ಜೆಡಿಎಸ್ ಪಕ್ಷ ಕಟ್ಟಿದ್ದೇ ನಾವು, ಆಗ ಕುಮಾರಸ್ವಾಮಿಯೇ ಇರಲಿಲ್ಲ!
ಜೆಡಿಎಸ್ ಪಕ್ಷವನ್ನು ಕಟ್ಟಿದವರು ನಾವು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಜೆಡಿಎಸ್ ಈಗ ಜಾತ್ಯತೀತವಾಗಿ ಉಳಿದಿದೆಯೇ? ಕೋಮುವಾದಿಗಳ ಜೊತೆಗೆ ಸೇರಿದ ಮೇಲೆ ಯಾವ ರೀತಿ ಸೆಕ್ಯುಲರ್ ಆಗಿದೆ? ಸಂವಿಧಾನದಲ್ಲಿ ಜಾತ್ಯತೀತ, ಸಮಾಜವಾದಿ ಎಂದು ಸೇರ್ಪಡೆಯಾಗಿದೆ. ಸರ್ವೋಚ್ಚ ನ್ಯಾಯಾಲಯವೂ ಜಾತ್ಯತೀತ ಇರಲೇಬೇಕೆಂದು ಹೇಳಿದೆ. ಜೆಡಿಎಸ್‌ನವರಿಗೆ ಪಕ್ಷ ಯಾವ ಹಿನ್ನೆಲೆಯಲ್ಲಿ ಕಟ್ಟಲಾಗಿದೆ ಎಂದು ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ ಪಕ್ಷ ರಚನೆಗೊಂಡಾಗ ಕುಮಾರಸ್ವಾಮಿ ಇರಲಿಲ್ಲ. ನಾನು ದೇವೇಗೌಡರು, ಇಬ್ರಾಹಿಂ, ಸತೀಶ್ ಜಾರಕಿಹೊಳಿ, ಮಹದೇವಪ್ಪ, ವೆಂಕಟೇಶ್, ಲಕ್ಷ್ಮೀ ಸಾಗರ್ ಸೇರಿ ಜೆಡಿಎಸ್ ರಚನೆ ಆಗಿದ್ದು. ದೇವೇಗೌಡರು ರಾಷ್ಟ್ರೀಯ ಅಧ್ಯಕ್ಷರಾದರು, ನಾನು ರಾಜ್ಯಾಧ್ಯಕ್ಷನಾದೆ. ಇದೆಲ್ಲಾ ಕುಮಾರಸ್ವಾಮಿ ಅವರಿಗೆ ಗೊತ್ತಾ? ಎಂದು ಪ್ರಶ್ನಿಸಿದ್ದಾರೆ.

ಜೆಡಿಎಸ್‌ನಿಂದ ನನ್ನನ್ನು ಉಚ್ಛಾಟಿಸಲಾಯಿತು. ನಾನು ಪಕ್ಷ ಬಿಡಲಿಲ್ಲ. ಕುಮಾರಸ್ವಾಮಿ ಅವರು ಹೇಳಿದ್ದನ್ನೇ ಸತ್ಯ ಎಂದು ಹೇಳಿದರೆ ಹೇಗೆ? ಸತ್ಯ ಸಂಗತಿಯೆಂದರೆ ನಾನು ಪಕ್ಷವನ್ನು ಬಿಡಲಿಲ್ಲ. ನನ್ನನ್ನು ದೇವೇಗೌಡರು ಉಚ್ಚಾಟಿಸಿದರು. ನಂತರ ನಾನು ಬೇರೆ ದಾರಿ ಇಲ್ಲದೆ ಅಹಿಂದ ಸಮಾವೇಶ ನಡೆಸಿದೆ, ಹಾಸನದಲ್ಲಿಯೂ ಸಮಾವೇಶ ಮಾಡಿದ್ದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಈಗ ಇಡೀ ರಾಜ್ಯದ ಜನರಿಗೆ ಕೃತಜ್ಞತೆ ಹೇಳಲು ಕಾಂಗ್ರೆಸ್ ಪಕ್ಷ ಮತ್ತು ಸ್ವಾಭಿಮಾನಿಗಳ ಒಕ್ಕೂಟದಿಂದ ಸಮಾವೇಶ ಏರ್ಪಡಿಸಲಾಗಿದೆ. ಕಾಂಗ್ರೆಸ್ ಪಕ್ಷ ಮತ್ತು ಸ್ವಾಭಿಮಾನಿಗಳ ಸಂಘದ ಜಂಟಿ ಆಶ್ರಯದಲ್ಲಿ ಸಮಾವೇಶ ನಡೆಯುತ್ತಿದೆ. ಇದಕ್ಕೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಆಹ್ವಾನಿಸಲಾಗಿದೆ. ಪಕ್ಷವು ಇದರಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ನಾಳೆ ಮಹತ್ವದ ಸಭೆ ಎಂದ ಡಿಕೆಶಿ: ಹಾಸನದಲ್ಲಿ ನಡೆಸಲು ಉದ್ದೇಶಿಸಿರುವ ಕಾಂಗ್ರೆಸ್ ಪಕ್ಷದ ಸಮಾವೇಶದ ಕುರಿತು ಇಂದು ಕೆಪಿಸಿಸಿ ಕಚೇರಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಸಭೆ ನಡೆಸಿದ್ರು. ಕಾಂಗ್ರೆಸ್ ಪಕ್ಷಕ್ಕೆ ಒಂದು ದೊಡ್ಡ ಇತಿಹಾಸವಿದ್ದು, ನಮ್ಮ ಜನಪರ ಕಾರ್ಯಕ್ರಮಗಳನ್ನು ಜನರು ಮೆಚ್ಚಿದ್ದಾರೆ. ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಜನರು ನಮ್ಮ ಪಕ್ಷವನ್ನು ಗೆಲ್ಲಿಸಿದ್ದಾರೆ. ನಮ್ಮ ಕಾರ್ಯಕ್ರಮಗಳನ್ನು ಬೆಂಬಲಿಸಿ ಜನರು ಅಭಿನಂದನೆ ಸಲ್ಲಿಸಲು ಮುಂದೆ ಬಂದಿದ್ದಾರೆ. ಹಾಗಾಗಿ ಈ ಸಮಾವೇಶ ಮುಖ್ಯವಾಗಿದೆ ಎಂದು ಡಿಸಿಎಂ ಹೇಳಿದ್ದಾರೆ.
ಎಲ್ಲ ಕಡೆ ಈ ಸಮಾವೇಶ ನಡೆಸಿ ನಮ್ಮ ಗ್ಯಾರಂಟಿಗಳ ಕುರಿತು ಮಾಹಿತಿ ನೀಡಬೇಕಿದೆ. ಇದಲ್ಲದೆ ಮಹಾತ್ಮ ಗಾಂಧೀಜಿ ಅವರ ನೇತೃತ್ವದಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಶತಮಾನೋತ್ಸವ ಆಚರಣೆ ಕೂಡ ಹಮ್ಮಿಕೊಂಡಿದ್ದೇವೆ. ಹಾಗಾಗಿ ನಾಳೆ ನಡೆಯುವ ಮತ್ತೊಂದು ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಲಿದೆ ಎಂದು ಹೇಳಿದ್ದಾರೆ.
ಚಂದ್ರಶೇಖರ ಸ್ವಾಮೀಜಿ ಕೇಸ್ ಬಗ್ಗೆ ಸಿಎಂ ಹೇಳಿದ್ದಿಷ್ಟು..
ಮುಸ್ಲಿಮರ ಮತದಾನದ ಹಕ್ಕು ರದ್ದು ಮಾಡುವ ಹೇಳಿಕೆ ನೀಡಿದ್ದ ಒಕ್ಕಲಿಗ ಸಮುದಾಯದ ಚಂದ್ರಶೇಖರ ಸ್ವಾಮೀಜಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ವಿಚಾರ ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಕಾಂಗ್ರೆಸ್ ಅನ್ನು ಒಕ್ಕಲಿಗರ ವಿರೋಧಿ ಎಂದು ಬಿಜೆಪಿ ಆರೋಪ ಮಾಡುತ್ತಿದೆ. ಇನ್ನು ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಚಂದ್ರಶೇಖರ ಸ್ವಾಮೀಜಿ ಅವರ ಪ್ರಕರಣದಲ್ಲಿ ಪೊಲೀಸರು ಕಾನೂನಿನ ದೃಷ್ಟಿಯಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತಾರೆ. ಕಾನೂನಿನ ಚೌಕಟ್ಟಿನೊಳಗೆ ಬಂದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇಲ್ಲವಾದರೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಒಕ್ಕಲಿಗ ವಿರೋಧಿ ಕಾಂಗ್ರೆಸ್ ಸರ್ಕಾರದಿಂದ ಒಕ್ಕಲಿಗ ಸ್ವಾಮೀಜಿಗೆ ಅವಮಾನವಾಗಿದೆ. ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರು ತಮ್ಮ ಹೇಳಿಕೆಯನ್ನು ವಾಪಾಸ್ ಪಡೆದಿದ್ದರೂ, ಅವರ ವಿರುದ್ದ ಕ್ರಮ ಕೈಗೊಳ್ಳಲು ಮುಂದಾಗಿರುವುದು ಕಾಂಗ್ರೆಸ್‌ನ ಒಕ್ಕಲಿಗ ವಿರೋಧಿ ಮನಸ್ಥಿತಿಯ ಸುಸ್ಪಷ್ಟ ನಿದರ್ಶನ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು.












Click it and Unblock the Notifications