ಕನ್ನಡ - ಇಂಗ್ಲಿಷ್ ಸಾಕು ಸಿಎಂ ಸಿದ್ದರಾಮಯ್ಯ: ಸರ್ವಾಧಿಕಾರಿ ನೀತಿ ಎಂದ ಉದ್ಯಮಿ ಮೋಹನ್‌ದಾಸ್ ಪೈ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದ್ವಿಭಾಷಾ ನೀತಿಯ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ನಾನು ವೈಯಕ್ತಿಕವಾಗಿ ದ್ವಿಭಾಷಾ ನೀತಿಯ ಪರವಾಗಿಯೇ ಇದ್ದೇನೆ. ಹಿಂದಿ ನಮ್ಮ ರಾಷ್ಟ್ರೀಯ ಭಾಷೆ ಅಲ್ಲ ಎಂದು ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದರು. ಆದರೆ ಇದಕ್ಕೆ ಇದೀಗ ಉದ್ಯಮಿ ಮೋಹನ್ ದಾಸ್ ಪೈ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಮೋಹನ್ ದಾಸ್‌ಪೈ ಅವರು ಹಿಂದಿ ಭಾಷೆ ಹೇರಿಕೆ ಪರವಾಗಿ ಮಾತನಾಡಿದ್ದಾರೆ ಎಂದು ಕನ್ನಡಿಗರು ವಿರೋಧಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಉದ್ಯಮಿ ಮೋಹನ್‌ದಾಸ್ ಪೈ ಅವರು, ದಯವಿಟ್ಟು ನಿಮ್ಮ ವೈಯಕ್ತಿಕ ಕಾರ್ಯಸೂಚಿಯನ್ನು ಕರ್ನಾಟಕದ ಜನರ ಮೇಲೆ ಹೇರಬೇಡಿ. ಮಕ್ಕಳು ನಿಮ್ಮ ಪೂರ್ವಾಗ್ರಹದ ಪರಿಣಾಮಗಳನ್ನು ಅನುಭವಿಸುತ್ತಾರೆ. ನಾವು ತ್ರಿಭಾಷಾ ನೀತಿಯನ್ನು ಚೆನ್ನಾಗಿ ಮಾಡಿದ್ದೇವೆ ಮತ್ತು ಎಲ್ಲರೂ ಹೆಚ್ಚು ಕ್ರಿಯಾಶೀಲರಾಗಿ ಪ್ರಯೋಜನ ಪಡೆದಿದ್ದಾರೆ. ನೀವು ಮುಂದೆ ಎಲ್ಲಾ ಸಮಯದಲ್ಲೂ ನಮ್ಮ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳೇ, ನಿಮಗೆ ನಮ್ಮ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ, ದಯವಿಟ್ಟು ಶಾಲೆಯಲ್ಲಿ ಮಕ್ಕಳ ಪೋಷಕರಿಗೆ 2 ಅಥವಾ 3 ಭಾಷಾ ನೀತಿ ಬೇಕೇ ಎನ್ನುವ ಆಯ್ಕೆಯನ್ನು ಬಿಡಿ ಎಂದು ಹೇಳಿದ್ದಾರೆ.

ಮುಂದುವರಿದು ಭಾಷೆ ಆಯ್ಕೆಯ ವಿಚಾರವನ್ನು ಪೋಷಕರಿಗೆ ನೀಡಿ, ಅವರಿಗಾಗಿ ನೀವು ನಿರ್ಧರಿಸಬೇಡಿ. ಪೋಷಕರು ನಿರ್ಧರಿಸಲಿ ಎಂದಿದ್ದಾರೆ. ನೀವು ತುಂಬಾ ಕಾಳಜಿ ಹೊಂದಿದ್ದರೆ, ತಮ್ಮ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಪೋಷಕರ ಮೇಲೆ ನಿಮ್ಮ ಅಭಿಪ್ರಾಯಗಳನ್ನು ಏಕೆ ಹೇರುತ್ತಿದ್ದೀರಿ. ಇದು ಪ್ರಜಾಪ್ರಭುತ್ವವಾಗಲ್ಲ ಸರ್ವಾಧಿಕಾರಿ ನೀತಿ ಆಗುತ್ತದೆ.
ನೀವು ತುಂಬಾ ಕಾಳಜಿ ಹೊಂದಿದ್ದರೆ, ತೃತೀಯ ಭಾಷೆಯಲ್ಲಿ ಫೇಲ್ ಆಗಿರುವ 10 ಮತ್ತು 12 ನೇ ತರಗತಿಯಲ್ಲಿ ವಿದ್ಯಾರ್ಥಿಯನ್ನು ಫೇಲ್ ಮಾಡುವುದಿಲ್ಲ ಅಥವಾ ವಿಫಲಗೊಳಿಸುವುದಿಲ್ಲ ಎಂಬ ನಿಯಮವನ್ನು ಜಾರಿ ಮಾಡಿ. ಇದು ಪ್ರಜಾಪ್ರಭುತ್ವ, ಪೋಷಕರ ಮೇಲೆ ನಿಮ್ಮ ಅಭಿಪ್ರಾಯಗಳನ್ನು ಹೇರುವುದಲ್ಲ. ದಯವಿಟ್ಟು ಈ ಸುಧಾರಣೆಯನ್ನು ಪರಿಗಣಿಸಿ ಎಂದು ಹೇಳಿದ್ದಾರೆ. ಈ ಪೋಸ್ಟ್‌ಗೆ ಕನ್ನಡಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಹೇಳಿದ್ದೇನು ?
ವಿವಿಧ ಕನ್ನಡ ಸಂಘಟನೆಗಳು ಆಯೋಜಿಸಿದ್ದ ಜನರಾಜ್ಯೋತ್ಸವ -2025ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವೈಯಕ್ತಿಕವಾಗಿ ನಾನು ದ್ವಿಭಾಷಾ ನೀತಿಯ ಪರವಾಗಿದ್ದು, ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದರು. ಇದೀಗ ಈ ವಿಚಾರವಾಗಿ ಸಿದ್ದರಾಮಯ್ಯ ಅವರು ದೃಢ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕನ್ನಡಿಗರು ಆಗ್ರಹಿಸುತ್ತಿದ್ದಾರೆ. ಈ ರೀತಿ ಇರುವಾಗಲೇ ಮೋಹನ್‌ದಾಸ್ ಪೈ ಅವರು ಕನ್ನಡಿಗರ ಆಗ್ರಹಕ್ಕೆ ವಿರುದ್ಧವಾಗಿ ಟ್ವೀಟ್ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಕನ್ನಡಿಗರ ಪ್ರಶ್ನೆ
ಮೋಹನ್‌ದಾಸ್ ಪೈ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಕನ್ನಡಿಗರು ಉತ್ತರ ಭಾರತದ ಎಷ್ಟು ರಾಜ್ಯಗಳಲ್ಲಿ ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಳ್ಳಲಾಗಿದೆ. ಕನ್ನಡಿಗರು ಹಾಗೂ ದಕ್ಷಿಣ ಭಾರತೀಯರು ಮಾತ್ರ ಯಾಕೆ ಮೂರು ಭಾಷೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications