ಕಲೆ ಮತ್ತು ಕಲೆಗಾರ! ಪ್ರಧಾನಿ ನರೇಂದ್ರ ಮೋದಿ ಕಾಲೆಳೆದ ಸಿಎಂ ಸಿದ್ದರಾಮಯ್ಯ
ಚಿಕ್ಕಬಳ್ಳಾಪುರದಲ್ಲಿ ಡಾ. ಸುಧಾಕರ್ ಪರವಾಗಿ ಚುನಾವಣಾ ಪ್ರಚಾರ ಮಾಡಲು ಬಂದಿರುವ ಪ್ರಧಾನಿ ಮೋದಿ ಅವರಿಗೆ ಹೆಚ್‌ಡಿ ದೇವೇಗೌಡ ಕೂಡ ಜೊತೆಯಾಗಿದ್ದರು. ರಾಜ್ಯಕ್ಕೆ ಬಂದಿರುವ ಪ್ರಧಾನಿ ಮೋದಿ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಕಾಂಗ್ರೆಸ್ ಶನಿವಾರದ ದಿನಪತ್ರಿಕೆಯಲ್ಲಿ ನೀಡಿರುವ 'ಚೊಂಬು' ಜಾಹೀರಾತನ್ನು ದೇವೇಗೌಡರು ಪ್ರಧಾನಿ ಮೋದಿ ಅವರಿಗೆ ತೋರಿಸುತ್ತಿರುವ ಚಿತ್ರವನ್ನು ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ ಹೆಚ್‌ಡಿ ದೇವೇಗೌಡರು ಕಲೆಗಾರನಿಗೆ ಕಲೆಯನ್ನು ತೋರಿಸುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ.

ಸರಣಿ ಟ್ವೀಟ್ ಮೂಲಕ ಪ್ರಶ್ನೆ
ಮಾತ್ರವಲ್ಲದೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ. "ನಾನು ತಿನ್ನಲ್ಲ ತಿನ್ನುವದಕ್ಕೂ ಬಿಡಲ್ಲ" ಎಂದು ಘೋಷಣೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರೇ ಇಂದು ಚಿಕ್ಕಬಳ್ಳಾಪುರಕ್ಕೆ ಬಂದು ನೀವು ಪ್ರಚಾರ ಮಾಡಿದ ಬಿಜೆಪಿ ಅಭ್ಯರ್ಥಿ ಡಾ. ಸುಧಾಕರ್ ಅವರಿಗೆ ಕೊರೊನಾ ಕಾಲದಲ್ಲಿ ಎಷ್ಟು ನುಂಗಿದ್ದೀರಿ ಎಂದು ಕೇಳಿದ್ರಾ? ಎಂದು ಪ್ರಶ್ನೆ ಮಾಡಿದ್ದಾರೆ.
Shri Devegowda showing the Art to the Artist!!#BJPChombuSarkara pic.twitter.com/mcr72k5rZt
— Siddaramaiah (@siddaramaiah) April 20, 2024
ಕೊರೊನಾ ಹೆಸರಲ್ಲಿ ಆಗಿನ ಆರೋಗ್ಯ ಸಚಿವ ಡಾ.ಸುಧಾಕರ್ 40,000 ಕೋಟಿ ರೂಪಾಯಿ ನುಂಗಿದ್ದಾರೆ ಎಂದು ಆರೋಪಿಸಿದ್ದು ನಾವಲ್ಲ, ನಿಮ್ಮದೇ ಪಕ್ಷದ ಶಾಸಕರಾದ ಬಸನಗೌಡ ಪಾಟೀಲ್. ಅಷ್ಟೊಂದು ದುಡ್ಡನ್ನು ಡಾ.ಸುಧಾಕರ್ ಒಬ್ಬರೇ ನುಂಗಿದ್ರಾ? ಒಂದು ಪಾಲು ಮೇಲ್ಗಡೆಗೂ ಹೋಗಿತ್ತಾ? ಎಂದು ಕೇಳಿದ್ದಾರೆ.
ಚಾಮರಾಜ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಅಮಾಯಕ ಜನ ಆಕ್ಷಿಜನ್ ಇಲ್ಲದೆ ನರಳಾಡುತ್ತಿರುವಾಗ ಆರೋಗ್ಯ ಸಚಿವ ಡಾ. ಸುಧಾಕರ್ ನಾಪತ್ತೆಯಾಗಿದ್ದರು. ಆಕ್ಸಿಜನ್ ಇಲ್ಲದೆ ಸಾವಿಗೀಡಾದ 36 ಮಂದಿಯ ಕುಟುಂಬ ರೋಧಿಸುತ್ತಿದ್ದರೆ, ಡಾ.ಸುಧಾಕರ್ ಸ್ಥಳಕ್ಕೆ ಭೇಟಿ ನೀಡದೆ ಬೆಂಗಳೂರಿನಲ್ಲಿಯೇ ಕೂತು "ಸತ್ತವರು ಎರಡೇ ಮಂದಿ" ಎಂಬ ಉಡಾಫೆಯಿಂದ ಹೇಳಿಕೆ ನೀಡಿ ರಾಜ್ಯದ ಜನರಿಂದ ಛೀಮಾರಿಗೀಡಾಗಿದ್ದರು. ಈ ಸಾಧನೆಯನ್ನೂ ಅವರ ಪ್ರಚಾರದ ಭಾಷಣದಲ್ಲಿ ಹೇಳಬೇಕಾಗಿತ್ತಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಆರೋಗ್ಯ ಸಚಿವರ ಬ್ರಹ್ಮಾಂಡ ಭ್ರಷ್ಟಾಚಾರದ ಕತೆ ಕೇಳಿ ಇಡೀ ರಾಜ್ಯ ಬೆಚ್ಚಿ ಬಿದ್ದಿತ್ತು.
45 ರೂಪಾಯಿಗೆ ಮಾರುಕಟ್ಟೆಯಲ್ಲಿ ಸಿಗುತ್ತಿದ್ದ ಮಾಸ್ಕ್‌ನ್ನು 485 ರೂ. ಗೆ ಖರೀದಿಸಿದ್ದರು. ತಮಿಳುನಾಡು ಸರ್ಕಾರ ವೆಂಟಿಲೇಟರ್ ಒಂದಕ್ಕೆ ರೂ. 4.78 ಲಕ್ಷ ನೀಡಿದ್ದರೆ ಬಿಜೆಪಿ ಸರ್ಕಾರ ಸರ್ಕಾರ 15 ರಿಂದ 18 ಲಕ್ಷ ರೂ. ನೀಡಿ ಖರೀದಿಸಿತ್ತು. 80 ರೂ. ಸ್ಯಾನಿಟೈಸರ್ ಗೆ 250 ರೂ. ಕೊಟ್ಟು ಖರೀದಿಸಿದ್ದರು. ದಾಖಲೆಗಳ ಸಹಿತ ಈ ಭ್ರಷ್ಟಾಚಾರವನ್ನು ನಾವು ಬಯಲಿಗೆಳೆದದ್ದು ನೀವು ಗಮನಿಸಿರಲಿಲ್ಲವೇ?
ಬೆಡ್ ಕೊರತೆಯ ಕಾರಣ ನೀಡಿ 30 ಸಾವಿರ ಬೆಡ್ ಗಳನ್ನು ನೂರು ದಿನಗಳಿಗಾಗಿ ಒಟ್ಟು 240 ಕೋಟಿ ರೂಪಾಯಿ ಬಾಡಿಗೆ ನೀಡಿ ತರಿಸಿಕೊಂಡಿದ್ದರು. ಬಾಡಿಗೆಗೆ ಪಡೆಯುವ ಬದಲಿಗೆ ಹೊಸ ಬೆಡ್ ಗಳನ್ನು ಖರೀದಿಸಿದ್ದರೆ 21 ಕೋಟಿ ರೂಪಾಯಿಯಷ್ಟೇ ಖರ್ಚಾಗುತ್ತಿತ್ತು. 240 ಕೋಟಿ ರೂಪಾಯಿ ಬೆಡ್ ಬಾಡಿಗೆಯಲ್ಲಿ ಎಷ್ಟು ಪಾಲು ಯಾರ ಜೇಬಿಗೆ ಹೋಗಿತ್ತು ಎಂದು ಡಾ. ಸುಧಾರಕರ್ ಅವರನ್ನು ಕೇಳಬೇಕಿತ್ತಲ್ಲಾ ಮೋದಿ ಅವರೇ ಎಂದಿದ್ದಾರೆ.
ಡಾ.ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರ 76,000 ಕೋಟಿ ರೂಪಾಯಿಗಳಷ್ಟು ರೈತರ ಸಾಲವನ್ನು ಮನ್ನಾ ಮಾಡಿತ್ತು. ಆದರೆ ನೀವು ನಿಮ್ಮ ಸ್ನೇಹಿತರಾದ ವಂಚಕ ಉದ್ಯಮಿಗಳಿಗೆ ಸೇರಿರುವ 16 ಲಕ್ಷ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿದಿರಿ. ಆದರೆ ಅದೇ ಬ್ಯಾಂಕ್ ಗಳಲ್ಲಿರುವ ರೈತರ ಸಾಲ ಮನ್ನಾ ಮಾಡಬೇಕೆಂದು ನಿಮಗೆ ಅನಿಸಲೇ ಇಲ್ಲವೇ ಎಂದು ಟೀಕಿಸಿದ್ದಾರೆ.












Click it and Unblock the Notifications