ಕಾಂಗ್ರೆಸ್ ನಲ್ಲಿ ಲಿಂಗಾಯತ ಕಡೆಗಣನೆ ಎಂದ ಶಾಮನೂರು ಪ್ರಶ್ನೆಗೆ ಸಿಎಂ ಉತ್ತರಿಸಲಿ: ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ, ಅಕ್ಟೋಬರ್ 07: ಲಿಂಗಾಯತ ಅಧಿಕಾರಿಗಳ ವಿಚಾರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಶಾಮನೂರು ಶಿವಶಂಕರಪ್ಪನವರು ಎತ್ತಿರುವಂತಹ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕೊಡಬೇಕು. ಉತ್ತರ ನೀಡುವವರೆಗೂ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ. ಜಾತಿಯ ಕರಿ ನೆರಳು ಬೀಳುವಂತದ್ದು, ಆಡಳಿತದ ಒಳ್ಳೆಯ ಲಕ್ಷಣ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಈ ಕುರಿತು ಶನಿವಾರ ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಎಡವಟ್ಟು ಮಾಡಿಕೊಂಡು ಬರುತ್ತಿದೆ. ವರ್ಗಾವಣೆ ವಿಷಯದಲ್ಲಿ ಬಹಳಷ್ಟು ಅಸಮಾಧಾನಕ್ಕೆ ಈಡಾಗಿದೆ. ಎಲ್ಲಾ ಸಮಾಜಕ್ಕೂ ನ್ಯಾಯ ಕೊಡುತ್ತೇವೆ ಅಂತ ಹೇಳಿದ್ದರು. ಆದರೆ ಅದು ಆಗಿಲ್ಲ. ಈಗ ಬೇರೆ ಬೇರೆ ರೂಪದಲ್ಲಿ ಹೊರಗೆ ಬರುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪನವರು ಎತ್ತಿರುವಂತಹ ಪ್ರಶ್ನೆಗಳಿಗೆ ಸಿಎಂ ಉತ್ತರ ಕೊಡಬೇಕು. ಉತ್ತರ ನೀಡುವವರೆಗೂ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ
ಜಾತಿಯ ಕರಿ ನೆರಳು ಬೀಳುವಂತದ್ದು, ಆಡಳಿತದ ಒಳ್ಳೆಯ ಲಕ್ಷಣ ಅಲ್ಲ. ಮುಖ್ಯಮಂತ್ರಿಗಳು ಇದನ್ನು ಎಷ್ಟು ದಿನ ಮುಂದುವರಿಸಿಕೊಂಡು ಹೋಗುತ್ತಾರೆ ಅಷ್ಟು ಕೆಟ್ಟ ಹೆಸರು ಬರುತ್ತದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಜಾತಿ ಗಣತಿ ಬಿಡುಗಡೆ ಮಾಡುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು 2014-15 ರಲ್ಲಿ ಶೈಕ್ಷಣಿಕ ಮತ್ತು ಆರ್ಥಿಕತೆಯ ಗಣತಿಗೆ ಆಜ್ಞೆ ಮಾಡಿದ್ದೇವು. ಎಲ್ಲೂ ಕೂಡ ಜಾತಿ ಗಣತಿ ಮಾಡಲು ಹೇಳಿರಲಿಲ್ಲ. ಎಲ್ಲರಿಗೂ ಕೂಡ ಗೊತ್ತಿದೆ ಇದು ಜಾತಿಗಣತಿಯಲ್ಲ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಬಂದಾಗೆಲ್ಲ ಆಡಳಿತವನ್ನು ಸುಸೂತ್ರವಾಗಿ ನಡೆಸಲು ಆಗುವುದಿಲ್ಲ. ಒಂದು ವರ್ಗವನ್ನು ಪೊಲೀಸರು ಮುಟ್ಟಬಾರದು ಅಂತ ಪರೋಕ್ಷವಾಗಿ ಸಂದೇಶ ಬೇಕಾದಷ್ಟಿದೆ
ಸಮಾಜಘಾತಕ ಶಕ್ತಿಗಳಿಗೆ ಕಾನೂನು, ಪೋಲಿಸ್, ಸರ್ಕಾರದ ಭಯ ಇಲ್ಲ. ಕೋಲಾರದಲ್ಲಿ ಘಟನೆ ನಡೆದಿತ್ತು. ಹೀಗಾಗಿ ಶಿವಮೊಗ್ಗದಲ್ಲಿ ಪೂರ್ವ ಬಂದೋಬಸ್ತ್ ಮಾಡಬೇಕಿತ್ತು. ಈದ್ ಮಿಲಾದ್ ಮೆರವಣಿಗೆಯಲ್ಲಿ ಬಂದೋಬಸ್ತ್ ಯಾಕೆ ಮಾಡಲಿಲ್ಲ. ಸರ್ಕಾರ ಬಂದ ನಂತರ ಸಮಾಜಘಾತಕ ಶಕ್ತಿಗಳಿಗೆ ಪ್ರಚೋದನೆ ಸಿಗುತ್ತಿದೆ ಎಂದು ಹೇಳಿದರು.
ರಾಜ್ಯದ ಬರ ಪರಿಸ್ಥಿತಿ ನಿರ್ವಹಣೆ ಕುರಿತು ಮಾತನಾಡಿದ ಅವರು, ಬರ ಪರಿಹಾರ ನಾವು ಸಮರ್ಥವಾಗಿ ಮಾಡುತ್ತೇವೆ ಎಂದು ಸಿಎಂ ಹೇಳಿದ್ದಾರೆ. ಬರೀ ಹೇಳಿಕೆಯಲ್ಲಿ ಇವರ ಸರ್ಕಾರ ಆಡಳಿತ ನಡೆಯುತ್ತಿದೆ. ಬರಗಾಲವಾಗಿ ಮೂರು ತಿಂಗಳಾಯಿತು. ಮುಂಗಾರು ಬೆಳೆ ನಾಶವಾಗಿ ರೈತರು ಕಂಗಾಲಾಗಿದ್ದಾರೆ. ಇಷ್ಟೆಲ್ಲಾ ಆದರೂ ಕೂಡ ಬರಗಾಲಕ್ಕೆ ಇದುವರೆಗೂ ನಯಾ ಪೈಸೆ ಬಿಡುಗಡೆ ಆಗಿಲ್ಲ.
ಕುಡಿಯುವ ನೀರಿನ ಸಮಸ್ಯೆಗೆ ಇದುವರೆಗೂ ಕ್ರಮ ಕೈಗೊಂಡಿಲ್ಲ. ಅನಗತ್ಯವಾಗಿ ಕೇಂದ್ರಕ್ಕೆ ಬೊಟ್ಟು ಮಾಡಿ ತೋರಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಬಳಿ ವಿಕೋಪ ನಿಧಿ ಈಗಾಗಲೇ ಇದೆ. ಕೂಡಲೇ ಅದನ್ನು ಬಿಡುಗಡೆ ಮಾಡಿ, ಆಮೇಲೆ ಕೇಂದ್ರದಿಂದ ತೆಗೆದುಕೊಳ್ಳಿ ನಾವು ನಿಮ್ಮ ಜೊತೆ ಇರುತ್ತೇವೆ ಎಂದರು.
ನಮ್ಮ ಅವಧಿಯಲ್ಲಿ ಪ್ರವಾಹ ಬಂತು, ನಾವು ಕೇಂದ್ರಕ್ಕಾಗಿ ಕಾಯುತ್ತ ಕೂರಲಿಲ್ಲ. ಸರ್ಕಾರ ಜೀವಂತ ಇದ್ದದ್ದು ಇಂತಹ ಸಂಕಷ್ಟದಲ್ಲಿ ಗೊತ್ತಾಗುತ್ತದೆ. ಈ ಸರ್ಕಾರ ರೈತರ ಪಾಲಿಗೆ ಜೀವಂತ ಇಲ್ಲ ಅನ್ನುವುದು ಸ್ಪಷ್ಟವಾಗಿದೆ. ಹೇಳಿಕೆಯಿಂದ ಬರಗಾಲ ಪರಿಹಾರ ಆಗುವುದಿಲ್ಲ ಅನ್ನುವುದನ್ನು ಮುಖ್ಯಮಂತ್ರಿಗೆ ಹೇಳಲು ಇಷ್ಟ ಪಡುತ್ತೇನೆ. ಇದುವರೆಗೂ ಅಭಿವೃದ್ಧಿಗೆ ಹಣ ಬಿಡುಗಡೆಯಾಗಿಲ್ಲ. ಆಸ್ಪತ್ರೆ, ಶಾಲೆ, ರಸ್ತೆ ನಿರ್ವಹಣೆಗೂ ಹಣ ಬಿಡುಗಡೆ ಮಾಡಿಲ್ಲ. ಇಂತಹ ದರಿದ್ರ ಸ್ಥಿತಿ ಸರ್ಕಾರಕ್ಕೆ ಬಂದಿದೆ ಎಂದು ವಾಗ್ದಾಳಿ ನಡೆಸಿದರು.
ಮಧ್ಯದಂಗಡಿ ಸಿಎಂ ಡಿಸಿಎಂ ಗೊಂದಲ ವಿಚಾರವಾಗಿ ಮಾತನಾಡಿ, ಪಂಚಾಯತಿಗೊಂದು ಮದ್ಯದ ಅಂಗಡಿ ತೆರೆಯುವುದನ್ನು ನಾವು ನಾವು ಮೊದಲೇ ವಿರೋಧ ಮಾಡಿದ್ದೇವೆ, ಜನ ಕೂಡ ವಿರೋಧ ಮಾಡಿದ್ದಾರೆ. ಗೃಹಲಕ್ಷ್ಮಿ ಅಂತ ದುಡ್ಡು ಕೊಟ್ಟು, ಅದರ ಎರಡು ಪಟ್ಟು ಆ ಸಂಸಾರದಿಂದ ಕಿತ್ತುಕೊಳ್ಳುವಂಥ ಕೆಲಸ ಸರ್ಕಾರ ಮಾಡುತ್ತಿದೆ. ಸರ್ಕಾರ ಅಬಕಾರಿ ನೀತಿಗಳನ್ನು ಮುಚ್ಚಿ ಹಾಕುವಂತಹ ಕೆಲಸ ಮಾಡುತ್ತಿದೆ.
ಮುಖ್ಯಮಂತ್ರಿಗಳು ಹೊಸ ಬಾರ್ ಲೈಸೆನ್ಸ್ ಕೊಡುವುದಿಲ್ಲ ಅಂತ ಹೇಳುತ್ತಾರೆ. ಉಪಮುಖ್ಯಮಂತ್ರಿಗಳು ಆಯಕಟ್ಟು ಜಾಗದಲ್ಲಿ ಬಾರ್ ಮಾಡಬೇಕಾಗುತ್ತದೆ ಅಂತ ಹೇಳುತ್ತಾರೆ. ಇವರ ನಿರ್ಣಯ ಗೊಂದಲದ ಗೂಡಾಗಿದೆ. ಮುಖ್ಯಮಂತ್ರಿಗಳು ಮಾಡುವಂತಹ ಎಲ್ಲ ನಿರ್ಣಯಗಳಿಗೆ ಉಪಮುಖ್ಯಮಂತ್ರಿ ವಿರೋಧ ಮಾಡುತ್ತಿದ್ದಾರೆ. ಈ ಸರ್ಕಾರ ಜನರಿಗಂತೂ ಒಳ್ಳೇದು ಮಾಡುವುದಿಲ್ಲ ಎಂದರು.












Click it and Unblock the Notifications