ಮೋದಿ ವಿರುದ್ದ ಸಿದ್ದರಾಮಯ್ಯ ತಾಳಿದ ರೌದ್ರಾವತಾರ
ಬೆಂಗಳೂರು, ಮಾ 5: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಒಂದು ವೇಳೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಅವರು ದೇಶಕ್ಕೆ ಬೆಂಕಿ ಹಚ್ಚಲು ಹಿಂದೆ ಮುಂದೆ ನೋಡುವುದಿಲ್ಲ ಎನ್ನುವ ಗಂಭೀರ ಹೇಳಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸರ್ವಜ್ಞ ನಗರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಮೋದಿ ಈಗಾಗಲೇ ಪ್ರಧಾನಿಯಾಗಿದ್ದೇನೆ ಎನ್ನುವ ಭ್ರಮೆಯಲ್ಲಿದ್ದಾರೆ. ಅಹಂಕಾರದಿಂದ ದೇಶ ಸುತ್ತಿ ಭಾಷಣ ಮಾಡಿದರೆ ಜನರು ಅವರಿಗೆ ಮತ ಹಾಕುವುದಿಲ್ಲ ಎಂದು ಟೀಕಿಸಿದ್ದಾರೆ.
ಮೋದಿ ವಿರುದ್ದ ಇದೇ ಮೊದಲ ಬಾರಿಗೆ ಎನ್ನುವಂತೆ ಅತ್ಯಂತ ಕಟು ಶಬ್ದಗಳಿಂದ ಟೀಕಾ ಪ್ರಹಾರ ನಡೆಸಿದ ಸಿದ್ದರಾಮಯ್ಯ, ಮೋದಿಯನ್ನು ಯಾಕೆ ಪ್ರಧಾನಿಯನ್ನಾಗಿ ಮಾಡಬೇಕು. ಗುಜರಾತಿನಂತೆ ದೇಶದಲ್ಲಿ ಇನ್ನೊಂದು ಸಾಮೂಹಿಕ ನರಮೇಧ ನಡೆಸಲಾ ಎಂದು ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲ ತಾಣ, ಕಾರ್ಪೋರೇಟರ್ ಸೆಕ್ಟರ್, ಟಿವಿಯಲ್ಲಿ ಜನಪ್ರಿಯಗೊಂಡರೆ ಬಡವರ ಮತ್ತು ಮಧ್ಯಮವರ್ಗದವರ ಮನ ಗೆದ್ದಂತಲ್ಲ ಎನ್ನುವುದನ್ನು ಬಿಜೆಪಿಯವರು ಮತ್ತು ಮೋದಿ ಮೊದಲು ಅರಿತು ಕೊಳ್ಳಲಿ. ಮೋದಿ ಈ ದೇಶದ ಪ್ರಧಾನಿಯಾದರೆ ಅದಕ್ಕಿಂತ ದೊಡ್ಡ ದುರಂತ ಇನ್ನೊಂದಿಲ್ಲ ಎಂದು ಸಿದ್ದು ಟೀಕಿಸಿದ್ದಾರೆ.
ಆರು ದಶಕಗಳಿಂದ ಕಾಂಗ್ರೆಸ್ ಪಕ್ಷ ದೇಶವನ್ನು ಮುನ್ನಡೆಸಿ ಕೊಂಡು ಬಂದಿದೆ. ದೇಶದ ಅಭಿವೃದ್ದಿ ಏನಿದ್ದರೂ ಅದು ಕಾಂಗ್ರೆಸ್ಸಿನಿಂದ ಕೋಮುವಾದಿಗಳಿಂದಲ್ಲ. ದೇಶದಲ್ಲಿ ಜಾತಿಯ ವಿಷಬೀಜ ಬಿತ್ತಿ ಬಿಜೆಪಿಯವರು ದೇಶವನ್ನು ನಿರ್ನಾಮ ಮಾಡುತ್ತಾರೆ ಎಂದು ಸಿದ್ದು ಎಚ್ಚರಿಸಿದ್ದಾರೆ.
ಮೋದಿ ಒಬ್ಬ ಪಿಶಾಚಿ, ಜಾಫರ್ ಶರೀಫ್, ಸಿದ್ದು ವಾಗ್ದಾಳಿ ಇನ್ನೂ ಇದೆ. ಮುಂದೆ ಓದಿ..

ಭ್ರಷ್ಟರನ್ನು ಪಕ್ಕದಲ್ಲಿ ಕೂರಿಸಿ ಭ್ರಷ್ಟಾಚಾರದ ಬಗ್ಗೆ ಪಾಠ
ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಮೋದಿ, ಹಕ್ಕಬುಕ್ಕರಂತಿರುವ ಯಡಿಯೂರಪ್ಪ ಮತ್ತು ಈಶ್ವರಪ್ಪ ಎನ್ನುವ ಭ್ರಷ್ಟರನ್ನು ಅಕ್ಕಪಕ್ಕದಲ್ಲಿ ಕೂರಿಸಿ ಕೊಂಡು ಭಾಷಣ ಮಾಡುತ್ತಾರೆ. ಇವರಿಗೆ ಭ್ರಷ್ಟಾಚಾರದ ಬಗ್ಗೆ ಪಾಠ ಹೇಳಲು ನೈತಿಕತೆ ಇದೆಯಾ, ಅದನ್ನು ಕೇಳುವ ಅವಶ್ಯಕತೆ ನಿಮಗಿದೆಯಾ ಎಂದು ಸಿದ್ದು ವಾಕ್ ಪ್ರಹಾರ ನಡೆಸಿದ್ದಾರೆ.

ಮಾತಿನ ಮೇಲೆ ನಿಗಾ ಇಲ್ಲದ ಬಿಜೆಪಿ
ರಾಮಮಂದಿರ ಕಟ್ಟುವುದಾಗಿ ಹೇಳಿದರು. ಇಟ್ಟಿಗೆ ಮತ್ತು ದುಡ್ಡು ಸಂಗ್ರಹಿಸಿದರು. ಅದು ಎಲ್ಲಿಗೆ ಹೋಯಿತು? ಮಾತಿನ ಮೇಲೆ ನಿಗಾ ಇಲ್ಲದ ಇಂತಹ ಪಕ್ಷವನ್ನು ಬೆಂಬಲಿಸುವುದು ಎಷ್ಟು ಸೂಕ್ತ? ಈ ಅಯೋಗ್ಯ ಬಿಜೆಪಿ ಮತ್ತು ನರೇಂದ್ರ ಮೋದಿಯನ್ನು ಅಧಿಕಾರದ ಹತ್ತಿರಕ್ಕೆ ಬಿಡಬಾರದು ಎಂದು ಸಿದ್ದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯ ಸಾಧನೆ ಎಂದರೆ ಭ್ರಷ್ಟಾಚಾರ
ರಾಜ್ಯದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮೋದಿ, ಯಡಿಯೂರಪ್ಪನವರನ್ನು ಹೊಗಳಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದ 65 ವರ್ಷಗಳಲ್ಲಿ ನಡೆಯದ ಭ್ರಷ್ಟಾಚಾರವನ್ನು ಬಿಜೆಪಿ ಐದು ವರ್ಷಗಳಲ್ಲಿ ಮಾಡಿ ಮುಗಿಸಿದ್ದಾರೆ. ರಾಜ್ಯದ ಖಜಾನೆಯನ್ನು ನುಂಗಿ ನೀರು ಕುಡಿದಿದ್ದಾರೆ. ಇಂತವರನ್ನು ಬೆಂಬಲಿಸುವ ಮೋದಿ ಇನ್ನು ಹೇಗಿರ ಬೇಡ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮೋದಿ ಒಬ್ಬ ಪಿಶಾಚಿ
ಬಿಜೆಪಿ ಏನಿದ್ದರೂ ಮೇಲ್ಜಾತಿಯವರ ಪಕ್ಷ. ಅಲ್ಪಸಂಖ್ಯಾತ ಮತ್ತು ಹಿಂದುಳಿದವರಿಗೆ ಕಾಂಗ್ರೆಸ್ ಪಕ್ಷಕ್ಕಿಂತ ಇನ್ನೊಂದು ಪರ್ಯಾಯ ಪಕ್ಷ ಬೇಕಿಲ್ಲ. ನರಹಂತಕ ಮೋದಿ ಒಬ್ಬ ಪಿಶಾಚಿ. ಅವರಿಗೆ ಅಧಿಕಾರ ಕೊಟ್ಟರೆ ನಮ್ಮನ್ನು ಪಿಶಾಚಿಯಂತೆ ಕಾಡುತ್ತಾರೆ. ಬಿಜೆಪಿಯವರಿಗೆ ಮತ ಹಾಕುವ ಮುನ್ನ ಯೋಚಿಸಿ - ಜಾಫರ್ ಶರೀಫ್

ಗೌಡ್ರದ್ದು ಬರೀ ನಾಟಕ
ದೇವೇಗೌಡ ಮತ್ತು ಅವರ ಕುಟುಂಬದವರದ್ದು ರಾಜಕೀಯ ಜೀವನ ಬರೀ ನಾಟಕ ಮಾಡುವುದೇ ಆಗಿ ಹೋಯಿತು. ಚುನಾವಣೆ ಹತ್ತಿರ ಬರುತ್ತಿದ್ದಂತೆ ಅದೆಲ್ಲಿಂದ ಕಣ್ಣೀರು ಬರುತ್ತೋ ನಾ ಕಾಣೆ. ಮುಂದಿನ ಜನ್ಮದಲ್ಲಿ ಮುಸ್ಲಿಂನಾಗಿ ಹುಟ್ಟ ಬೇಕೆಂದು ಗೌಡ್ರು ಹೇಳುತ್ತಾರೆ. ಅವರ ನಾಟಕವನ್ನು ನಂಬಬೇಡಿ - ಸಿದ್ದರಾಮಯ್ಯ












Click it and Unblock the Notifications