Buffalo Milk: ನಂದಿನಿ ಎಮ್ಮೆ ಹಾಲು ಸೇರಿ ವಿವಿಧ ಉತ್ಪನ್ನಗಳ ಬಿಡುಗಡೆ
ಎಮ್ಮೆ ಹಾಲಿಗೆ ಬೇಡಿಕೆ ಹೆಚ್ಚಾದ ಬಳಿಕ ಕೆಎಂಎಫ್ ನಂದಿನಿ ಎಮ್ಮೆ ಹಾಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಎಮ್ಮೆ ಹಾಲು ಸೇರಿದಂತೆ ವಿವಿಧ ಉತ್ಪನ್ನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಟ ಶಿವರಾಜ್ ಕುಮಾರ್ ಬಿಡುಗಡೆ ಮಾಡಿದರು.
ನಂದಿನಿ ಎಮ್ಮೆ ಹಾಲು, ಕಡಿಮೆ ಕೊಬ್ಬಿನ ಅಂಶ ಇರುವ ಲೈಟ್ ಮೊಸರು, ಹೊಸ ಪ್ಯಾಕಿಂಗ್‌ನಲ್ಲಿ ಮೈಸೂರು ಪಾಕ್, ಏಲಕ್ಕಿ ಪೇಡಾ, ಧಾರವಾಡ ಪೇಡ, ಸಿರಿಧಾನ್ಯ ಲಡ್ಡು, ಹಾಲಿನ ಪೇಡ ಸೇರಿದಂತೆ 40ಕ್ಕೂ ಹೆಚ್ಚು ಬಗೆಯ ಸಿಹಿ ತಿನಿಸುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

ಎಮ್ಮೆ ಹಾಲು ಸದ್ಯ ಅರ್ಧ ಲೀಟರ್ ಪ್ಯಾಕೆಟ್‌ನಲ್ಲಿ ಮಾತ್ರ ಲಭ್ಯವಿದ್ದು ಅರ್ಧ ಲೀಟರ್ ಹಾಲಿಗೆ 35 ರೂಪಾಯಿ ದರ ನಿಗದಿ ಮಾಡಲಾಗಿದೆ. ಬೇಡಿಕೆಯನ್ನು ಪರಿಗಣಿಸಿ ಮುಂದಿನ ದಿನಗಳಲ್ಲಿ 1 ಲೀಟರ್ ಪ್ಯಾಕೆಟ್ ಬಿಡುಗಡೆ ಮಾಡುವುದಾಗಿ ಹೇಳಿದೆ.
ಸಿದ್ದರಾಮಯ್ಯ ಟ್ವೀಟ್
ಎಮ್ಮೆ ಹಾಲು ಸೇರಿದಂತೆ ವಿವಿಧ ಉತ್ಪನ್ನಗಳನ್ನು ಬಿಡುಗಡೆ ಮಾಡಿದ ಬಳಿಕ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ನಂದಿನಿ ನಮ್ಮ ಹೆಮ್ಮೆಯ ಸಂಸ್ಥೆ ಎಂದಿದ್ದಾರೆ.
ಟ್ವೀಟ್‌ನಲ್ಲಿ "ನಾಡಿನ ರೈತರು ಶ್ರಮದಿಂದ ಕಟ್ಟಿರುವ ನಂದಿನಿ / ಕೆಎಂಎಫ್ ಸಂಸ್ಥೆಯನ್ನು ಯಾರದೋ ಸ್ವಾರ್ಥಕ್ಕಾಗಿ ಹೊರರಾಜ್ಯದ ಸಂಸ್ಥೆಯ ಪಾದದಡಿ ಇಡುವವರು ನಾವಲ್ಲ. ನಮ್ಮ ಹೆಮ್ಮೆಯ ಸಂಸ್ಥೆಯನ್ನು ಉಳಿಸಿ, ಬೆಳೆಸುವುದೊಂದೇ ನಮ್ಮ ಗುರಿ. ನಂದಿನಿ ಬರೀ ಸಂಸ್ಥೆಯಲ್ಲ,ಕನ್ನಡಿಗರ ಭಾವನೆ." ಎಂದು ಟ್ವೀಟ್ ಮಾಡಿದ್ದಾರೆ.
ಶಿವರಾಜ್‌ಕುಮಾರ್ ರಾಯಭಾರಿ
ಇದೇ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಅವರು ಬ್ರಾಂಡ್ ರಾಯಭಾರಿಯಾಗಿರುವ ಟೀಸರ್ ಕೂಡ ಬಿಡುಗಡೆ ಮಾಡಲಾಗಿದೆ. ನಟ ಪುನೀತ್ ರಾಜ್‌ಕುಮಾರ್ ನಂದಿನಿ ಉತ್ಪನ್ನಗಳ ಬ್ರಾಂಡ್ ರಾಯಭಾರಿಯಾಗಿದ್ದರು, ಅವರ ನಂತರ ಈಗ ಶಿವರಾಜ್ ಕುಮಾರ್ ಅವರು ನಂದಿನಿ ಉತ್ಪನ್ನಗಳ ಬ್ರಾಂಡ್ ರಾಯಭಾರಿಯಾಗಿದ್ದಾರೆ.
ಎರಡು ವರ್ಷಗಳ ಮೊದಲು ನಂದಿನಿ ಎಮ್ಮೆ ಹಾಲು ಮಾರಾಟ ಮಾಡುತ್ತಿತ್ತು. ಪ್ರತಿದಿನ 4,000 - 5,000 ಲೀಟರ್ ಎಮ್ಮೆ ಹಾಲು ಮಾರಾಟ ಮಾಡುತ್ತಿದ್ದರು, ಪೂರೈಕೆ ಕೊರತೆಯಿಂದಾಗಿ ಸ್ಥಗಿತ ಮಾಡಲಾಗಿತ್ತು. ಈಗ ಎಮ್ಮೆ ಹಾಲಿಗೆ ಬೇಡಿಕೆ ಹೆಚ್ಚಾದ ಕಾರಣ ಮತ್ತೆ ಎಮ್ಮೆ ಹಾಲು ಮಾರಾಟಕ್ಕೆ ನಿರ್ಧಾರ ಮಾಡಲಾಗಿದೆ.
ಉತ್ತರ ಕರ್ನಾಟಕದಲ್ಲಿ ಎಮ್ಮೆಗಳನ್ನು ಹೆಚ್ಚಾಗಿ ಸಾಕುವ ಕಾರಣ ಅದೇ ಭಾಗದಿಂದ ಪ್ರತಿದಿನ ಎಮ್ಮೆ ಹಾಲನ್ನು ಸಂಗ್ರಹಿಸಲು ನಿರ್ಧರಿಸಲಾಗಿದೆ. ಕೆಎಂಎಫ್ ಈಗ ಪ್ರತಿದಿನ 46 ಲಕ್ಷ ಲೀಟರ್ ಹಾಲು ಮತ್ತು 10 ಲಕ್ಷ ಲೀಟರ್ ಮೊಸರು ಮಾರಾಟ ಮಾಡುತ್ತಿದೆ.
ನಂದಿನಿ ಉತ್ಪನ್ನಗಳ ಬಿಡುಗಡೆ ಸಮಾರಂಭದಲ್ಲಿ ಗೀತಾ ಶಿವರಾಜ್ ಕುಮಾರ್, ಸಚಿವ ಮಧು ಬಂಗಾರಪ್ಪ, ಕೆ.ಎಂ.ಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸೇರಿದಂತೆ ಹಲವರು ಇದ್ದರು.












Click it and Unblock the Notifications