ದುರಾಡಳಿತದ ಬಿಮಾರು ರಾಜ್ಯಗಳಿಗೆ ಕನ್ನಡಿಗನ ಬೆವರ ಗಳಿಕೆ ಪೋಲು: ಸಿಎಂ ಆಕ್ರೋಶ
ಕರ್ನಾಟಕಕ್ಕೆ ತೆರಿಗೆ ಪಾಲಿನಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧದ ಹೋರಾಟಕ್ಕೆ ಕನ್ನಡಿಗರೆಲ್ಲರೂ ದನಿ ಎತ್ತಬೇಕಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ. ಕೇಂದ್ರದ ಎನ್‌ಡಿಎ ಸರ್ಕಾರ ಕರ್ನಾಟಕ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಮಾಡುತ್ತಾ ಬಂದಿರುವ ಅನ್ಯಾಯಕ್ಕೆ ಇತ್ತೀಚಿನ ತೆರಿಗೆ ಪಾಲಿನ ಹಂಚಿಕೆಯ ವಿವರಗಳೇ ಸಾಕ್ಷಿ ಎಂದು ಈ ಬಗ್ಗೆ ಅವರು ಸರಣಿ ಟ್ವೀಟ್ ಕೂಡ ಮಾಡಿದ್ದಾರೆ.
28 ರಾಜ್ಯಗಳಿಗೆ ಒಟ್ಟು 1,78,193 ಕೋಟಿ ರೂಪಾಯಿ ಬಿಡುಗಡೆಗೊಳಿಸಿರುವ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡಿರುವುದು ಕೇವಲ 6,498 ಕೋಟಿ ರೂಪಾಯಿ. ಈ ಅನ್ಯಾಯದ ವಿರುದ್ದ ಜಾತಿ-ಧರ್ಮ, ಪಕ್ಷ-ಪಂಥದ ಭೇದವಿಲ್ಲದೆ ದನಿ ಎತ್ತುವ ಶಪಥವನ್ನು ಪ್ರತಿಯೊಬ್ಬ ಕನ್ನಡಿಗನು ಮಾಡಬೇಕಾಗಿದೆ ಎಂದಿದ್ದಾರೆ.

ಇಂತಹದ್ದೊಂದು ಪ್ರಮಾಣ ವಚನ ಸ್ವೀಕಾರಕ್ಕೆ ಅನ್ಯಾಯದ ವಿರುದ್ಧ ನ್ಯಾಯದ ಗೆಲುವಿನ ಸಂಕೇತವಾದ ವಿಜಯದಶಮಿಯ ಶುಭ ದಿನ ಸಾಕ್ಷಿಯಾಗಲಿ. ಕರ್ನಾಟಕವನ್ನು ಕಡೆಗಣಿಸುವಂತಹ ಅನ್ಯಾಯವನ್ನು ನಾವೇನು ಮಾಡಿದ್ದೇವೆ? ಎಂದು ಪ್ರತಿಯೊಬ್ಬ ಸ್ವಾಭಿಮಾನಿ ಕನ್ನಡಿಗನು ಕೇಂದ್ರ ಸರ್ಕಾರವನ್ನು ಕೇಳಬೇಕಾಗಿದೆ. ಬಿಮಾರು ರಾಜ್ಯಗಳೆಂದೇ ಕುಖ್ಯಾತಿ ಪಡೆದಿರುವ ರಾಜ್ಯಗಳಾದ ಉತ್ತರಪ್ರದೇಶಕ್ಕೆ 31,962 ಕೋಟಿ, ಬಿಹಾರಕ್ಕೆ 17,921 ಕೋಟಿ, ಮಧ್ಯಪ್ರದೇಶಕ್ಕೆ 13,987 ಕೋಟಿ ಮತ್ತು ರಾಜಸ್ತಾನಕ್ಕೆ 10,737 ಕೋಟಿಯಷ್ಟು ತೆರಿಗೆ ಪಾಲನ್ನು ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದುರಾಡಳಿತ ಮತ್ತು ಭ್ರಷ್ಟಾಚಾರದಿಂದಾಗಿ ಅಭಿವೃದ್ದಿ ಪಥದಲ್ಲಿ ಹಿಮ್ಮುಖವಾಗಿ ಸಾಗುತ್ತಿರುವ ಈ ರಾಜ್ಯಗಳಿಗಾಗಿ ಕನ್ನಡಿಗನ ಬೆವರ ಗಳಿಕೆ ಯಾಕೆ ಪೋಲಾಗಬೇಕು ಎನ್ನುವುದು ನಮ್ಮ ಪ್ರಶ್ನೆಯಾಗಿದೆ? ರಾಜ್ಯಗಳಿಂದ ಸಂಗ್ರಹಿಸುವ ತೆರಿಗೆ ಹಣದಲ್ಲಿ ಉತ್ತರಪ್ರದೇಶಕ್ಕೆ ಶೇ 17.93ರಷ್ಟು, ಬಿಹಾರಕ್ಕೆ ಶೇ 10.05ರಷ್ಟು, ರಾಜಸ್ಥಾನಕ್ಕೆ ಶೇ 6.02 ಮತ್ತು ಮಧ್ಯಪ್ರದೇಶಕ್ಕೆ ಶೇ 7.85ರಷ್ಟು ಪಾಲು ನೀಡಿದರೆ, ಕರ್ನಾಟಕಕ್ಕೆ ನೀಡುತ್ತಿರುವ ತೆರಿಗೆ ಪಾಲು ಕೇವಲ ಶೇ 3.64 ಮಾತ್ರ. ತೆರಿಗೆ ಹಂಚಿಕೆಗಾಗಿ ನಿಗದಿ ಪಡಿಸಲಾಗಿರುವ ಮಾನದಂಡದಲ್ಲಿಯೇ ಬಿಜೆಪಿ ಸರ್ಕಾರದ ಪ್ರಗತಿ ವಿರೋಧಿ ಧೋರಣೆ ಸ್ಪಷ್ಟವಾಗಿದೆ ಎಂದು ವಾಗ್ದಾಳಿ ವಾಗ್ದಾಳಿ ನಡೆಸಿದ್ದಾರೆ.
ಇದರಿಂದ 2021-26 ರವರೆಗಿನ ಐದು ವರ್ಷಗಳಲ್ಲಿ ತೆರಿಗೆ ಪಾಲಿನಲ್ಲಿ ಅಂದಾಜು ₹62,275 ಕೋಟಿಯನ್ನು ಕರ್ನಾಟಕ ಕಳೆದುಕೊಂಡಿದೆ. ಈ ಅನ್ಯಾಯವನ್ನು ಪರಿಗಣಿಸಿದ್ದ ಹಣಕಾಸು ಆಯೋಗ ವಿಶೇಷ ಅನುದಾನದ ರೂಪದಲ್ಲಿ ರೂ.5,495 ಕೋಟಿ ನೀಡುವಂತೆ ಶಿಫಾರಸು ಮಾಡಿತ್ತು. ಇದನ್ನು ಕೂಡಾ ಬಿಜೆಪಿ ಸರ್ಕಾರ ನೀಡದೆ ಅನ್ಯಾಯ ಎಸಗಿದೆ. ಈ ಎಲ್ಲ ನಷ್ಟಗಳನ್ನು ಸೇರಿಸಿದರೆ 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕ ರಾಜ್ಯಕ್ಕೆ ರೂ.79,770 ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ ಎಂದು ಹೇಳಿದ್ದಾರೆ.

ದೇಶದ ಜನಸಂಖ್ಯೆಯಲ್ಲಿ ಕರ್ನಾಟಕದ ಪಾಲು ಕೇವಲ ಶೇ 5ರಷ್ಟಿದ್ದರೂ ದೇಶದ ಜಿಡಿಪಿಗೆ ಕರ್ನಾಟಕದ ಶೇ 8.4ರಷ್ಟು ಕೊಡುಗೆ ನೀಡುತ್ತಿದೆ. ಜಿಎಸ್‌ಟಿ ಸಂಗ್ರಹದಲ್ಲಿ ಸತತವಾಗಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಇನ್ನು ಜಿಎಸ್‌ಟಿ ಸಂಗ್ರಹದ ಬೆಳೆವಣಿಗೆ ದರವನ್ನು ಗಮನಿಸಿದರೆ ಶೇ.17ರ ಸಾಧನೆಯ ಮೂಲಕ ದೇಶದಲ್ಲೇ ಮೊದಲ ಸ್ಥಾನದಲ್ಲಿ ಕರ್ನಾಟಕವಿದೆ ಎಂದಿದ್ದಾರೆ.
ವಿಪರ್ಯಾಸವೆಂದರೆ ಈ ಪ್ರಮಾಣದಲ್ಲಿ ಜಿಎಸ್‌ಟಿ ಹಣವನ್ನು ಕೇಂದ್ರಕ್ಕೆ ಸಂಗ್ರಹಿಸಿ ನೀಡಿದರೂ ಇದರಿಂದ ರಾಜ್ಯಕ್ಕೆ ಮರಳಿ ದೊರೆಯುತ್ತಿರುವುದು ಶೇ.52 ಪಾಲು ಮಾತ್ರ. ಜಿಎಸ್‌ಟಿಯ ಅವೈಜ್ಞಾನಿಕ ಅನುಷ್ಠಾನದಿಂದಾಗಿ ಕರ್ನಾಟಕವು 2017-18ರಿಂದ 2023-24ರವರೆಗೆ ಸುಮಾರು ರೂ. 59,274 ಕೋಟಿ ಹಣವನ್ನು ಕಳೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದ ಒಟ್ಟು ತೆರಿಗೆ ಸಂಗ್ರಹಕ್ಕೆ ಕರ್ನಾಟಕ ರೂ.4 ಲಕ್ಷ ಕೋಟಿ ರೂಪಾಯಿಗಳನ್ನು ನೀಡುತ್ತಿದ್ದರೂ ತೆರಿಗೆ ಹಂಚಿಕೆ ರೂಪದಲ್ಲಿ ನಮಗೆ ಸಿಗುತ್ತಿರುವ ಪಾಲು 45,000 ಕೋಟಿ ಮಾತ್ರ. ಇದರ ಜೊತೆಗೆ ಅನುದಾನದ ರೂಪದಲ್ಲಿ ಅಂದಾಜು 15,000 ಕೋಟಿ ರೂಪಾಯಿ ಸೇರಿರುತ್ತದೆ. ಇವೆಲ್ಲ ಕೂಡಿದರೆ ಕರ್ನಾಟಕ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ನೀಡುತ್ತಿರುವ ಪ್ರತಿಯೊಂದು ರೂಪಾಯಿಗೆ ಹಿಂದಿರುಗಿ ಬರುತ್ತಿರುವುದು ಕೇವಲ 15 ಪೈಸೆ ಮಾತ್ರ. ಈ ಅನ್ಯಾಯವನ್ನು ಎಷ್ಟು ದಿನ ಸಹಿಸಿಕೊಂಡಿರಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

ಕಳೆದ 8 ವರ್ಷಗಳ ಅವಧಿಯಲ್ಲಿ ಬಜೆಟ್ ಗಾತ್ರ ದುಪ್ಪಟ್ಟಿಗಿಂತ ಹೆಚ್ಚಾದರೂ ಕರ್ನಾಟಕಕ್ಕೆ ಸಿಗುವ ಕೇಂದ್ರದ ತೆರಿಗೆ ಪಾಲಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪ್ರಸಕ್ತ ಬಜೆಟ್ ಗಾತ್ರದ ಹೋಲಿಕೆಯಲ್ಲಿ ಕರ್ನಾಟಕಕ್ಕೆ ವಾರ್ಷಿಕ ಕನಿಷ್ಠ ರೂ.1 ಲಕ್ಷ ಕೋಟಿಯಷ್ಟು ಹಣ ತೆರಿಗೆಯ ಪಾಲು ಹಾಗೂ ಅನುದಾನದ ಮುಖೇನ ದೊರೆಯಬೇಕಿತ್ತು, ಆದರೆ ದೊರೆತಿಲ್ಲ ಎಂದು ವಿವರಿಸಿದ್ದಾರೆ.
ಕರ್ನಾಟಕಕ್ಕೆ ಈ ಪರಿಯ ದೊಡ್ಡ ಮಟ್ಟದ ಅನ್ಯಾಯ ಆಗಿರುವುದು ಮನವರಿಕೆಯಾದ ನಂತರವೇ ಹದಿನೈದನೇ ಹಣಕಾಸು ಆಯೋಗ ಕರ್ನಾಟಕಕ್ಕೆ ವಿಶೇಷ ಅನುದಾನದ ರೂಪದಲ್ಲಿ 5,495 ಕೋಟಿ ನೀಡಬೇಕೆಂದು ಶಿಫಾರಸು ಮಾಡಿತ್ತು. ಕನ್ನಡಿಗರ ಜನಪ್ರತಿನಿಧಿಯಾಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ಈ ಶಿಫಾರಸನ್ನು ನಿರಾಕರಿಸಿರುವ ಕಾರಣ ಆ ದುಡ್ಡು ಕೂಡಾ ಬರಲಿಲ್ಲ ಎಂದು ದೂರಿದ್ದಾರೆ.
ಕರ್ನಾಟಕದಿಂದ ಕ್ರೋಢೀಕರಿಸಲ್ಪಟ್ಟ ತೆರಿಗೆ ಕನ್ನಡಿಗರ ಕಷ್ಟನಷ್ಟಗಳಿಗೆ ಒದಗದೆ ಹೋದರೆ, ಕನ್ನಡಿಗರ ಕಣ್ಣೀರು ಒರೆಸಲು ಬಳಕೆಯಾಗದೆ ಹೋದರೆ, ಅಂತಹ ತೆರಿಗೆಯನ್ನು ಸಂಗ್ರಹಿಸಿ ಏನು ಪ್ರಯೋಜನ? ದೇಶದ ಅಭಿವೃದ್ದಿಗೆ ವರ್ಷಂಪ್ರತಿ ಲಕ್ಷೋಪಲಕ್ಷ ಕೋಟಿ ರೂಪಾಯಿ ಹಣವನ್ನು ತೆರಿಗೆಯಾಗಿ ನೀಡಿದ ನಂತರವೂ ಅಪರೂಪಕ್ಕೊಮ್ಮೆ ಬರುವಂತಹ ಅತಿವೃಷ್ಟಿ, ಅನಾವೃಷ್ಟಿಗಳ ಸಂದರ್ಭದಲ್ಲಿ ಕೆಲ ಸಾವಿರ ಕೋಟಿ ಹಣವನ್ನು ಕೇಂದ್ರ ನಮ್ಮವರ ಕಣ್ಣೀರು ಒರೆಸಲು ನೀಡದೆ ಹೋದರೆ ಒಕ್ಕೂಟ ವ್ಯವಸ್ಥೆಗೆ ಅರ್ಥವಿದೆಯೇ? ಈ ಪ್ರಶ್ನೆಗಳು ಇಂದು ನಮ್ಮ ಮುಂದಿವೆ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಕರ್ನಾಟಕವು ಒಕ್ಕೂಟ ವ್ಯವಸ್ಥೆಯೆಡೆಗೆ ತನಗಿರುವ ಎಲ್ಲ ಗೌರವವನ್ನು ಉಳಿಸಿಕೊಂಡೇ, ತನ್ನ ನ್ಯಾಯಯುತ ಪಾಲನ್ನು ಪಡೆಯಲು ಹೇಗೆ ಮುಂದುವರೆಯಬೇಕು ಎನ್ನುವ ಚರ್ಚೆಗಳು ಮುಂದಿನ ದಿನಗಳಲ್ಲಿ ಸಾರ್ವಜನಿಕವಾಗಿ ನಡೆಯಬೇಕಿದೆ. ಇಂತಹ ಒಂದು ರಚನಾತ್ಮಕ ಚರ್ಚೆ ವಿಜಯದಶಮಿಯ ಶುಭದಿನದಿಂದಲೇ ಶುರುವಾಗಲಿ ಎನ್ನುವುದು ನನ್ನ ಹಾರೈಕೆ ಎಂದು ಸಿಎಂ ಕರೆ ನೀಡಿದ್ದಾರೆ.












Click it and Unblock the Notifications