ಶನಿವಾರ ಸಚಿವ ಸಂಪುಟ ವಿಸ್ತರಣೆ; ಯಾರನ್ನು ಸೇರಿಸಿಕೊಳ್ಳುವುದು ಸಿಎಂಗೆ ಬಿಟ್ಟ ವಿಚಾರ; ರಣದೀಪ್ ಸುರ್ಜೇವಾಲ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಒಂದು ವಾರ ಕಳೆಯುತ್ತಾ ಬಂದರೂ, ಇನ್ನೂ ಸಂಪೂರ್ಣ ಸಚಿವ ಸಂಪುಟ ವಿಸ್ತರಣೆಯಾಗದೆ, ಖಾತೆಯೂ ಹಂಚಿಕೆಯಾಗದೆ ಕೇವಲ ಜಟಾಪಟಿಯಲ್ಲೇ ಕಾಲಹರಣ ಮಾಡುತ್ತಿದೆ. ಇದರಿಂದ ಗ್ಯಾರಂಟಿ ಯೋಜನೆಗಳ ತೀವ್ರ ನಿರೀಕ್ಷೆಯಲ್ಲಿರು ರಾಜ್ಯದ ಜನರು ಬೇಸರ ವ್ಯಕ್ತಪಡಿಸಿದ್ದಾರೆ.
ಮೇ 20ರಂದು ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ.ಕೆ. ಶಿವಕುಮಾರ್ ಜೊತೆ 8 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸರ್ಕಾರ ರಚಿಸಿ ಒಂದು ವಾರ ಕಳೆದರೂ ಇನ್ನೂ ಯಾರೋಬ್ಬರಿಗೂ ಖಾತೆ ಹಂಚಿಕೆ ಮಾಡಿಲ್ಲ.

ಇದೀಗ ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದು, ತಮ್ಮ ತಮ್ಮ ಆಪ್ತರಿಗೆ ಸಚಿವ ಸ್ಥಾನ ಕೊಡಿಸಲು ಪಟ್ಟು ಹಿಡಿದಿದ್ದಾರೆ.
ಈಗಾಗಲೇ 24 ನೂತನ ಸಚಿವರ ಪಟ್ಟಿಯನ್ನು ಕಾಂಗ್ರೆಸ್ ವರಿಷ್ಠರು ಫೈನಲ್ ಮಾಡಿದ್ದು, ಕೆಲವೇ ಕ್ಷಣಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ನಾಳೆ (ಶನಿವಾರ, ಮೇ 27) ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸ್ವೀಕಾರಕ್ಕೆ ಕಾರ್ಯಕ್ರಮ ನಿಗದಿಯಾಗಿದೆ.

ಇದೇ ವೇಳೆ ದೆಹಲಿಯಲ್ಲಿ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, "ಸಂಪುಟದಲ್ಲಿ ಯಾರನ್ನು ಸೇರಿಸಿಕೊಳ್ಳಬೇಕು ಎಂಬುದು ಸಿಎಂ ಸಿದ್ದರಾಮಯ್ಯ ಅವರು ನಿರ್ಧಾರ ಮಾಡುತ್ತಾರೆ. ಹಲವು ಹೆಸರುಗಳನ್ನು ಅವರು ಹೈಕಮಾಂಡ್ ಮುಂದಿಟ್ಟಿದ್ದಾರೆ. ಎಲ್ಲವೂ ಸಿಎಂ ವಿವೇಚನೆಗೆ ಬಿಟ್ಟ ವಿಚಾರ. ಶನಿವಾರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ," ಎಂದು ತಿಳಿಸಿದರು.
ಶುಕ್ರವಾರ ರಾತ್ರಿ ವೇಳೆಗೆ ಸಚಿವ ಸಂಪುಟ ವಿಸ್ತರಣೆ ಜಟಾಪಟಿಗೆ ತೆರೆ ಬೀಳಲಿದ್ದು, ಯಾವ ಶಾಸಕರಿಗೆ ಅದೃಷ್ಟ ಒಲಿಯಲಿದೆ ಮತ್ತು ಇದಾದ ನಂತರ ಸಚಿವ ಸ್ಥಾನ ವಂಚಿತ ಶಾಸಕರ ಅಸಮಾಧಾನವನ್ನು ಹೇಗೆ ತಣಿಸಲಿದ್ದಾರೆ ಎಂವುದನ್ನು ಕಾದು ನೋಡಬೇಕಿದೆ. ಆ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಹಂಚಿಕೆಯ ಬಗ್ಗೆಯೂ ಮತ್ತೊಂದು ಸುತ್ತಿನ ಜಟಾಪಟಿಗೆ ರಾಜ್ಯದ ಜನರು ಸಾಕ್ಷಿಯಾಗಲಿದ್ದಾರೆ.
ಸಿಎಂ ಸಿದ್ದರಾಮಯ್ಯ ಬೆಂಗಳೂರಿಗೆ ವಾಪಸ್
ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗೆ ಸಚಿವ ಸಂಪುಟ ಕುರಿತು ಅಂತಿಮ ಸುತ್ತಿನ ಚರ್ಚೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾರೆ. ಇಂದು (ಶುಕ್ರವಾರ, ಮೇ 26) ರಾತ್ರಿಯೊಳಗೆ ನಾಳೆ ಪ್ರಮಾಣ ವಚನ ಕಾರ್ಯಕ್ರಮದ ಬಗ್ಗೆ ಸಂಭವನೀಯ ಸಚಿವರಿಗೆ ಕರೆ ಮಾಡುವ ಸಾಧ್ಯತೆ ಇದೆ. ಅಲ್ಲದೇ ರಾತ್ರಿಯೊಳಗಾಗಿ ಸಚಿವ ಸಂಪುಟದ ಪಟ್ಟಿ ಅಧಿಕೃತವಾಗಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.












Click it and Unblock the Notifications