ಕಾಫಿ ಬೆಳೆಗಾರರ ನೀರಾವರಿ ಪಂಪ್‌ಸೆಟ್ ಬಡ್ಡಿ ಬಾಕಿ ಮನ್ನಾ; ಇಲ್ಲಿದೆ ಮಹತ್ವದ ಮಾಹಿತಿ
ಬೆಂಗಳೂರು, ನವೆಂಬರ್ 21: ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಾಫಿ ಬೆಳೆಗಾರರ 10 ಹೆಚ್.ಪಿ ಮತ್ತು ಅದಕ್ಕಿಂತ ಕಡಿಮೆ ಸಾಮರ್ಥ್ಯದ ನೀರಾವರಿ ಪಂಪ್‌ಸೆಟ್‌ಗಳ ವಿದ್ಯುತ್ ಬಿಲ್ ಅಸಲು 47.7 ಕೋಟಿ ರೂ. ಮತ್ತು ಬಡ್ಡಿ 16.47 ಕೋಟಿ ರೂ. ಸೇರಿ ಒಟ್ಟು 64.24 ಕೋಟಿ ರೂ. 2023ರ ಸೆಪ್ಟೆಂಬರ್ 30 ರವರೆಗೆ ಬಾಕಿ ಉಳಿದಿದೆ. ರೈತರು ಅಸಲು ಮೊತ್ತ ಪಾವತಿಸಿದ ನಂತರ ಸಂಚಿತ ಬಡ್ಡಿಯನ್ನು ಮನ್ನಾ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾತ್ವಿಕವಾಗಿ ಒಪ್ಪಿಗೆ ನೀಡಿದ್ದಾರೆ ಎಂದು ಇಂಧನ ಸಚಿ ಕೆ ಜೆ ಜಾರ್ಜ್ ಹೇಳಿದರು.
ಈ ಕುರಿತು ಸುದ್ದಿಗೋಷ್ಟಿ ನಡೆಸಿದ ಅವರು, ತೀವ್ರ ಬರದ ನಡುವೆಯೂ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು ರಾಜ್ಯ ಸರ್ಕಾರವು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಸದ್ಯದ ಅಂಕಿ ಅಂಶಗಳ ಪ್ರಕಾರ, ರಾಜ್ಯದ ದೈನಂದಿನ ವಿದ್ಯುತ್ ಬೇಡಿಕೆ ಸುಮಾರು 14,000 ಮೆ.ವ್ಯಾ ಆಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀರಾವರಿ ಪಂಪ್‌ಸೆಟ್ ಫೀಡರ್‌ಗಳಿಗೆ 7 ತಾಸು ವಿದ್ಯುತ್ ಪೂರೈಕೆ ಮಾಡುವಂತೆ ಸೂಚನೆ ನೀಡಿದ್ದಾರೆ ಎಂದು ಇಂಧನ ಸಚಿ ಕೆ ಜೆ ಜಾರ್ಜ್ ಹೇಳಿದರು.
ಮುಂದಿನ ಬೇಸಿಗೆಗೆ ಇಂಧನ ಇಲಾಖೆಯ ಸಿದ್ಧತೆ:

2024ರ ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಸರಾಸರಿ ವಿದ್ಯುತ್ ಬೇಡಿಕೆ ಸುಮಾರು 15,500 ಮೆ.ವ್ಯಾ ನಿಂದ 16,500 ಮೆ.ವ್ಯಾ. ತಲುಪುವ ನಿರೀಕ್ಷೆಯಿದೆ. ರಾಜ್ಯದ ವಿದ್ಯುತ್ ಬೇಡಿಕೆಯನ್ನು ಪೂರೈಸಲು, ಇಂಧನ ಮಾರುಕಟ್ಟೆಯಿಂದ ವಿದ್ಯುತ್ ಸಂಗ್ರಹಣೆ ಮತ್ತು ಪಂಜಾಬ್ (300ಮೆ.ವ್ಯಾ) ಮತ್ತು ಉತ್ತರ ಪ್ರದೇಶದಿಂದ (100-600ಮೆ.ವ್ಯಾ.) ವಿದ್ಯುತ್ ವಿನಿಮಯ. ರಾಜ್ಯದ ಉಷ್ಣ ವಿದ್ಯುತ್ ಉತ್ಪಾದನೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸುವುದು ಮತ್ತು ಎಓಹೆಚ್ ಜನರೇಟರ್‌ಗಳ ಕಾರ್ಯಾಚರಣೆ ಪುನಾರಂಭಿಸಲಾಗುವುದು.
ಕೆಪಿಸಿಎಲ್‌ನ ಉಷ್ಣ ವಿದ್ಯುತ್ ಸ್ಥಾವರಗಳ ಉತ್ಪಾದನೆಯನ್ನು 3500 ಮೆ.ವ್ಯಾವರೆಗೆ ಹೆಚ್ಚಿಸುವುದು. 370 ಮೆ.ವ್ಯಾ. ಸಾಮರ್ಥ್ಯದ ಯಲಹಂಕ ಅನಿಲ ಸ್ಥಾವರದಲ್ಲಿ ಶೀಘ್ರದಲ್ಲೇ ಉತ್ಪಾದನೆ ಆರಂಭಿಸಲು ಕ್ರಮಕೈಕೊಳ್ಳಲಾಗಿದೆ. ಬೇಡಿಕೆ ಆಧರಿಸಿ ಅಲ್ಪಾವಧಿ ಆಧಾರದಲ್ಲಿ 1500 ಮೆ.ವ್ಯಾ. ವಿದ್ಯುತ್ ಖರೀದಿಸಲು ಕೆಇಆರ್‌ಸಿ ಅನುಮೋದನೆ ಪಡೆದು, ಪ್ರಕ್ರಿಯೆ ಪ್ರಾರಂಭಿಸಲಾಗಿದೆ.

2023ರ ಅಕ್ಟೋಬರ್ 17ರಿಂದ ಸೆಕ್ಷನ್ 11 ಜಾರಿಗೊಳಿಸಲಾಗಿದ್ದು, ಉತ್ಪಾದಕರಿಂದ 1000ಮೆ.ವ್ಯಾ.ಗೂ ಹೆಚ್ಚಿನ ವಿದ್ಯುತ್ ಪಡೆದುಕೊಳ್ಳಲಾಗಿದೆ. ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಿಗೆ 2023ರ ಅಕ್ಟೋಬರ್‌ನಿಂದ ತಿಂಗಳಿಗೆ 2 ಲಕ್ಷ ಟನ್‌ಗಳಷ್ಟು ಹೆಚ್ಚುವರಿ ಕಲ್ಲಿದ್ದಲು ಲಭ್ಯವಾಗುತ್ತಿದೆ, 2023ರ ಡಿಸೆಂಬರ್ 1ರಿಂದ ಕೂಡಿಗಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ 150 ಮೆ.ವ್ಯಾ ಉತ್ಪಾದನೆ ಪುನಾರಂಭಿಸಲಾಗುವುದು. ಥರ್ಮಲ್ ಜನರೇಟರ್‌ಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು ದೇಶೀಯ ಕಲ್ಲಿದ್ದಲಿನೊಂದಿಗೆ ಅಮದು ಕಲ್ಲಿದ್ದಲನ್ನು ಸರಾಸರಿ ಶೇ.10ರಷ್ಟು ಮಿಶ್ರಣ ಮಾಡಲಾಗುವುದು.
ಭಾಗ್ಯ ಜ್ಯೋತಿ /ಕುಟೀರ ಜ್ಯೋತಿಯ ಮನ್ನಾ ಬಾಕಿ
ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಯೋಜನೆಯ 2.64 ಲಕ್ಷ ಫಲಾನುಭವಿಗಳು ಬಾಕಿ ಉಳಿಸಿಕೊಂಡಿದ್ದಾರೆ. ವಿದ್ಯುತ್ ಶುಲ್ಕ 389.66 ಕೋಟಿ ರೂ. ಮನ್ನಾ ಮಾಡಿ, ಗೃಹ ಜ್ಯೋತಿ ಯೋಜನೆಗೆ ಸೇರ್ಪಡೆಗೊಳಿಸಲಾಗಿದೆ, ಜುಲೈ ತಿಂಗಳಿನಿಂದ ಅನ್ವಯವಾಗುವಂತೆ ಜಾರಿಗೊಳಿಸಿರುವ 'ಗೃಹ ಜ್ಯೋತಿ'ಯ ಲಾಭ ಪಡೆಯಲು ಇದ್ದ ತೊಡಕನ್ನು ನಿವಾರಿಸಲಾಗುತ್ತೆ. 200 ಯೂನಿಟ್ ವರೆಗೆ ವಿದ್ಯುತ್ ಉಚಿತವಾಗಿ ಬಳಸಲು ಈ ಮೂಲಕ ಅನುಕೂಲ ಮಾಡಿಕೊಡಲಾಗಿದೆ.
ರಾಜ್ಯದ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಉತ್ಪಾದನೆ ಹೆಚ್ಚಳಕ್ಕೆ ಕ್ರಮ
ಯಲಹಂಕ ಸಂಯೋಜಿತ ಸೈಕಲ್ ಸ್ಥಾವರಕ್ಕೆ (ವೈಸಿಸಿಪಿ) ಅಗತ್ಯ ಗ್ಯಾಸ್ ಪೂರೈಸಿ, 6 ತಿಂಗಳೊಳಗೆ ಕಾರ್ಯಗತಗೊಳಿಸಲು ಸರ್ಕಾರದಿಂದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ (SECI) ದಿಂದ 1100 ಮೆ.ವ್ಯಾ. ಹೈಬ್ರಿಡ್ (ಪವನ, ಸೌರ ಮತ್ತು ಸಂಗ್ರಹಣಾ) ಇಂಧನ ಪಡೆಯಲು ಕ್ರಮ ವಹಿಸಲಾಗಿದೆ.
ಗ್ರೀನ್ ಹೈಡೋಜನ್ ಸಂಬಂಧಿಸಿದ ನವೀಕರಿಸಿದ ಇಂಧನ ಯೋಜನೆಗಳಿಗೆ ಬೃಹತ್ ಪ್ರಮಾಣದ ವಿದ್ಯುತ್ ಪ್ರಸರಣಕ್ಕೆ ಅನುಕೂಲವಾಗುವಂತೆ ಮೂಲಸೌಕರ್ಯ ಕಲ್ಪಿಸಲು ಕೇಂದ್ರ ಇಂಧನ ಸಚಿವಾಲಯದ ಮುಂದೆ ಹಸಿರು ಶಕ್ತಿ ಕಾರಿಡಾರ್ (ಜಿಇಸಿ-111) ಪ್ರಸ್ತಾವನೆ ಮಂಡಿಸಲು ರಾಜ್ಯ ಸರ್ಕಾರ ಯೋಜಿಸಿದೆ.
ನೀರಾವರಿ ಪಂಪ್‌ಸೆಟ್‌ಗಳಿಗೆ ಅಗತ್ಯ ಇರುವ ಹೆಚ್ಚುವರಿ ವಿದ್ಯುತ್ ಪೂರೈಸುವ ಉದ್ದೇಶದಿಂದ ರಾಜ್ಯದಲ್ಲಿ ವಿದ್ಯುತ್ ಉತ್ಪಾದಿಸುವ ಖಾಸಗಿಯವರು ಹೊರ ರಾಜ್ಯಗಳಿಗೆ ಮಾರಾಟ ಮಾಡದಂತೆ ವಿದ್ಯುತ್ ಕಾಯಿದೆ, 2003ರ ಸೆಕ್ಷನ್ 11 ಜಾರಿಗೊಳಿಸಲಾಗಿದೆ.
ಫೀಡರ್ ಮಟ್ಟದ ಸೌರ ವಿದ್ಯುತ್ ಉತ್ಪಾದನಾ ಸಬ್‌ಸ್ಟೇಷನ್ ಮೂಲಕ'ಕುಸುಮ್ ಸಿ' 1 ನೇ ಹಂತದಲ್ಲಿ 1300 ಮೆಗಾವ್ಯಾಟ್ ಮತ್ತು 2 ನೇ ಹಂತದಲ್ಲಿ 1200 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಇದ್ದು, ಈಗಾಗಲೇ 768 ಮೆಗಾವ್ಯಾಟ್ ಉತ್ಪಾದನೆಗೆ ಬಿಡ್ ತೆರೆಯಲಾಗಿದೆ. ಶೀಘ್ರದಲ್ಲೇ ಕಾರ್ಯಾದೇಶ ನೀಡಲಾಗುವುದು. ಶರಾವತಿಯಲ್ಲಿ ಕೆಪಿಸಿಎಲ್ ಪ್ರಸ್ತಾಪಿಸಿದ 2000 ಮೆ.ವ್ಯಾ. ಪಂಪ್ ಸ್ಟೋರೇಜ್ ಉತ್ಪಾದನಾ ಯೋಜನೆಯನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು. ಛತ್ತೀಸ್‌ಗಢದ ಗೋಡ್ಯಾದಲ್ಲಿ ಖಾಸಗಿ/ಜಂಟಿ ಸಹಭಾಗಿತ್ವದಲ್ಲಿ ಕ್ಯಾಪ್ಟಿವ್ ಕಲ್ಲಿದ್ದಲು ಗಣಿಗಾರಿಕೆಗೆ ರಾಜ್ಯ ಮುಂದಾಗಿದೆ.
ಟಿಹೆಚ್‌ಡಿಸಿ ಜತೆ ಒಪ್ಪಂದ:
ರಾಜ್ಯದಲ್ಲಿ 2500 ಮೆ.ವ್ಯಾ. ಪಂಪ್ಸ್ ಸ್ಟೋರೇಜ್, ಹೈಡೋ, ಸೋಲಾರ್ ಸೇರಿದಂತೆ 15,000 ಕೋಟಿ ರೂ. ಮೊತ್ತದ ವಿವಿಧ ವಿದ್ಯುತ್ ಯೋಜನೆಗಳನ್ನು ಕೈಗೊಳ್ಳುವ ಸಂಬಂಧ ಕೇಂದ್ರ ಸರ್ಕಾರ ಸ್ವಾಮ್ಯದ ತೆಹಿ ಹೈಡ್ರ ಡೆವಲಪ್‌ಮೆಂಟ್ ಕಾರ್ಪೊರೇಶನ್ ಲಿಮಿಟೆಡ್ ಜತೆ ರಾಜ್ಯ ಸರ್ಕಾರ ಸಹಿ ಹಾಕಿದೆ.
ಗೃಹಜ್ಯೋತಿ ಯೋಜನೆಯ ವಿವರಗಳು
2023ರ ನವೆಂಬರ್ ತಿಂಗಳ ಈವರೆಗೆ ನೋಂದಾಯಿಸಿರುವ ಒಟ್ಟು ಗ್ರಾಹಕರು: 1.61 ಕೋಟಿ
ಪ್ರಯೋಜನ ಪಡೆಯುತ್ತಿರುವ ಒಟ್ಟು ಗ್ರಾಹಕರು: 1.50 ಕೋಟಿ
ತಿಂಗಳ ಒಟ್ಟು ಸಬ್ಸಿಡಿ ಮೊತ್ತ: 780 ಕೋಟಿ ರೂ.
ಇಲ್ಲಿಯವರೆಗೆ ಬಿಡುಗಡೆಯಾದ ಒಟ್ಟು ಸಬ್ಸಿಡಿ ಮೊತ್ತ (4 ತಿಂಗಳುಗಳು): 2900 ಕೋಟಿ ರೂ












Click it and Unblock the Notifications