ಸಿದ್ದರಾಮಯ್ಯ 'ಜಾತಿ ಗಣತಿ' ತರಾತುರಿಗೆ ಕಾರಣ ಬೇರೆನೇ ಇದೆ: ಆರ್ ಅಶೋಕ
ಬೆಂಗಳೂರು, ಅಕ್ಟೋಬರ್ 08: ಕರ್ನಾಟಕ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಮುಡಾ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆಯೇ ನಿತ್ಯ ಚರ್ಚೆಯಾಗಿದ್ದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಬಹುದಿನಗಳ ಬೇಡಿಕೆಯೊಂದನ್ನು ಈಡೇರಿಲು ಮುಂದಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಬಿಜೆಪಿ ದೂರಿದೆ.
ಕರ್ನಾಟಕದಲ್ಲಿ ಜಾತಿ ಗಣತಿ ವರದಿ ಜಾರಿಯ ಬಳಕೆಯ ಕುರಿತು ವಿಪಕ್ಷ ನಾಯಕ ಆರ್.ಅಶೋಕ್ ಅವರು ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರ ಮುಡಾ ಹಗರಣದಿಂದ ಜನರ ದಾರಿ ತಪ್ಪಿಸಲು ಹೀಗೆಲ್ಲ ಜಾತಿ ವರದಿ ಬಳಕೆ ಮಾಡಿಕೊಳ್ಳುತ್ತಿದೆ. ಈ ವಿಚಾರವಾಗಿ ನಮ್ಮ ತಕರಾರು ಇದೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದಲ್ಲಿ ಜಾತಿ ಗಣತಿ ವರದಿ ಜಾರಿಗೆ ಬಿಜೆಪಿಯಿಂದ ಯಾವ ತಕರಾರು ಇಲ್ಲ ಅಥವಾ ವಿರೋಧವೂ ಇಲ್ಲ. ಬಿಜೆಪಿಯ ಮೂಲ ಸಿದ್ಧಾಂತವಾದ 'ಅಂತ್ಯೋದಯ'ದ ಪರಿಕಾಲ್ಪನೆಯಲ್ಲೇ ತಳ ಸಮುದಾಯಗಳನ್ನು ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂಬ ಸಾಮಾಜಿಕ ನ್ಯಾಯದ ಬದ್ಧತೆ ಅಡಗಿದೆ. ಅದನ್ನು ಸಾಕಾರಗೊಳಿಸುವ ಯಾವ ಕ್ರಮಕ್ಕಾದರೂ ನಮ್ಮ ಬೆಂಬಲವಿದೆ ಎಂದು ತಿಳಿಸಿದ್ದಾರೆ.
ರಾಜ್ಯ ರಾಜಕೀಯ ಚದುರಂಗದಾಟದಲ್ಲಿ ಜಾತಿ ಜನಗಣತಿಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ದಾಳವಾಗಿ ಬಳಸಿಕೊಳ್ಳತ್ತಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ರಾಜಕೀಯ ಹಾವು-ಏಣಿ ಆಟದಲ್ಲಿ ಕೆಳಗೆ ಬಿದ್ದಾಗ ಮೇಲೇಳಲು, ಕುರ್ಚಿ ಉಳಿಸಿಕೊಳ್ಳಲು ಈ ಜಾತಿ ಗಣತಿಯನ್ನು ಏಣಿಯಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಸಿಎಂ ಸಿದ್ದರಾಮಯ್ಯಗೆ ಸಾಲು ಸಾಲು ಪ್ರಶ್ನೆ
ಮುಡಾ ಪ್ರಕರಣದ ಎ1 ಆರೋಪಿ ಸಿಎಂ ಸಿದ್ದರಾಮಯ್ಯ ಅವರು ಆತ್ಮಸಾಕ್ಷಿ ಬಗ್ಗೆ ಮಾತನಾಡಿದ್ದಾರೆ. ಇದೆಲ್ಲ ನೋಡಿದರೆ ಅವರು ನನ್ನ ಈ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಆರ್.ಅಶೋಕ್ ಆಗ್ರಹಿಸಿದ್ದಾರೆ.

* ಸಿಎಂ ಸಿದ್ದರಾಮಯ್ಯನವರೇ ನಿಮಗೆ ನಿಜವಾಗಿಯೂ ಜಾತಿಗಣತಿಯ ಬಗ್ಗೆ ಬದ್ಧತೆ ಇದ್ದಿದ್ದರೆ, 2018ರಲ್ಲೇ ಕಾಂತರಾಜು ವರದಿಯನ್ನು ಏಕೆ ಸ್ವೀಕರಿಸಿ ಜಾರಿ ಮಾಡಲಿಲ್ಲ?
* ಹತ್ತು ವರ್ಷಗಳ ಹಿಂದೆ ಕೈಗೊಂಡ ಜಾತಿ ಜನಗಣತಿ ವೈಜ್ಞಾನಿಕವಾಗಿ ನಡೆದಿಲ್ಲ. ಅನೇಕ ಜನರ ಮನೆಗಳಿಗೆ ಭೇಟಿಯೇ ನೀಡಿಲ್ಲ ಎಂಬ ದೂರುಗಳಿವೆ. ಹೀಗಿರುವಾಗ ಈ ವರದಿಯನ್ನು ಈಗ ಮುನ್ನೆಲೆಗೆ ತರುವ ತರಾತುರಿ ಏಕೆ?
* ಈ ಅವೈಜ್ಞಾನಿಕ ಜಾತಿ ಜನಗಣತಿ ವರದಿ ಸ್ವೀಕರಿಸದಂತೆ ಒಕ್ಕಲಿಗರ ಸಂಘ ಮನವಿ ಸಲ್ಲಿಸಿದೆ. ಇದನ್ನ ಬೆಂಬಲಿಸಿ ಸ್ವತಃ ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರೇ ಸಹಿ ಮಾಡಿದ್ದಾರೆ. ತಮ್ಮದೇ ಪಕ್ಷದ ಹಿರಿಯ ನಾಯಕರು, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪನವರೂ ಸಹ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಅನೇಕ ಮಠಾಧೀಶರು, ಧಾರ್ಮಿಕ ಮುಖಂಡರು ಇದಕ್ಕೆ ಜಾತಿ ಗಣತಿ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ ಕಳೆದು 17 ತಿಂಗಳಿನಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಂದು ಸರ್ವಸಮ್ಮತವಾದ ನಿಲುವಿಗೆ ಬರುವ ಬದಲು ಈಗ ದಿಢೀರನೆ ಏಕಾಏಕಿ ವರದಿ ಸ್ವೀಕರಿಸಲು ಮುಂದಾಗಿರುವುದು ಯಾವ ಕಾರಣಕ್ಕೆ? ಎಂದು ಪ್ರಶ್ನಿಸಿದ್ದಾರೆ.
* ಇನ್ನೂ ಹಗರಣಗಳ ಸುಳಿಯಲ್ಲಿ ಸಿಲುಕಿ ಮುಜುಗರ ಅನುಭವಿಸುತ್ತಿರುವ ಪರಿಸ್ಥಿತಿಯಿಂದ ಜನರ ಗಮನ ಬೇರೆಡೆ ಸೆಳೆಯಲು ಜಾತಿ ಗಣತಿ ವರದಿಯನ್ನು ಒಂದು ರೀತಿ ದಾಳವಾಗಿ ಬಳಸಲಾಗುತ್ತಿದೆಯೇ?. ಅಲ್ಲವಾದರೆ ಉತ್ತರಿಸಿ ಎಂದಿದ್ದಾರೆ.
* ಜಾತಿ ಗಣತಿಯನ್ನ ರಾಜಕೀಯ ದಾಳವಾಗಿ ಬಳಸುವುದು ದಲಿತರಿಗೆ, ಹಿಂದುಳಿದ ವರ್ಗಗಳಿಗೆ, ತಳ ಸಮುದಾಯಗಳಿಗೆ ಮಾಡುವ ಅಪಮಾನವಲ್ಲವೇ? ಸಾಮಾಜಿಕ ನ್ಯಾಯವೆಂಬ ಪವಿತ್ರ ಪರಿಕಲ್ಪನೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದು ಆತ್ಮವಂಚನೆಯಲ್ಲವೇ?
ಇದೇ ತಿಂಗಳು ಅಕ್ಟೋಬರ್ 18ರಂದು ರಾಜ್ಯ ಸಂಪುಟ ಸಭೆ ನಡೆಯಲಿದೆ. ಅದಕ್ಕು ಮೊದಲು ಮುಖ್ಯಮಂತ್ರಿಗಳ 'ಆತ್ಮಸಾಕ್ಷಿ' ಈ ಪ್ರಶೆಗಳನ್ನು ಆತ್ಮಾವಲೋಕನ ಮಾಡಿ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.












Click it and Unblock the Notifications