ಜಾತಿ ಸಮೀಕ್ಷೆ ಸಮಾಜವನ್ನು ವಿಭಜಿಸುವುದಿಲ್ಲ: ಸಿಎಂ ಸಿದ್ದರಾಮಯ್ಯ
ಮೈಸೂರು: ಬಿಹಾರ ಜಾತಿ ಗಣತಿ ಬಿಡುಗಡೆ ಬಳಿಕ ಕರ್ನಾಟಕದಲ್ಲಿ ಜಾತಿ ಗಣತಿ ರಿಲೀಸ್ ಆಗುತ್ತೆ ಅನ್ನೋ ಮಾತು ಬಲವಾಗಿ ಕೇಳಿಬರ್ತಿದೆ. ಈ ಬಗ್ಗೆ ಇವತ್ತು ಸಿಎಂ ಸಿದ್ದರಾಮಯ್ಯ ಮಹತ್ವದ ಹೇಳಿಕೆ ನೀಡಿದ್ದು, ಜಾತಿ ಗಣತಿ ಬಗ್ಗೆ ಒಂದು ಸ್ಪಷ್ಟನೆ ನೀಡಿದ್ದಾರೆ. ಹಾಗಾದ್ರೆ ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ಬಗ್ಗೆ ತಿಳಿಸಿದ ಮಾಹಿತಿ ಏನು? ಕರ್ನಾಟಕದಲ್ಲಿ ಕೂಡ ಬಿಹಾರದ ರೀತಿ ಜಾತಿ ಗಣತಿ ವರದಿ ಬಿಡುಗಡೆ ಆಗುತ್ತಾ?
ಅಂದಹಾಗೆ ಇಡೀ ದೇಶದ ಗಮನ ಈಗ ಕರ್ನಾಟಕದ ಮೇಲೆ ನೆಟ್ಟಿದೆ. ಯಾಕಂದ್ರೆ ಬಿಹಾರ ನಂತರ ಕರ್ನಾಟಕ ಕೂಡ ಜಾತಿ ಗಣತಿ ಬಿಡುಗಡೆ ಮಾಡುತ್ತೆ ಅನ್ನೋ ಲೆಕ್ಕಾಚಾರ ಇದಕ್ಕೆ ಪ್ರಮುಖ ಕಾರಣ. ಆದ್ರೆ ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ಕುರಿತು ಮಾತನಾಡಿದ್ದು, ಜಾತಿ ಗಣತಿ ಸಮಾಜ ವಿಭಜಿಸಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಅವರ ಹೇಳಿಕೆಗೂ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರವನ್ನು ನೀಡಿದ್ದಾರೆ.

76 ವರ್ಷ ಕಳೆದರೂ ಆರ್ಥಿಕವಾಗಿ...
ಇಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಸಿಎಂ, ಜಾತಿ ಗಣತಿ ಸಮಾಜ ವಿಭಜಿಸುತ್ತದೆ ಎಂದು ಪ್ರಧಾನಿಗಳು ಹೇಳಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ಬಡತನ ನಿವಾರಣೆಗಾಗಿ ಕಾರ್ಯಕ್ರಮ ರೂಪಿಸುವಾಗ, ಸಮ ಸಮಾಜ ನಿರ್ಮಾಣ ಮಾಡಬೇಕು. ಯಾವ ಜಾತಿ ಸ್ವಾತಂತ್ರ್ಯ ಬಂದು 76 ವರ್ಷ ಕಳೆದರೂ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ & ರಾಜಕೀಯವಾಗಿ ಯಾವ ಸ್ಥಿತಿಗತಿಯಲ್ಲಿದೆ ಎಂದು ತಿಳಿಯಬೇಕು ಎಂದಿದ್ದಾರೆ.
ಜಾತಿ ಸಮೀಕ್ಷೆ ಆಗಬೇಕು ಎಂದ ಸಿಎಂ
ಅಲ್ಲದೆ ನಮ್ಮದು ಜಾತಿ ವ್ಯವಸ್ಥೆ ಸಮಾಜವಾಗಿದೆ. ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಅಸಮಾನತೆ ಇರುವ ಜಾತಿಗಳನ್ನ ಮುಖ್ಯವಾಹಿನಿಗೆ ತರಲು ಅಂಕಿಅಂಶಗಳು ಅಗತ್ಯ. ಅದಕ್ಕಾಗಿ ಜಾತಿಗಣತಿ ಮಾಡಬೇಕು. ಸಾಮಾಜಿಕ & ಆರ್ಥಿಕ ಸಮೀಕ್ಷೆ ಮತ್ತು ಜಾತಿ ಸಮೀಕ್ಷೆ ಆಗಬೇಕು. ಇದು ಖಂಡಿತವಾಗಿಯೂ ಸಮಾಜವನ್ನು ಒಡೆಯುವುದಿಲ್ಲ ಎಂದು ಅಭಿಪ್ರಾಯಪಟ್ಟರು.

4860 ಕೋಟಿ ರೂಪಾಯಿಗೆ ಬೇಡಿಕೆ
ಗ್ಯಾರಂಟಿ ಯೋಜನೆಗಳಿಗೆ ತೊಂದ್ರೆ ಇಲ್ಲ. ಬರ ಪರಿಹಾರಕ್ಕೆ ಕೇಂದ್ರ ಸರ್ಕಾರಕ್ಕೆ 4860 ಕೋಟಿ ರೂಪಾಯಿ ಕೋರಿದ್ದೇವೆ. ಆದರೆ ಬೆಳೆ ನಷ್ಟವಾಗಿರುವುದು 42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ. ಎಲ್ಲಾ ಸೇರಿ ಒಟ್ಟು 3000 ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಎನ್.ಡಿ.ಆರ್.ಎಫ್ ನಿಯಮಗಳ ಪ್ರಕಾರ 4860 ಕೋಟಿ ರೂ.ಗಳನ್ನು ಕೋರಿದ್ದೇವೆ. ಕೇಂದ್ರ ಬರ ಅಧ್ಯಯನ ತಂಡ 3 ತಂಡಗಳಾಗಿ 11 ಜಿಲ್ಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಿದ್ದಾರೆ. ಅವರು ವರದಿ ನೀಡಿದ ಆಧಾರದ ಮೇಲೆ ಕೇಂದ್ರ ಸರ್ಕಾರ ಪರಿಹಾರ ನಿಗದಿ ಮಾಡಲಿದೆ ಎಂದರು.
ಮೋದಿಯವರು ಹೇಳುವುದಕ್ಕೂ...
ನರೇಂದ್ರ ಮೋದಿಯವರು ಎಲ್ಲರನ್ನ ಒಳಗೊಂಡ ಸಮಾಜ, ಸಬ್ ಕೆ ಸಾಥ್, ಸಬ್ ಕಾ ವಿಕಾಸ್ ಎನ್ನುತ್ತಾರೆ. ಮುಸಲ್ಮಾನರಿಗೆ ಟಿಕೆಟ್ ಕೊಡದಿದ್ರೆ ಸಬ್ ಕೆ ಸಾಥ್ ಆಗುತ್ತದೆಯೇ? ಎಲ್ಲರನ್ನೂ ಒಳಗೊಂಡಂತೆ ಆಗುತ್ತದೆಯೇ? ಹೇಳುವುದಕ್ಕೂ ಹಾಗೂ ಮಾಡುವುದಕ್ಕೂ ವ್ಯತ್ಯಾಸವಿದೆ. ಹೇಳೋದು ಬೇರೆ, ವಸ್ತುಸ್ಥಿತಿ ಬೇರೆ ಎಂದು ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದರು.
ಮುಂದಿನ ತಿಂಗಳು ಜಾತಿ ಸಮೀಕ್ಷೆ ರಿಲೀಸ್?
ಕಾಂತರಾಜು ಅವರು ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅಂದಿನ ಸಿಎಂ ಎಚ್.ಡಿ.ಕುಮಾರಸ್ವಾಮಿ ವರದಿ ಪಡೆಯಲಿಲ್ಲ. ಈಗ ಬೇರೆ ಅಧ್ಯಕ್ಷರು ಇದ್ದು ಅವರಿಗೆ ಕಾಂತರಾಜು ವರದಿ ಇದ್ದಂತೆಯೇ ಮಾಡಿಕೊಡುವಂತೆ ಹೇಳಿದ್ದೇನೆ. ಅವರು ನವೆಂಬರ್‌ನಲ್ಲಿ ವರದಿ ನೀಡುವುದಾಗಿ ಹೇಳಿದ್ದಾರೆ ಎಂದು ಸಿಎಂ ತಿಳಿಸಿದ್ರು. ಹಾಗೇ ಬಹಳ ಹಿಂದುಳಿದವರು ರಾಷ್ಟ್ರೀಯ ಮಟ್ಟದಲ್ಲಿ ಪ್ರತ್ಯೇಕ ವರ್ಗ ಬೇಕು ಎಂದು ಕರ್ನಾಟಕದಲ್ಲಿ ಬೇಡಿಕೆ ಇರುವ ಬಗ್ಗೆ ಉತ್ತರಿಸಿ, ಈ ಬಗ್ಗೆ ಹಿಂದುಳಿದ ವರ್ಗಗಳ ಸಮೀಕ್ಷೆ ವರದಿ ನಂತರ ಪರಿಶೀಲಿಸಲಾಗುವುದು ಎಂದರು.
ಜನರ ಅಹವಾಲು ಕೇಳಲು ಸೂಚನೆ
ಕೇಂದ್ರ ಬರ ಅಧ್ಯಯನ ತಂಡ ಸರಿಯಾಗಿ ರೈತರ ಸಮಸ್ಯೆಗಳನ್ನು ಆಲಿಸುತ್ತಿಲ್ಲ ಎಂಬ ಪ್ರಶ್ನೆಗು ಉತ್ತರಿಸಿದ ಸಿಎಂ, ಅಧ್ಯಯನ ತಂಡಕ್ಕೆ ಎಲ್ಲೆಡೆ ಭೇಟಿ ಮಾಡಿ ಜನರ ಅಹವಾಲು ಕೇಳಬೇಕು. ಜನಪ್ರತಿನಿಧಿಗಳ ಮಾತನ್ನೂ ಆಲಿಸುವಂತೆ ಸೂಚಿಸಿದ್ದೇನೆ ಎಂದರು. ಕೇಂದ್ರ ಬರ ಅಧ್ಯಯನ ತಂಡ ಕಾವೇರಿ ಕಣಿವೆಗೆ ಭೇಟಿ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ಅದನ್ನ ನಾವು ತೀರ್ಮಾನಿಸುವುದಿಲ್ಲ. ಕೇಂದ್ರ ತಂಡ ಭೇಟಿ ನೀಡಬೇಕಾದ ಸ್ಥಳಗಳನ್ನು ನಿರ್ಧರಿಸುತ್ತದೆ. ಜಿಲ್ಲೆಗಳನ್ನು ಅವರೇ ಪಟ್ಟಿ ಮಾಡಿಕೊಳ್ಳುತ್ತಾರೆ ಎಂದರು. ಹಸಿರು ಬರ ಇದೆ, ಗಿಡ ಇದ್ದರೆ ಸಾಲದು ಬೆಳೆ ಬರಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಹಾಗೇ ಸೋಮವಾರ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆಗೆ ತೆರಳುತ್ತಿರುವ ಬಗ್ಗೆ ಮಾತನಾಡಿ ಅಜೆಂಡಾ ಬಗ್ಗೆ ನನಗೆ ತಿಳಿದಿಲ್ಲ. ಚುನಾವಣೆಗೆ ಸಂಬಂಧಿಸಿದಂತೆ ಚರ್ಚೆ ಮಾಡುತ್ತೇವೆ ಅಂತಾ ಹೇಳಿದರು. ಹಾಗೇ ಕೇಂದ್ರ ಸರ್ಕಾರ ವಿರುದ್ಧ ಟೀಕಿಸುವ ಮಾಧ್ಯಮಗಳ ಮೇಲೆ ದೇಶದ್ರೋಹ ಪ್ರಕರಣ ಹಾಕುವುದು ಎಷ್ಟು ಸರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಅದು ಸರಿಯಲ್ಲ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.
ಹೊಸ ಮದ್ಯದಂಗಡಿ ಇಲ್ಲ.. ಇಲ್ಲ..!
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮದ್ಯದಂಗಡಿ ತರೆಯಲು ಅವಕಾಶವಿಲ್ಲ ಎಂದು ಸಿಎಂ ಈಗ ಮತ್ತೊಮ್ಮೆ ಪುನರ್ ಪ್ರಸ್ತಾಪ ಮಾಡಿದ್ದಾರೆ. ಹಾಗೇ ಡಿಸಿಎಂ ಹೇಳಿಕೆ ಕುರಿತು ಉತ್ತರಿಸುತ್ತಾ ಹೊಸದಾಗಿ ಮದ್ಯದಂಗಡಿ ತೆರೆಯುತ್ತೇವೆ ಎಂದು ಹೇಳಿಲ್ಲ. ಹೊಸದಾಗಿ ಕೊಡುತ್ತೇವೆ ಎಂದು ಹೇಳಿಲ್ಲ. ಅವರ ಅಭಿಪ್ರಾಯ ಹೇಳಿದ್ದಾರೆ. ನನ್ನ ಅಭಿಪ್ರಾಯದಲ್ಲಿ ಹೊಸ ಪರವಾನಾಗಿ ಕೊಡಬೇಕಾದ ಅಗತ್ಯತೆ ಇಲ್ಲ ಎಂದರು. ಈ ಮೂಲಕ ಹೊಸ ಮದ್ಯದಂಗಡಿಗಳ ವಿವಾದಕ್ಕೆ ಸಿಎಂ ಬ್ರೇಕ್ ಹಾಕಲು ಯತ್ನಿಸಿದ್ದಾರೆ.
ಸಾರ್ವಜನಿಕ ಅಭಿಪ್ರಾಯ ಏನಿದೆ ಎಂದು ನೋಡಿಕೊಂಡು ತೀರ್ಮಾನ ಮಾಡುತ್ತೇವೆ. ಪ್ರಸ್ತುತ ನಮ್ಮ ಮುಂದೆ ಪ್ರಸ್ತಾವನೆ ಇಲ್ಲ. ಹೊಸ ಮದ್ಯದಂಗಡಿಗಳನ್ನ ತೆರೆಯಲು ಪರವಾನಗಿಯನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು ಸಿಎಂ. ಹಾಗೇ ಮಹಿಷ ದಸರಾ ಆಚರಿಸುವ ಕುರಿತು ಮಾತನಾಡಿ, ಹಿಂದೆಯೂ ಆಚರಿಸಿದ್ದಾರೆ ಆದರೆ ಚಾಮುಂಡಿ ಬೆಟ್ಟದ ಮೇಲೆ ಆಗಿಲ್ಲ ಎಂದರು. ಮಹಿಷ ದಸರಾ ಎಂದಿಗೂ ಸರ್ಕಾರ ಆಚರಿಸಿಲ್ಲ ಎಂದು ಸಿಎಂ ತಿಳಿಸಿದರು.












Click it and Unblock the Notifications