Kuruba community: ಕುರುಬ ಸಮುದಾಯದ ವಿಶೇಷ ಬೇಡಿಕೆಗೆ ಸಿಎಂ ಸಿದ್ದರಾಮಯ್ಯ ಗ್ರೀನ್‌ಸಿಗ್ನಲ್
ಸಿಎಂ ಸಿದ್ದರಾಮಯ್ಯ ಅವರು ತಮ್ಮ ಕುರುಬ ಸಮುದಾಯವರಿಗೆ ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಕುರುಬ ಸಮುದಾಯದವರ ಬಹುವರ್ಷಗಳ ಬೇಡಿಕೆಗೆ ಸಿಎಂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇಂದು ಬೆಂಗಳೂರಿನ ಗಾಂಧಿನಗರದಲ್ಲಿ ನಡೆದ ಪ್ರದೇಶ ಕುರುಬರ ಸಂಘ ಮತ್ತು ವಿದ್ಯಾರ್ಥಿನಿಲಯದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ 18 ತಿಂಗಳಲ್ಲಿ ನೂತನ ಕಟ್ಟಡ ನಿರ್ಮಾಣ ಆಗಲಿದೆ ಎಂದು ಭರವಸೆ ನೀಡಿದ್ದಾರೆ.
ಇದೇ ನೂರು ವರ್ಷದ ಹಳೆಯ ಕಟ್ಟಡವನ್ನು ತೆರವುಗೊಳಿಸಿ, ನೂತನ ಕಟ್ಟಡ ನಿರ್ಮಾಣಕ್ಕೆ ಪ್ರದೇಶ ಕುರುಬರ ಸಂಘದಿಂದ ಬೇಡಿಕೆ ಮತ್ತು ಒತ್ತಾಯ ಬಹಳ ವರ್ಷಗಳಿಂದ ಇತ್ತು. ಈಗ ಎಲ್ಲರನ್ನೂ ಒಪ್ಪಿಸಿ ಹಳೆಯ ಕಟ್ಟಡ ನೆಲಸಮ ಮಾಡಿ, ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ಕೂಡ ಆಗಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ 18 ತಿಂಗಳಲ್ಲಿ ಈ ಹೊಸ ಕಟ್ಟಡ ನಿರ್ಮಾಣ ಆಗಲಿದೆ ಎಂದಿದ್ದಾರೆ.

600 ಕುರುಬ ಸಮುದಾಯ ಭವನ
ರಾಜ್ಯ ಸರ್ಕಾರದಿಂದ 600 ಕುರುಬ ಸಮುದಾಯ ಭವನಗಳನ್ನು ಮಾಡಲು ಮುಂದಾಗಿದ್ದು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ, ದಾವಣಗೆರೆ ಸೇರಿ ರಾಜ್ಯದ ಹತ್ತು ಹಲವು ಕಡೆಗಳಲ್ಲಿ ಸಂಘಕ್ಕೆ ಜಾಗ-ಕಟ್ಟಡ ಉಳಿಸಿಕೊಟ್ಟಿದ್ದೇನೆ. ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಮಾಡಿದ್ದು ನಾನೇ, ಸಂಗೊಳ್ಳಿ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದು ನಾನೇ. ಈಗ ನನಗೂ ಮುಕುಡಪ್ಪನಿಗೂ ಆಗುವುದಿಲ್ಲ. ಆದರೆ ಕುರುಬ ಸಮಾಜಕ್ಕೆ ಆಸ್ತಿ ಉಳಿಸಿ, ಬೆಳೆಸುವ ಕಾರ್ಯದಲ್ಲಿ ಮುಕುಡಪ್ಪ ಸೇರಿ ಶಿವಣ್ಣ, ಮಾಸ್ತಿ, ಸಿದ್ದಲಿಂಗಯ್ಯ, ನಾಗಣ್ಣ ಹೀಗೆ ಹಲವರು ಜೊತೆಗೆ ನಿಂತು ಸಹಕಾರ ಮಾಡಿದರು ಎಂದು ನೆನೆದಿದ್ದಾರೆ.
ಹಳೆ ಕಟ್ಟಡದಲ್ಲಿದ್ದ ಹಾಸ್ಟೆಲ್‌ನಲ್ಲಿ ಓದಿದವರು ಒಳ್ಳೆಯ ಅಧಿಕಾರಿಗಳಾಗಿದ್ದಾರೆ. ಜಡ್ಜ್‌ಗಳೂ ಆಗಿದ್ದಾರೆ. ನಾನು 1983ರಲ್ಲಿ ಶಾಸಕನಾಗಿ 1984ರಲ್ಲಿ ಮಂತ್ರಿಯಾದೆ. ನಾನು ಸಾರಿಗೆ ಮಂತ್ರಿ ಆಗಿದ್ದಾಗ 1988ರಲ್ಲೇ ಕನಕದಾಸರ 500ನೇ ಜಯಂತ್ಸೋವವನ್ನು ಆಚರಣೆ ಮಾಡಿಸಿದೆ. ಇದೇ ಸಂದರ್ಭದಲ್ಲಿ ಸಮಾಜಕ್ಕೊಂದು ಗುರುಪೀಠ ಬೇಕು ಎಂದು ತೀರ್ಮಾನಿಸಿದೆ. ಆಗ ಸಂಘದ ಕಟ್ಟಡದ ಮೇಲೆ 3 ಕೋಟಿ ರೂಪಾಯಿ ಸಾಲ ಇತ್ತು. ಆ ಸಾಲದ ಸುಳಿಯಿಂದ ಸಂಘವನ್ನು ಬಿಡಿಸಿದ್ದು ನಾವು, ಇದು ಇತಿಹಾಸ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.

ಸಂಘದ ಕಟ್ಟಡದಲ್ಲಿ ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ ಉದ್ದೇಶವಾಗಿತ್ತು. ಸಮಾಜವನ್ನು ಒಡೆದು ಜಾತಿ ವ್ಯವಸ್ಥೆ ರೂಪಿಸಿದ ಸಿದ್ಧಾಂತ ಆರ್‌ಎಸ್‌ಎಸ್‌ನದ್ದು. ಈ ಸಿದ್ಧಾಂತ ಶ್ರಮಿಕ ಜಾತಿ, ವರ್ಗಗಳ ವಿರೋಧಿ. ಅದಕ್ಕೇ ನಾನು ಆರ್.ಎಸ್.ಎಸ್ ಅನ್ನು ಮೊದಲಿನಿಂದಲೂ ವಿರೋಧಿಸುತ್ತೇನೆ. ಇದೇ ಕಾರಣಕ್ಕೆ ಕಾಗಿನೆಲೆ ಪೀಠ ಎಲ್ಲ ಶೋಷಿತ ಸಮುದಾಯಗಳ ಪೀಠ ಆಗಬೇಕು ಎನ್ನುವುದನ್ನು ಪ್ರತಿಪಾದಿಸಿದ್ದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.












Click it and Unblock the Notifications