Hebbala Flyover: ಹೆಬ್ಬಾಳ ಮೇಲ್ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ; ಯೆಜ್ಡಿ ಬೈಕ್ ನಲ್ಲಿ ಡಿಕೆ ಶಿವಕುಮಾರ್ ಸವಾರಿ
ಬೆಂಗಳೂರು, ಆಗಸ್ಟ್ 18: ಸುಮಾರು 80 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ಬೆಂಗಳೂರಿನ ಹೆಬ್ಬಾಳ ಹೊಸ ಮೇಲ್ಸೇತುವೆಯನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದಾರೆ. 700 ಮೀಟರ್ ಉದ್ದದ ಹೆಬ್ಬಾಳ ಪ್ಲೈ ಓವರ್ ಸುಮಾರು 80 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಈ ಫ್ಲೈಓವರ್ ಕೆ.ಆರ್ ಪುರಂ ಕಡೆಯಿಂದ ಮೇಖ್ರಿ ಸರ್ಕಲ್ ವರೆಗೆ ನಿರ್ಮಾಣ ಮಾಡಲಾಗಿದೆ. ಇದರ ಕಾಮಗಾರಿಯು 2023ರಲ್ಲಿ ಆರಂಭ ಆಗಿದ್ದು, ಒಂದೂವರೆ ವರ್ಷಗಳ ಬಳಿಕ ಫ್ಲೈಓವರ್ ಕಾರ್ಯ ಪೂರ್ಣಗೊಂಡಿದೆ.
ಕೆಆರ್ ಪುರ ಕಡೆಯಿಂದ ಮೇಖ್ರಿ ವೃತ್ತದ ಕಡೆ ಸಾಗುವ ವಾಹನಗಳ ಸುಗಮ ಸಂಚಾರಕ್ಕೆ ಬಿಡಿಎ ವತಿಯಿಂದ ನಿರ್ಮಿಸಲಾಗಿರುವ ಹೆಬ್ಬಾಳ ಸೇತುವೆಯನ್ನು ಸಿಎಂ ಸಿದ್ದರಾಮಯ್ಯ ಅವರು ಮೊದಲು ಟೇಪ್ ಕತ್ತರಿಸಿ, ನಂತರ ಡಿಸಿಎಂ ಬೈಕ್ ರೈಡ್ ಗೆ ಹಸಿರು ಬಾವುಟ ತೋರಿ ಉದ್ಘಾಟಿಸಿದರು. ಡಿ.ಕೆ. ಶಿವಕುಮಾರ್ ಅವರು ತಮ್ಮ ಕಾಲೇಜು ದಿನಗಳಲ್ಲಿ ಬಳಸುತ್ತಿದ್ದ ಯಜ್ಡಿ ಬೈಕ್ ಚಾಲನೆಗೆ ಸಿಎಂ ಸಿದ್ದರಾಮಯ್ಯ ಅವರು ಹಸಿರು ನಿಶಾನೆ ತೋರುವ ಮೂಲಕ ಹೆಬ್ಬಾಳ ನೂತನ ಮೇಲ್ಸೇತುವೆಯನ್ನು ಉದ್ಘಾಟನೆ ಮಾಡಿದರು.

ಉದ್ಘಾಟನೆಯ ಬಳಿಕ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ನಗರದ ಸಂಚಾರ ದಟ್ಟಣೆ ತಪ್ಪಿಸಲು ನಮ್ಮ ಸರ್ಕಾರ ಮುಂದಡಿಯಿಟ್ಟಿದೆ. ಎಸ್ಟೀಮ್ ಮಾಲ್ ನಿಂದ ಬ್ಯಾಪ್ಟಿಸ್ಟ್ ಆಸ್ಪತ್ರೆವರೆಗೆ 1.5 ಕಿಲೋ ಮೀಟರ್ ಉದ್ದದ ನೂತನ ಟನಲ್ ರಸ್ತೆ ನಿರ್ಮಿಸಲಾಗುವುದು. ಇದರ ಸಾಧಕ- ಭಾದಕ ಹಾಗೂ ಹಣಕಾಸಿನ ನೆರವಿನ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.
ಕೆ.ಆರ್.ಪುರಂ ಕಡೆಯಿಂದ ಮೇಖ್ರಿ ಸರ್ಕಲ್ ಭಾಗದ ಲೂಪ್ ಅನ್ನು ರೂ.80 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇನ್ನೊಂದು ಭಾಗದ ಲೂಪ್ ಅನ್ನು ನವೆಂಬರ್ ಹೊತ್ತಿಗೆ ಪೂರ್ಣಗೊಳಿಸಲಾಗುವುದು. ಒಟ್ಟು ರೂ.300 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಎರಡು ಪಥಗಳು ಇರುವ ಕಡೆ ಆರು ಪಥಗಳು ಬರುವಂತೆ ಯೋಜನೆ ರೂಪಿಸಲಾಗಿದೆ ಎಂದರು. 17 ಸಾವಿರ ಕೋಟಿ ವೆಚ್ಚದಲ್ಲಿ 16.5 ಕಿಲೋಮೀರ್ ಉದ್ದದ ಟನಲ್ ರಸ್ತೆಗೆ ಟೆಂಡರ್ ಕರೆಯಲಾಗಿದೆ. ಹೆಬ್ಬಾಳ ಜಂಕ್ಷನ್ ನ ಮತ್ತೊಂದು ಲೂಪ್ ನಿರ್ಮಾಣವನ್ನು ತ್ವರಿತಗೊಳಿಸಲು ಬಿಡಿಎ ಅಧ್ಯಕ್ಷರಾದ ಹ್ಯಾರಿಸ್ ಅವರು ಜವಾಬ್ದಾರಿ ಹೊತ್ತುಕೊಂಡಿದ್ದಾರೆ ಎಂದರು.
ವಿಮಾನ ನಿಲ್ದಾಣದಿಂದ ಬರುವವರಿಗೆ ಸೇರಿದಂತೆ ಎಲ್ಲರೂ ಸಂಚಾರದಟ್ಟಣೆ ಅನುಭವಿಸುತ್ತಾ ಇದ್ದರು. ಇದನ್ನು ತಪ್ಪಿಸಲು ನಮ್ಮ ಸರ್ಕಾರ ಬದ್ದವಾಗಿದೆ. ಹೆಬ್ಬಾಳ ಜಂಕ್ಷನ್ ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ಸಂಚಾರ ದಟ್ಟನೆ ನಿಯಂತ್ರಣಕ್ಕೆ ಏನೇನು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳಿಗೆ ವಿವರಣೆ ನೀಡಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು.
ನಾನು ತುಂಬಾ ಪಾರದರ್ಶಕವಾಗಿದ್ದೇನೆ. ನನಗೆ ಕೆಲಸವಾಗುವುದು ಮುಖ್ಯವೇ ಹೊರತು ಹಣವಲ್ಲ. ಯುವ ಸಂಸದನೊಬ್ಬ ನಾವು ಹಣಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾನೆ. ನಮಗೆ ಹಣದ ಅಗತ್ಯವಿಲ್ಲ. ಅವರ (ಬಿಜೆಪಿ) ಅಧಿಕಾರಾವಧಿಯಲ್ಲಿ ಒಂದೇ ಒಂದು ಸಣ್ಣ ಕೆಲಸವನ್ನೂ ಮಾಡಿಲ್ಲ. ಅವರು ಒಂದೇ ಒಂದು ಕೆಲಸ ತೋರಿಸಲಿ. ಕೇಂದ್ರ ಸರ್ಕಾರದಿಂದ ಒಂದೇ ಒಂದು ರೂಪಾಯಿ ತರದಿರುವುದು ನಾಚಿಕೆಗೇಡಿನ ಸಂಗತಿ. ಬೆಂಗಳೂರು ಜಾಗತಿಕ ನಗರ, ಪ್ರಧಾನಿಯವರು ಕೂಡ ಇದನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ಬಿಜೆಪಿ ಧರ್ಮಸ್ಥಳ ವಿಚಾರದಲ್ಲಿ ಟೀಕೆ ಮಾಡುತ್ತಿರುವ ಬಗ್ಗೆ ಮಾತನಾಡಿ, ರಾಜಕೀಯದಲ್ಲಿ ಧರ್ಮವಿರಬೇಕೆ ಹೊರತು ಧರ್ಮದಲ್ಲಿ ರಾಜಕಾರಣವಿರಬಾರದು. ಬಿಜೆಪಿಯವರು ಧರ್ಮದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ತಮ್ಮ ರಾಜಕೀಯಕ್ಕೆ ಧರ್ಮ ಬಳಸಿಕೊಳ್ಳುತ್ತಿದ್ದಾರೆ ಎಂದರು. ಎಸ್ ಐಟಿ ಸರ್ಕಾರಕ್ಕೆ ವರದಿ ಸಲ್ಲಿಸಿಕೆ ಕುರಿತು ಗೃಹಸಚಿವರು ಉತ್ತರಿಸುತ್ತಾರೆ ಎಂದರು.












Click it and Unblock the Notifications