ ಆರ್ ಟಿಪಿಸಿಆರ್ ಟೆಸ್ಟ್ , ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಪಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಮಾಸ್ಕ್ ಧರಿಸದಿದ್ದರೆ ದಂಡ ಹೆಚ್ಚಳ ಹಾಗೂ ಲಸಿಕೆಯನ್ನು ಇನ್ನಷ್ಟು ಹೆಚ್ಚಿಸುವುದು ಸೇರಿದಂತೆ ಇತರೆ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಯಿತು.

ಶೇ.50ರಷ್ಟು ಆರೋಗ್ಯ ಸಿಬ್ಬಂದಿಗೆ ಲಸಿಕೆ ಹಾಕಲಾಗಿದೆ
ಆರೋಗ್ಯ ಸಿಬ್ಬಂದಿ ಹಾಗೂ ಇತರೆ ಸಿಬ್ಬಂದಿಗಳಿಗೆ ಶೇ.50 ರಷ್ಟು ಲಸಿಕೆ ಹಾಕಲಾಗಿದೆ. ಕೋವಿಡ್ ಅನ್ನು ನಿಯಂತ್ರಿಸುವ ಸಂಬಂಧ ಮತದಾರರ ಪಟ್ಟಿಯನ್ನಾಧರಿಸಿ ಕೋವಿಡ್ ಲಸಿಕೆ ನೀಡಲು ಸಿದ್ಧತೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಮಾಸ್ಕ್ ಹಾಕದವರಿಗೆ ದಂಡ ವಿಧಿಸುವುದು ಅನಿವಾರ್ಯ
ಮಾಸ್ಕ್ ಹಾಕದವರಿಗೆ ದಂಡ ವಿಧಿಸುವುದು ಅನಿವಾರ್ಯ. ಮದುವೆ ಮತ್ತು ಧಾರ್ಮಿಕ ,ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಂಖ್ಯೆಯನ್ನು 500 ಜನಕ್ಕೆ ಮಿತಿ ಗೊಳಿಸುವುದು. ರೋಗಿಗಳು ಮತ್ತು ಸಂಪರ್ಕಿತರನ್ನು ಪತ್ತೆ ಹಚ್ಚುವುದು, ಕೋವಿಡ್ ಆಸ್ಪತ್ರೆಗೆ ಸಿದ್ದತೆ ಮಾಡಿಕೊಳ್ಳುವುದು, ಹಿರಿಯ ನಾಗರಿಕರಿಗೆ ಲಸಿಕೆಯನ್ನು ಹೆಚ್ಚಿಸಲಾಗುವುದು.

ಕೋವಿಡ್ ಜಾಗೃತಿಗೆ ಸೇವಾ ಸಂಸ್ಥೆಗಳ ಬಳಕೆ
ಕೋವಿಡ್ ಕುರಿತ ಜಾಗೃತಿಗೆ ಸಾಮಾಜಿಕ ಸೇವಾ ಸಂಸ್ಥೆಗಳಾದ ರೋಟರಿ, ಲಯನ್ಸ್ ಸಂಸ್ಥೆಗಳನ್ನು ಬಳಸಿಕೊಂಡು ಜನರಿಗೆ ಲಸಿಕೆ ಹಾಗೂ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುವುದು.ತಾಂತ್ರಿಕ ಸಲಹಾ ಸಮಿತಿ ನೀಡಿದ ಸಲಹೆ ಮೇರೆಗೆ ಪಕ್ಕದ ಮಹಾರಾಷ್ಟ್ರ ಮತ್ತು ಕೇರಳದಿಂದ ರಾಜ್ಯಕ್ಕೆ ಬರುವವರ ಮೇಲೆ ಕಟ್ಟುನಿಟ್ಟಾದ ನಿಗಾ ವಹಿಸುವುದಾಗಿ ಸಿಎಂ ಸ್ಪಷ್ಟಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಜತೆ ಸಿಎಂಗಳ ಚರ್ಚೆ
ಇದೇ ಮಾರ್ಚ್ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೋವಿಡ್ ಸಂಬಂಧ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಾಗುತ್ತಿದ್ದು, ಮಾಸ್ಕ್ ಧರಿಸದಿದ್ದರೆ ದಂಡ ಪಾವತಿಯನ್ನು 250 ರೂ.ಗೆ ಹೆಚ್ಚಿಸುವ ಬಗ್ಗೆ ಇನ್ನು ನಾಲ್ಕೈದು ದಿನಗಳಲ್ಲಿ ಮತ್ತೆ ಹೆಚ್ಚಳದ ಬಗ್ಗೆ ಸಭೆ ನಡೆಸಿ ತೀರ್ಮಾನಿಸಲಾಗುವುದು.ಇದಕ್ಕೆ ಜನರ ಸಹಕಾರ ನೀಡುವಂತೆ ಸಿಎಂ ಮನವಿ ಮಾಡಿದರು.

ಇತರೆ ಪ್ರಮುಖಾಂಶಗಳು
- ಕಳೆದ 14 ದಿನಗಳಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಾಗಿದೆ. ಮರಣ ಪ್ರಮಾಣ ಕಡಿಮೆಯಾಗಿದೆ.
- ಬೀದರ್, ಕಲಬುರಗಿ, ಬೆಂಗಳೂರು ಗ್ರಾಮಾಂತರ,ಉಡುಪಿ, ತುಮಕೂರು, ದಕ್ಷಿಣ ಕನ್ನಡ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಾಗಿದೆ.
- ಇದು ಕೋವಿಡ್ 19ರ ಎರಡನೇ ಅಲೆಯ ಮುನ್ಸೂಚನೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
- ಹೆಚ್ಚು ಪಾಸಿಟಿವಿಟಿ ರೇಟ್ ಇರುವ ಜಿಲ್ಲೆಗಳಲ್ಲಿ ಲಸಿಕೆ ಪ್ರಮಾಣ ಹೆಚ್ಚಿಸಬೇಕಾಗಿದೆ ಎಂದು ಅಧಿಕಾರಿಗಳು ಸಲಹೆ ನೀಡಿದರು.
- ಮತದಾರರ ಪಟ್ಟಿಯನ್ನು ಆಧರಿಸಿ, ಹಿರಿಯ ನಾಗರಿಕರನ್ನು ಗುರುತಿಸಿ, ಲಸಿಕೆ ಹಾಕುವುದು.
- ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯ ಹಿರಿಯ ನಾಗರಿಕರಿಗೆ ಲಸಿಕೆ ಕೊಡಿಸಲು ಕ್ರಮ ವಹಿಸುವುದು.
- ಕೋವಿಡ್ ನಿಯಂತ್ರಣಕ್ಕಾಗಿ ಹೆಚ್ಚು ಪಾಸಿಟಿವಿಟಿ ರೇಟ್ ಇರುವ ಜಿಲ್ಲೆಗಳಲ್ಲಿ ಕೈಗೊಳ್ಳುವ ಮುನ್ನೆಚ್ಚರಿಕೆಯ ಕ್ರಮಗಳ ಕುರಿತು ತಾಂತ್ರಿಕ ಸಲಹಾ ಸಮಿತಿ ಮಾಡಿರುವ ಸಲಹೆಗಳು ಹೀಗಿವೆ:
- ಪರೀಕ್ಷೆಯ ಪ್ರಮಾಣ ಹೆಚ್ಚಿಸುವುದು, ವಿಶೇಷವಾಗಿ ರೋಗ ಲಕ್ಷಣ ಇರುವವರು, ಅಂಗಡಿ ಮಾಲೀಕರು, ಬಸ್ ನಿರ್ವಾಹಕರು ಮತ್ತಿತರರಿಗೆ ಪರೀಕ್ಷೆ ನಡೆಸುವುದು.












Click it and Unblock the Notifications