ಶೋಭಾ ಅವರು ಮೊದಲು ಯಡಿಯೂರಪ್ಪ ಬಗ್ಗೆ ಮಾತಾಡಲಿ: ಸಿಎಂ ಮಾತಿನ ಅರ್ಥವೇನು?
ಸಿಎಂ ಸಿದ್ದರಾಮಯ್ಯ ಅವರು ಎರಡು ಕೇಸ್‌ಗಳಲ್ಲಿ ಆರೋಪಿಯಾಗಿದ್ದಾರೆ. ಆದರೂ ಅವರು ಸಿಎಂ ಸ್ಥಾನದಲ್ಲಿ ಅನೈತಿಕವಾಗಿ ಮುಂದುವರಿದಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನಿನ್ನೆ ಆರೋಪಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ, ಶೋಭಾ ಕರಂದ್ಲಾಜೆ ಅವರು ಮೊದಲು ಬಿ.ಎಸ್.ಯಡಿಯೂರಪ್ಪ ಅವರ ಮೇಲಿನ ಪೋಕ್ಸೋ ಕೇಸ್ ಬಗ್ಗೆ ಮಾತನಾಡಲಿ ಎಂದು ಟಾಂಗ್ ನೀಡಿದ್ದಾರೆ.
ಇಂದು ಮೈಸೂರಿನಲ್ಲಿ ಮಾತನಾಡಿದ ಸಿಎಂ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಪೋಕ್ಸೊ ಕೇಸ್‌ನಲ್ಲಿ ಸಿಕ್ಕಿಬಿದ್ದಿರೋ ಬಿ.ಎಸ್.ಯಡಿಯೂರಪ್ಪ ಬಗ್ಗೆ ಮಾತನಾಡಲಿ. ಮೊದಲು ಬಿಜೆಪಿ ಸಂಸದೀಯ ಮಂಡಳಿಯಿಂದ ಯಡಿಯೂರಪ್ಪ ಅವರನ್ನು ವಜಾ ಮಾಡುವಂತೆ ಹೇಳಲಿ. ಅದರ ಬದಲಿಗೆ ಏನೇನೋ ಹೇಳುವುದು ಸರಿಯಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಪೋಕ್ಸೋ ಕೇಸಲ್ಲಿ ಯಡಿಯೂರಪ್ಪ ಮೇಲೆ ಚಾರ್ಜ್‌ಶೀಟ್ ಇದೆ. ಕೋರ್ಟ್ ಕೃಪೆಯಿಂದಾಗಿ ಅವರು ಬಚಾವ್ ಆಗಿದ್ದಾರೆ ಅಷ್ಟೇ. ಇಲ್ಲದಿದ್ರೆ ಇಷ್ಟೊತ್ತಿಗೆ ಯಡಿಯೂರಪ್ಪ ಅವರು ಜೈಲಿನ ಒಳಗೆ ಇರಬೇಕಾಗಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಬಾರಿ ದಸರಾ ಮಹೋತ್ಸವದ ವಿಜಯದಶಮಿ ಮೆರವಣಿಗೆಯೂ ಸೇರಿಂದತೆ ಸಿಎಂ ಆಗಿ ನನಗೆ ಅತಿ ಹೆಚ್ಚು ಬಾರಿ ಪುಷ್ಪಾರ್ಚನೆ ಮಾಡುವ ಚಾನ್ಸ್ ಸಿಕ್ಕಿದೆ. ಕರ್ನಾಟಕದ ಜನ ಈ ಅವಕಾಶ ನನಗೆ ಕೊಟ್ಟಿದ್ದಾರೆ. ಈ ಕಾರಣದಿಂದಲೇ ನಾನು ತಾಯಿ ಚಾಮುಂಡೇಶ್ವರಿಗೆ ಹೆಚ್ಚು ಬಾರಿ ಪುಷ್ಪಾರ್ಚನೆ ಮಾಡಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ನನಗೆ ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಸದಾ ಇರುತ್ತೆ. ಅದರಿಂದಲೇ ನಾನು ಇಷ್ಟು ವರ್ಷಗಳಾದ್ರೂ ರಾಜಕಾರಣದಲ್ಲಿದ್ದೇನೆ. ಇನ್ನು ರಾಜಕಾರಣದಲ್ಲಿ ಶತ್ರುಗಳೂ ಇರ್ತಾರೆ, ಅಭಿಮಾನಿಗಳೂ ಹೆಚ್ಚಾಗಿ ಇರ್ತಾರೆ. ಹಾಗಾಗಿ ಇಲ್ಲಿ ಹೊಗಳಿಕೆ, ತೆಗಳಿಕೆ ಎರಡೂ ಇರುತ್ತೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ ನಾನು ಎಲ್ಲರೂ ಹೊಗಳಲಿ ಎಂದು ನಿರೀಕ್ಷಿಸಲ್ಲ. ಪ್ರಜಾಪ್ರಭುತ್ವದಲ್ಲಿ ಆರೋಗ್ಯಕರ ಚರ್ಚೆ ಹಾಗೂ ಟೀಕೆಗಳು ಇರಬೇಕು. ಆಗ ಮಾತ್ರವೇ ಪ್ರಜಾಪ್ರಭುತ್ವ ಪರಿಕಲ್ಪನೆ ಯಶಸ್ವಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸರ್ಕಾರಿ ಜಾಹೀರಾತಿನ ಬಗ್ಗೆ ಸ್ಪಷ್ಟನೆ: ರಾಜ್ಯ ಸರ್ಕಾರವು ಈ ಬಾರಿ ದಸರಾಗೆ ನೀಡಿರುವ ದಿನಪತ್ರಿಕೆಗಳ ಜಾಹೀರಾತು ವಿವಾದ ಸೃಷ್ಟಿಸಿದೆ. ಈ ಬಗ್ಗೆಯೂ ಸಿಎಂ ಮಾತನಾಡಿದ್ದು, ದಸರಾ ಎಂದರೆ ದುಷ್ಟಶಕ್ತಿಗಳ ಸಂಹಾರ ಹಾಗೂ ಶಿಷ್ಟಜನರ ರಕ್ಷಣೆ. ವಿಜಯನಗರದ ಅರಸರು ಇದೇ ಕಾರಣಕ್ಕೆ ಅವರ ಜಯದ ಸಂಕೇತವಾಗಿ ಆಯುಧ ಪೂಜೆ ಮಾಡ್ತಿದ್ರು. ಅದನ್ನೇ ಮೈಸೂರು ರಾಜರು ಮುಂದುವರಿಸಿದರು ಎಂದು ಸಮರ್ಥಿಸಿಕೊಂಡಿದ್ದಾರೆ.
ಸರ್ಕಾರದ ಜಾಹೀರಾತನ್ನು ನೀವು ಹೇಗೆ ಬೇಕಾದ್ರೂ ಅರ್ಥ ಮಾಡಿಕೊಳ್ಳಬಹುದು. ಮಾಧ್ಯಮಗಳು ಕೂಡ ಪರವಾಗಿ, ವಿರುದ್ಧವಾಗಿ ವ್ಯಾಖ್ಯಾನ ಮಾಡುತ್ತಿವೆ. ನಾವು ಹೀಗೆಯೇ ಅರ್ಥ ಮಾಡಿಕೊಳ್ಳಿ ಎಂದು ಹೇಳೋಕೆ ಆಗಲ್ಲ ಎಂದಿದ್ದಾರೆ. ಇನ್ನು ಯಾವಾಗಲೂ ಸುಳ್ಳು ವಿಚಾರಗಳಿಗೇ ಹೋರಾಟ ಮಾಡುತ್ತಾರೆ, ಸತ್ಯದ ವಿಚಾರಗಳಿಗಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೆಲವು ಮೊಕದ್ದಮೆಗಳ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಸಚಿವ ಸಂಪುಟದ ಉಪಸಮಿತಿಗಿದೆ. ಗೃಹಸಚಿವರು ಈ ಉಪಸಮಿತಿಯ ನೇತೃತ್ವ ವಹಿಸಿದ್ದು, ಸಮಿತಿಯ ವಿವೇಚನೆಯಂತೆ ಹುಬ್ಬಳ್ಳಿ ಗಲಭೆ ಪ್ರಕರಣದ ದೂರನ್ನು ಹಿಂದಕ್ಕೆ ಪಡೆದಿದೆ. ಆದಾಗಿಯೂ ಈ ವಿಚಾರವಾಗಿ ಹೆಚ್ಚಿನ ಮಾಹಿತಿಯನ್ನು ಪಡೆಯುತ್ತೇನೆ ಎಂದು ವಿವರಿಸಿದ್ದಾರೆ.

ರಾಜ್ಯದ ಜನತೆಗೆ ಮತ್ತೊಮ್ಮೆ ದಸರೆಯ ಶುಭಾಶಯಗಳು. ನಾಳೆ ಮೈಸೂರಿನಲ್ಲಿ ಜಂಬೂಸವಾರಿ ಸೇರಿದಂತೆ ಹಲವು ಕಾರ್ಯಕ್ರಮಗಳು ಅತ್ಯಂತ ವಿಜೃಂಭಣೆಯಿಂದ ಸಾಗಲಿದೆ. ಹೆಚ್ಚಿನ ಜನ ಸೇರುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.












Click it and Unblock the Notifications