ಸಾಲ ಮಾಡುವುದರಲ್ಲಿ ದಾಖಲೆ ಮಾಡಿದ ಸಿದ್ದರಾಮಯ್ಯ!
ಬೆಂಗಳೂರು, ಡಿಸೆಂಬರ್ 19 : ಕರ್ನಾಟಕದ ಜನರಿಗೆ ಹಲವು ಭಾಗ್ಯಗಳ ಯೋಜನೆಯನ್ನು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಲ ಮಾಡುವುದರಲ್ಲೂ ದಾಖಲೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ 22 ತಿಂಗಳಿನಲ್ಲಿ 39,161 ಕೋಟಿ ಸಾಲ ಮಾಡಿದೆ.
ಮಾಹಿತಿ ಹಕ್ಕು ಕಾರ್ಯಕರ್ತ ಮೂಡಲಗಿಯ ಭೀಮಪ್ಪ ಗಡಾದ ಅವರು ಹಣಕಾಸು ಇಲಾಖೆಯಿಂದ ಪಡೆದ ಮಾಹಿತಿ ಸಿದ್ದರಾಮಯ್ಯ ಅವರ ಸರ್ಕಾರ ಎಷ್ಟು ಸಾಲ ಮಾಡಿದೆ? ಎಂಬ ಮಾಹಿತಿ ನೀಡುತ್ತಿದೆ. ಸಿದ್ದರಾಮಯ್ಯ ಅವರು ಮಾಡಿರುವ ಸಾಲ ಹಿಂದಿನ ಮುಖ್ಯಮಂತ್ರಿಗಳ ಅವಧಿಯಲ್ಲಿ ಮಾಡಿರುವ ಸಾಲದ ಪ್ರಮಾಣಕ್ಕೆ ಹೋಲಿಸಿದರೆ ಅತ್ಯಧಿಕವಾಗಿದೆ. [ಸಿದ್ದರಾಮಯ್ಯ ಸರ್ಕಾರವನ್ನು ಕಾಡಿದ ವಿವಾದಗಳು]
ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಬಳಿಕ ಹಲವಾರು ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಇವುಗಳನ್ನು ಜಾರಿಗೆ ತರಲು ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸರ್ಕಾರ 39,161 ಸಾಲ ಮಾಡಿದೆ. [ಸಿದ್ದರಾಮಯ್ಯ ಸರಕಾರದ 10 ಜನಪ್ರಿಯ ಯೋಜನೆಗಳು]
ಕಾಂಗ್ರೆಸ್ನವರೇ ಆದ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿ ಸುಮಾರು ನಾಲ್ಕೂವರೆ ವರ್ಷ ಅಧಿಕಾರ ನಡೆಸಿದಾಗ ಮಾಡಿದ್ದಕ್ಕಿಂತ ಹೆಚ್ಚಿನ ಸಾಲವನ್ನು ಸಿದ್ದರಾಮಯ್ಯನವರ ಸರ್ಕಾರ ಕೇವಲ 22 ತಿಂಗಳಲ್ಲಿ ಮಾಡಿದೆ ಎಂಬ ಅಂಶ ಹಣಕಾಸು ಇಲಾಖೆಯ ಮಾಹಿತಿಯಿಂದ ಬಯಲಾಗಿದೆ.
ಸಿಎಂ ಸಿದ್ದರಾಮಯ್ಯ ಅವರೇ ಮೊದಲು
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ 22 ತಿಂಗಳಿನಲ್ಲಿ ಸರ್ಕಾರ 39,161 ಕೋಟಿ ಸಾಲ ಮಾಡಿದೆ. ಹಿಂದಿನ ಮುಖ್ಯಮಂತ್ರಿಗಳಿಗೆ ಹೋಲಿಸಿದರೆ ಸಾಲ ಮಾಡುವುದರಲ್ಲಿ ಸಿದ್ದರಾಮಯ್ಯ ಅವರೇ ಮೊದಲಿಗರು.
13,464 ಕೋಟಿ ಸಾಲ ಮಾಡಿದ ಶೆಟ್ಟರ್
ಸಿದ್ದರಾಮಯ್ಯ ಅವರಿಗಿಂತ ಹಿಂದೆ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ಅವರು ಸುಮಾರು 10 ತಿಂಗಳ ಕಾಲ ಆಡಳಿತ ಮಾಡಿದರು. ಈ ಸಂದರ್ಭದಲ್ಲಿ ಅವರು 13,464 ಕೋಟಿ ರೂ. ಸಾಲ ಮಾಡಿದ್ದರು.
ಗೌಡರು ಮಾಡಿದ ಸಾಲದ ಲೆಕ್ಕ
ಯಡಿಯೂರಪ್ಪ ಅವರು ರಾಜೀನಾಮೆ ನೀಡದ ಬಳಿಕ ಮುಖ್ಯಮಂತ್ರಿಯಾದ ಡಿ.ವಿ.ಸದಾನಂದ ಗೌಡರು ಸುಮಾರು 11 ತಿಂಗಳು ಆಡಳಿತ ನಡೆಸಿದರು. ಈ ಅವಧಿಯಲ್ಲಿ ಅವರು 9,357 ಕೋಟಿ ರೂ. ಸಾಲ ಮಾಡಿದ್ದರು.
40 ತಿಂಗಳಿನಲ್ಲಿ ಯಡಿಯೂರಪ್ಪ ಮಾಡಿದ ಸಾಲವೆಷ್ಟು?
ಭಾಗ್ಯಲಕ್ಷ್ಮೀ, ಸೈಕಲ್ ವಿತರಣೆ ಮುಂತಾದ ಜನಪ್ರಿಯ ಯೋಜನೆಯನ್ನು ಜಾರಿಗೆ ತಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸುಮಾರು 40 ತಿಂಗಳ ಆಡಳಿತದ ಅವಧಿಯಲ್ಲಿ 25,653 ಕೋಟಿ ರೂ. ಸಾಲ ಮಾಡಿದ್ದರು.
ಎಚ್ಡಿಕೆ ಮಾಡಿದ ಸಾಲದ ವಿವರ
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಟಿ20 ಸರ್ಕಾರದಲ್ಲಿ ಮುಖ್ಯಮಂತ್ರಿಯಾದ ಎಚ್.ಡಿ.ಕುಮಾರಸ್ವಾಮಿ ಅವರು 20 ತಿಂಗಳ ಅವಧಿಯಲ್ಲಿ 3,545.91 ರೂ. ಸಾಲ ಮಾಡಿದ್ದರು.
ಧರ್ಮಸಿಂಗ್ ಮಾಡಿದ ಸಾಲವೆಷ್ಟು?
ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ 20 ತಿಂಗಳು ಆಡಳಿತ ನಡೆಸಿದ ಧರ್ಮಸಿಂಗ್ ಅವರು 15,635 ಕೋಟಿ ಸಾಲ ಮಾಡಿದ್ದರು.
ಎಸ್.ಎಂ.ಕೃಷ್ಣ ಅವರು ಮಾಡಿದ ಸಾಲ
ಕಾಂಗ್ರೆಸ್ ಪಕ್ಷದವರೇ ಆದ ಎಸ್.ಎಂ.ಕೃಷ್ಣ ಅವರು ಸುಮಾರು ನಾಲ್ಕೂವರೆ ವರ್ಷ ಅಧಿಕಾರ ನಡೆಸಿದರು. ಈ ಸಂರ್ಭದಲ್ಲಿ ಅವರು 35,902.30 ಕೋಟಿ ಸಾಲ ಮಾಡಿದ್ದರು.