ಕರ್ನಾಟಕದಲ್ಲಿ ಕುರ್ಚಿ ಕದನ; ಡಿಕೆ ಬಣದ ವಿರುದ್ಧ ಅಹಿಂದ ಸಮಾವೇಶಕ್ಕೆ ಸಿದ್ದು ಪ್ಲಾನ್: ಡಿಕೆಶಿ ಸಿಎಂ ಕನಸು ಭಗ್ನ!
ಬೆಂಗಳೂರು: ಮೈಕೊರೆಯುವ ಚಳಿಯಲ್ಲೂ ಕರ್ನಾಟಕ ರಾಜಕಾರಣದಲ್ಲಿ ಕುರ್ಚಿ ಕದನ ಕಾವೇರಿದೆ. ಮುಖ್ಯಮಂತ್ರಿ ಸ್ಥಾನದ ಕುರ್ಚಿ ಹಗ್ಗಜಗ್ಗಾಟ ಸದ್ಯ ತಾರಕಕ್ಕೇರಿಗೆ. ರಾಜ್ಯ ರಾಜಕೀಯದಲ್ಲಿ ನವೆಂಬರ್ ಕ್ರಾಂತಿಯಾಗಲಿದೆ ಎಂಬ ಚರ್ಚೆ ಕೇವಲ ಚರ್ಚೆಯಾಗಿಯೇ ಉಳಿದಿದೆ. ನವೆಂಬರ್ ಆಯ್ತು, ಡಿಸೆಂಬರ್ ಆಯ್ತು. ಸದ್ಯ ಇದೀಗ ಜನವರಿಯ ಸಂಕ್ರಾಂತಿ ನಡೆಯಲಿದೆ ಎಂಬ ಚರ್ಚೆ ಕೈ ಪಾಳಯದಲ್ಲಿಯೇ ಶುರುವಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಇಬ್ಬರೂ ವೈಲೆಂಟ್ ಆಗಿದ್ದಾರೆ. ಹೀಗಾಗಿ ಕರ್ನಾಟಕ ಕುರ್ಚಿ ಕದನಕ್ಕ ಇನ್ನಷ್ಟು ರಂಗು ತಂದಿದೆ.
ಈಗಾಗಲೇ ಅಧಿಕಾರ ಹಂಚಿಕೆಯ ಸೂತ್ರದಂತೆ ಸಿದ್ದರಾಮಯ್ಯ ಅವರು ಎರಡೂವರೆ ವರ್ಷವನ್ನ ಪೂರೈಸಿದ್ದು, ಇತ್ತ ಜನವರಿ 6 ರಂದು ಸಿಎಂ ಸಿದ್ದರಾಮಯ್ಯ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂಬ ದಾಖಲೆ ಬರೆಯಲಿದ್ದಾರೆ. ಇದೇ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಆಗಲಿದೆ ಎಂಬ ನಿರೀಕ್ಷೆಯಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಬಣ ಇದೆ. ಆದರೆ ಸಿದ್ದರಾಮಯ್ಯಗೆ ಬಲ ತುಂಬಲು ತವರು ಜಿಲ್ಲೆಯಲ್ಲೇ ಅಹಿಂದ ಕಹಳೆ (ಅಹಿಂದ ಸಮಾವೇಶ) ಮೊಳಗಲಿದೆ.

ನಾಯಕತ್ವ ಬದಲಾವಣೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಯಾರನ್ನೇ ಕೇಳಿದರೂ ಸಹ ಎಲ್ಲರ ಬೆರಳು ನೇರವಾಗಿ ಹೈಕಮಾಂಡ್ ಕಡೆಗೆ ತಿರುಗುತ್ತೆ. ಆದರೆ ಕೈಪಾಳಯದಲ್ಲಿ ಶುರುವಾದ ಈ ಗೊಂದಲವನ್ನ ಇಲ್ಲೇ ಬಗೆಹರಿಸಿಕೊಳ್ಳಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಇದರಿಂದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಣಗಳಲ್ಲಿ ಗೊಂದಲ ಸೃಷ್ಟಿಸಿದೆ. ಹೇಗಾದರೂ ಮಾಡಿ ಸಿಎಂ ಆಗಲೇಬೇಕೆಂದು ಹಠಕ್ಕೆ ಬಿದ್ದಿರುವ ಡಿಸಿಎಂ ಡಿಕೆ ಶಿವಕುಮಾರ್ ಮೂರ್ನಾಲ್ಕು ಬಾರೀ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ತೆರಳಿದ್ರು ಸಹ ರಾಹುಲ್ ಗಾಂಧಿ ಭೇಟಿಗೆ ಸಮಯ ಸಿಗದೆ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಆದರೆ, ಇತ್ತ ಸಿದ್ದರಾಮಯ್ಯನವರ ಶಕ್ತಿ ಪ್ರದರ್ಶಿಸಲು ಅಹಿಂದ ಸಮಾವೇಶಕ್ಕೆ ಸಿದ್ಧತೆಗಳು ನಡೆದಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಅಹಿಂದ ಸಮಾವೇಶ ಮಾಡಲು ತೀರ್ಮಾನಿಸಲಾಗಿದ್ದು, ರಾಜ್ಯ ಕಾಂಗ್ರೆಸ್ನಲ್ಲಿ ಸಂಚಲನ ಮೂಡಿಸಿದೆ. ಜನವರಿ 25ಕ್ಕೆ ಮೈಸೂರಿನಲ್ಲಿ ಅಹಿಂದ ಸಮಾವೇಶ ನಡೆಯಲಿದೆ. ಈ ಮೂಲಕ ಸಿಎಂ ಬದಲಾವಣೆ ಆಗಬಾರದು ಎಂದು ಒತ್ತಡ ಸೃಷ್ಟಿಸುವ ಉದ್ದೇಶ ಈ ಅಹಿಂದ ಸಮಾವೇಶದ್ದಾಗಿದೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ವತಿಯಿಂದ ಮೈಸೂರಿನಲ್ಲಿ ಪೂರ್ವಭಾವಿ ಸಭೆ ನಡೆಸಿದೆ. ಮೈಸೂರಿನ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಅಹಿಂದ ಸಮಾವೇಶ ನಡೆದಲು ಉದ್ದೇಶಿಸಲಾಗಿದೆ. ಇನ್ನೂ ಅಹಿಂದ ಸಮಾವೇಶಕ್ಕೆ ಸುಮಾರು 30 ರಿಂದ 40 ಸಾವಿರ ಜನರನ್ನು ಸೇರಿಸಲು ಸಿದ್ದತೆ ಮಾಡಲಾಗಿದೆ. ಇನ್ನೂ ಈ ಅಹಿಂದ ಸಮಾವೇಶದಲ್ಲಿ ಸಿಎಂ ಭಾಗಿಯಾಗಲ್ಲ. ಅವರ ಬೆಂಬಲಿಗರು, ಚಿಂತಕರು, ಸಾಹಿತಿಗಳು ಭಾಗಿಯಾಗಲಿದ್ದಾರೆ.
ಈ ಹಿಂದೆ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದ ಮಾದರಿಯಲ್ಲೇ ಮೈಸೂರಿನಲ್ಲಿ ಅಹಿಂದ ಸಮಾವೇಶ ನಡೆಸಲು ಸಿದ್ಧತೆ ನಡೆದಿದೆ. ಇದು ಡಿ.ಕೆ. ಶಿವಕುಮಾರ್ ಬಣಕ್ಕೆ ಕೊಡುತ್ತಿರುವ ದೊಡ್ಡ ಎಚ್ಚರಿಕೆಯಾಗಿದೆ ಎಂದು ಹೇಳಲಾಗಿದೆ. ಡಿ.ಕೆ. ಶಿವಕುಮಾರ್ ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿಗೆ ಕಾಯುತ್ತಿದ್ದರೆ, ಇತ್ತ ಸಿದ್ದರಾಮಯ್ಯ ರಾಜ್ಯದ ತುಂಬೆಲ್ಲಾ ತಮ್ಮ ಜನಪ್ರಿಯತೆಯನ್ನು ಸಾಬೀತುಪಡಿಸಲು ಮುಂದಾಗಿದ್ದಾರೆ.
ಇನ್ನೂ ನಾಯಕತ್ವ ಬದಲಾವಣೆ ಕುರಿತು ರಾಹುಲ್ ಗಾಂಧಿ ಅವರ ಮೌನವು ಒಂದು ರೀತಿಯಲ್ಲಿ ಯಥಾಸ್ಥಿತಿ ಕಾಪಾಡುವ ತಂತ್ರದಂತೆ ಕಾಣುತ್ತಿದೆ. ಅಂದರೆ, ಸಿದ್ದರಾಮಯ್ಯ ಅವರೇ ಮುಂದುವರಿಯಲಿ ಎಂಬ ಪರೋಕ್ಷ ಸಂದೇಶವನ್ನೂ ಇದು ನೀಡುತ್ತಿದೆ. ಇದೇ ಕಾರಣಕ್ಕೆ ಸಿದ್ದರಾಮಯ್ಯ ಕೂಡ ರಾಹುಲ್ ಗಾಂಧಿಯೇ ತೀರ್ಮಾನ ಮಾಡಲಿ ಎಂದು ಹೇಳುತ್ತಿರುವುದು. ಸಿದ್ದರಾಮಯ್ಯ ಅವರಿಗೆ ಈಗಾಗಲೇ ಗೊತ್ತು ರಾಹುಲ್ ಗಾಂಧಿಯವರು ತಮ್ಮನ್ನು ಕುರ್ಚಿ ಇಂದ ಇಳಿಸಲು ಸಾಧ್ಯವಿಲ್ಲ ಎಂದು. ಆದರೆ, ಈ ನಡುವೆ ಡಿ ಕೆ ಶಿವಕುಮಾರ್ ಬಣಕ್ಕೆ ಬಿಸಿ ಮುಟ್ಟಿಸಲು ಅಹಿಂದ ಸಮಾವೇಶಕ್ಕೆ ನಡೆಸಲು ಪ್ಲಾನ್ ಮಾಡಿದ್ದು, ಅಹಿಂದ ಸಮಾವೇಶದ ಮೂಲಕ ಡಿ ಕೆ ಶಿವಕುಮಾರ್ ಸಿಎಂ ಕನಸು ಭಗ್ನವಾಗಲಿದೆ ಎಂದು ಹೇಳಲಾಗಿದೆ.












Click it and Unblock the Notifications