ಚಾಮರಾಜನಗರಕ್ಕೆ ಹೊರಟು ನಿಂತರು ಸಿದ್ದರಾಮಯ್ಯ!
ಚಾಮರಾಜನಗರ, ಸೆ.24 : ಮುಖ್ಯಮಂತ್ರಿಗಳ ಪಾಲಿಗೆ ಶಾಪಗ್ರಸ್ತ ಜಿಲ್ಲೆ ಎಂದೇ ಬಿಂಬಿಸಲಾಗುವ ಚಾಮರಾಜನಗರ ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲು ಮುಹೂರ್ತ ನಿಗದಿಯಾಗಿದೆ. ಅ.7ರಂದು ಸಿಎಂ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್.ಮಹದೇವಪ್ರಸಾದ್, ಅ.7ರಂದು ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ರಾಜ್ಯ ಸರ್ಕಾರದ ನೂತನವಾಗಿ ಜಾರಿಗೆ ತರಲಿರುವ 40 ವರ್ಷ ದಾಟಿದ ಮಹಿಳೆಯರಿಗೆ ಮಾಸಾಶನ ನೀಡುವ 'ಮನಸ್ವಿನಿ' ಯೋಜನೆಗೆ ಸಿದ್ದರಾಮಯ್ಯ ಚಾಮರಾಜನಗರದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಸಚಿವರು ವಿವರಿಸಿದರು.
ಜಿಲ್ಲೆಯ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸಿದ್ದರಾಮಯ್ಯ ಅ.7ರಂದು ಚಾಲನೆ ನೀಡಲಿದ್ದು, ನಂತರ ಸಾರ್ವಜನಿಕರ ಸಮ್ಮುಖದಲ್ಲೇ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯನ್ನೂ ನಡೆಸಲಿದ್ದಾರೆ ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಐದು ತಿಂಗಳು ಕಳೆದಿದ್ದರೂ, ಸಿಎಂ ಸಿದ್ದರಾಮಯ್ಯ ಚಾಮರಾಜನಗರಕ್ಕೆ ಭೇಟಿ ನೀಡಿರಲಿಲ್ಲ. ಇದನ್ನೆ ಅಸ್ತವಾಗಿ ಮಾಡಿಕೊಂಡ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಅವರಿಗೆ ಜಿಲ್ಲೆಗೆ ಭೇಟಿ ನೀಡುವಂತೆ ಸವಾಲು ಹಾಕಿದ್ದರು. (ಸಿದ್ದರಾಮಯ್ಯಗೆ ಜಗದೀಶ್ ಶೆಟ್ಟರ್ ಓಪನ್ ಚಾಲೇಂಜ್)
ಶೆಟ್ಟರ್ ಸವಾಲನ್ನು ಸ್ವೀಕರಿಸಿದ ಸಿದ್ದರಾಮಯ್ಯ ನನಗೆ ಯಾವುದೇ ಮೂಡನಂಬಿಕೆ ಇಲ್ಲ, ಚಾಮರಾಜನಗರಕ್ಕೆ ಭೇಟಿ ನೀಡಿದ್ದರಿಂದಲೇ ಸಿಎಂ ಆಗಿದ್ದೇನೆ ಶೀಘ್ರವೇ ಜಿಲ್ಲೆಗೆ ಭೇಟಿ ನೀಡಲಿದ್ದೇನೆ ಎಂದು ಘೋಷಿಸಿದ್ದರು. ಸದ್ಯ ಅ.7ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. (ಚಾಮರಾಜನಗರಕ್ಕೆ ಹೋಗ್ತಾರಂತೆ ಸಿದ್ದರಾಮಯ್ಯ!)
ಸಿದ್ದರಾಮಯ್ಯ ಅವರ ಚಾಮರಾಜನಗರ ಭೇಟಿಯ ನಂತರ ಅವರ ಮುಖ್ಯಮಂತ್ರಿ ಸ್ಥಾನ ಉಳಿದು, ಜಿಲ್ಲೆಗೆ ಅಂಟಿರುವ ಕಳಂಕ ದೂರವಾಗುವುದೇ ಎಂದು ಕಾದು ನೋಡಬೇಕು. ರಾಜ್ಯದ ಮುಂದಿನ ಮುಖ್ಯಮಂತ್ರಿಗಳು ಜಿಲ್ಲೆಗೆ ಯಾವುದೇ ಅಳುಕಿಲ್ಲದೆ ತೆರಳುವಂತಾಗಬೇಕು.












Click it and Unblock the Notifications