E Khata: ಇ-ಖಾತಾ ಕುರಿತು ಜಿಲ್ಲಾಧಿಕಾರಿ ಜೊತೆ ಸಿಎಂ ವಿಡಿಯೋ ಕಾನ್ಫರೆನ್ಸ್: ಸಿದ್ದರಾಮಯ್ಯ ಕೊಟ್ಟ ಸೂಚನೆಗಳೇನು?
ಬೆಂಗಳೂರು, ಫೆಬ್ರವರಿ 18: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದ ಮಹಾನಗರಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತಾ ನೀಡುವ ಕುರಿತು ಜಿಲ್ಲಾಧಿಕಾರಿಗಳು, ಯೋಜನಾ ನಿರ್ದೇಶಕರು, ಮಹಾನಗರ ಪಾಲಿಕೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಪೌರಾಯುಕ್ತರು, ಮುಖ್ಯಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ನಗರ ಸಂಸ್ಥೆ ವ್ಯಾಪ್ತಿಯಲ್ಲಿ ತಲೆ ಎತ್ತಿ ಅನಧಿಕೃತ ಬಡಾವಣೆಗಳಿಂದಾಗಿ ಆದಾಯ ಸಂಗ್ರಹಕ್ಕೆ ಭಾರಿ ಹೊಡೆತ ಬಿದ್ದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಕಳೆದ ದ 20-30 ವರ್ಷಗಳಿಂದ ಸಮಸ್ಯೆ ಇದೆ. 20ಲಕ್ಷ ಆಸ್ತಿಗಳು ಕ್ರಮ ಬದ್ಧವಾಗಿವೆ. ಆದರೂ ಅಂದಾಜು 40ಲಕ್ಷ ಆಸ್ತಿಗಳು ನೋಂದಣಿ ಆಗಿರುವುದಿಲ್ಲ . ಸಂಗ್ರಹ ವಾಗಿರಬೇಕಿರುವಷ್ಟು ಆದಾಯ ಸಂಗ್ರಹವಾಗುತ್ತಿಲ್ಲ. ಭವಿಷ್ಯದಲ್ಲಿ ಯಾವುದೇ ಅನಧಿಕೃತ ಬಡಾವಣೆಗಳು ತಲೆ ಎತ್ತುವ ಹಾಗಿಲ್ಲ , ಭವಿಷ್ಯದಲ್ಲಿ ಬಿ ಖಾತೆಗಳನ್ನು ನೀಡುವುದಿಲ್ಲ. ಹೊಸ ಬಿ ಖಾತಾ ಸೃಷ್ಟಿಯಾದರೆ ಅವರ ಮೇಲೆ ಕಾಯ್ದೆ ಅನ್ವಯ ಕಟ್ಟುನಿಟ್ಟಿನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅನಧಿಕೃತ ಬಡಾವಣೆಗಳಿಗೆ /ಆಸ್ತಿಗಳಿಗೆ. ಬಿ ಖಾತಾ ನೀಡುವ ಕುರಿತು ಗ್ರಾಮ ಪಂಚಾಯಿತಿ ಗಳಲ್ಲಿಯೂ ವ್ಯಾಪಕ ಪ್ರಚಾರ ಮಾಡಿ ಅನಧಿಕೃತ ಆಸ್ತಿಗಳಿಗೆ ಬಿ ಖಾತಾನೀಡಿ ಡಿಜಿಟೈಜ್ ಮಾಡಿಕೊಡುವ ಬಗ್ಗೆ ಅಭಿಯಾನ ಕೈಗೊಂಡು ಮೂರು ತಿಂಗಳ ಒಳಗಾಗಿ ಒಂದು ಬಾರಿಗೆ ಮುಗಿಸಬೇಕು. ಜನತೆ ಈ ಅಭಿಯಾನವನ್ನು ಸದುಪಯೋಗ ಪಡಿಸಿಕೊಳ್ಳಲು ಕರೆ ನೀಡಿದರು.
ಮಹಾನಗರ ಪಾಲಿಕೆ/ ಸ್ಥಳೀಯ ಸಂಸ್ಥೆಗಳಲ್ಲಿ /ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಇನ್ನು ಯಾವುದೇ ಅನಧಿಕೃತ ಬಡಾವಣೆಗಳು ತಲೆ ಎತ್ತುವ ಹಾಗಿಲ್ಲ. ಇದರ ಉಲ್ಲಂಘನೆ ಆದರೆ ಸಂಬಂಧಿಸಿದ ಜಿಲ್ಲಾಧಿಕಾರಿಗಳು, ಕಂದಾಯ ಅಧಿಕಾರಿಗಳೇ ಹೊಣೆ ಆಗುತ್ತಾರೆ. ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಒಂದು ಬಾರಿಗೆ ಖಾತೆ ನೀಡಿ ಇದಕ್ಕೆ ಅಂತ್ಯ ಹಾಡಲು ಸರ್ಕಾರ ತೀರ್ಮಾನಿಸಿದೆ.
ಭವಿಷ್ಯದಲ್ಲಿ ಬಿ ಖಾತಾ ಸೃಷ್ಟಿಯಾದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು, ಇದು ದಂಡಾರ್ಹ ಅಪರಾಧ ಎಂದು ಪರಿಗಣಿಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.
ಸಿದ್ದರಾಮಯ್ಯ ಕೊಟ್ಟ ಸೂಚನೆಗಳು ಇಲ್ಲಿವೆ
ಅನಧಿಕೃತ ಬಡಾವಣೆಗಳು ನಗರ, ಪಟ್ಟಣ, ಪಾಲಿಕೆ ವ್ಯಾಪ್ತಿ ಮತ್ತು ಹಳ್ಳಿಗಳಲ್ಲೂ ಇವೆ. ಇವೆಲ್ಲಕ್ಕೂ ನಾವು ಅಂತ್ಯ ಹಾಡುತ್ತಿದ್ದೇವೆ. ಇನ್ನು ಮುಂದೆ ಅನಧಿಕೃತ ಬಡಾವಣೆಗಳಿಗೆ ರಾಜ್ಯದಲ್ಲಿ ಕಿಂಚಿತ್ತೂ ಅವಕಾಶ ಇಲ್ಲ. ಕಾಯ್ದೆ ಮೂಲಕ ಅನಧಿಕೃತ ಬಡಾವಣೆಗಳಿಗೆ ಅಂತ್ಯ ಹಾಡಿದ್ದೇವೆ, ಅಧಿಕಾರಿಗಳು ಸ್ಪಷ್ಟವಾಗಿ ಅರ್ಥ ಮಾಡಿಕೊಂಡು ಕೆಲಸ ಮಾಡಿ. ಅನಧಿಕೃತ ಬಡಾವಣೆಗಳಿಂದ ಕಂದಾಯ ಬರುತ್ತಿಲ್ಲ, ಪರಿಣಾಮ ಜನರಿಗೆ ನಾಗರಿಕ ಸವಲತ್ತುಗಳೂ ಸಿಗುತ್ತಿಲ್ಲ, ಸ್ಥಳೀಯ ಸಂಸ್ಥೆಗಳಿಗೆ ಆದಾಯವೂ ಬಂದ್ ಆಗಿದೆ. ಇವೆಲ್ಲಾ ಅನಾನುಕೂಲಗಳಿಗೂ ಅಂತ್ಯ ಹಾಡಬೇಕಿದೆ ಎಂದು ತಿಳಿಸಿದರು.
ಕಂದಾಯ ಕಟ್ಟದಿರುವುದರಿಂದ ಇಷ್ಟೆಲ್ಲಾ ಸಮಸ್ಯೆಗಳಾಗಿವೆ. ಒಂದು ಬಾರಿ, ಇದೊಂದು ಬಾರಿ ಬಿ ಖಾತಾ ಕೊಟ್ಟು ಅಂತ್ಯ ಹಾಡ್ತೀವಿ, This is only one time measure. ನಿಮಗೆ 3 ತಿಂಗಳು ಮಾತ್ರ ಟೈಮ್ ಕೊಟ್ಟಿದ್ದೀವಿ. ಇಷ್ಟರೊಳಗೆ ಅಭಿಯಾನ ನಡೆಸಿ ಪೂರ್ಣಗೊಳಿಸಿ. ಯಾವುದೇ ರಾಜಿ ಇಲ್ಲ. ಅಧಿಕಾರಿಗಳು ರಾಜಿ ಮಾಡಿಕೊಂಡರೆ ಸಹಿಸಲ್ಲಎಂದು ಎಚ್ಚರಿಕೆ ಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅನಧಿಕೃತ ಬಡಾವಣೆಗಳು ಮತ್ತೆ ತಲೆ ಎತ್ತಿದರೆ ಜಿಲ್ಲಾಧಿಕಾರಿ, ಮುಖ್ಯ ಅಧಿಕಾರಿ, ನಗರ ಯೋಜನಾ ಅಧಿಕಾರಿಗಳು ಜವಾಬ್ದಾರಿ ಆಗ್ತೀರಿ. ನಿಮ್ಮ ಮೇಲೆ ಮುಲಾಜಿಲ್ಲದೆ ಕ್ರಮ ತಗೊತೀವಿ ಎಂದು ಎಚ್ಚರಿಕೆ ನೀಡಿದರು.
ಮಧ್ಯವರ್ತಿಗಳಿಗೆ, ಬ್ರೋಕರ್ ಗಳಿಗೆ ತಕ್ಷಣ ಗೇಟ್ ಪಾಸ್ ಕೊಡಿ. ಇದನ್ನು ಮತ್ತು ಕಾಯ್ದೆಯ ದೂರದೃಷ್ಟಿಯನ್ನು ನೀವೆಲ್ಲರೂ ಸ್ಪಷ್ಟವಾಗಿ, ಖಚಿತವಾಗಿ ಅರ್ಥ ಮಾಡಿಕೊಳ್ಳಿ. ರಾಜ್ಯದಲ್ಲಿ ಇನ್ನೆಲ್ಲೂ ಅನಧಿಕೃತ ಬಡಾವಣೆಗಳು, ರೆವಿನ್ಯೂ ಬಡಾವಣೆಗಳು ತಲೆ ಎತ್ತಬಾರದು. ಅನಧಿಕೃತ , ರೆವಿನ್ಯೂ ಬಡಾವಣೆಗಳಲ್ಲಿ ಸೈಟು, ಮನೆ ಕಟ್ಟಿರುವವರಿಗೆ ತೊಂದರೆ ಆಗಬಾರದು. ಒಟ್ಟಾರೆಯಾಗಿ ಬಡವರು, ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಡಲು one time solution ಕೊಟ್ಟಿದ್ದೀವಿ. 3 ತಿಂಗಳಲ್ಲಿ ಎಲ್ಲರಿಗೂ ಖಾತಾ ನೀಡಿ ಅಂತ್ಯ ಹಾಡಿ. ನಾನು ಮತ್ತು ಸಂಬಂಧಪಟ್ಟ ಎಲ್ಲಾ ಸಚಿವರೂ ಸ್ಪಷ್ಟಪಡಿಸಿದ್ದೀವಿ. ಹೊಸ confusion ಗಳಿಗೆ, ಗೊಂದಲಗಳಿಗೆ ಅವಕಾಶ ಮಾಡಿಕೊಡಬೇಡಿ. ಬಿ ಖಾತಾ ಇವತ್ತಿನಿಂದಲೇ ಕೊಡಲು ಶುರು ಮಾಡಿ ಎಂದು ಸಿದ್ದರಾಮಯ್ಯ ಅವರು ಸೂಚನೆ ನೀಡಿದರು.












Click it and Unblock the Notifications