ಬಿಜೆಪಿಯ ಆ ಎರಡು ಸವಾಲ್ ಗೆ ಕಾಂಗ್ರೆಸ್ ಉತ್ತರ ನೀಡುತ್ತಾ?
ಬೆಂಗಳೂರು, ಮಾರ್ಚ್ 14; ಪಂಚರಾಜ್ಯ ಚುನಾವಣೆಯ ಫಲಿತಾಂಶದ ಬಳಿಕ ರಾಜ್ಯ ಬಿಜೆಪಿಯಲ್ಲಿ ಹುಮ್ಮಸ್ಸು ಬಂದಿದ್ದರೆ, ಕಾಂಗ್ರೆಸ್‌ನಲ್ಲಿ ಆತಂಕ ಶುರುವಾಗಿದೆ. ಹೀಗಾಗಿಯೇ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಪಕ್ಷದ ಸಂಘಟನೆಯನ್ನು ಚುರುಕುಗೊಳಿಸುವ ಸಲುವಾಗಿ ಹೈಕಮಾಂಡ್ ನತ್ತ ಮುಖ ಮಾಡಿದ್ದಾರೆ.
ಇನ್ನು ಮೇಲಿಂದ ಮೇಲೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡುವಂತೆ ಬಿಜೆಪಿ ಸವಲು ಹಾಕುತ್ತಿರುವುದು ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇನ್ನು ಯಾರ ನೇತೃತ್ವದಲ್ಲಿ ಚುನಾವಣೆಗೆ ಹೋಗಬೇಕು? ಎಂಬ ಗೊಂದಲವೂ ಪಕ್ಷವನ್ನು ಕಾಡುತ್ತಿದೆ. ಇಷ್ಟರಲ್ಲೇ ಪದಾಧಿಕಾರಿಗಳ ನೇಮಕ ಮಾಡಿ ಪಕ್ಷಸಂಘಟನೆಗೆ ಇಳಿಯಬೇಕಾಗಿತ್ತು. ಆದರೆ ಪದಾಧಿಕಾರಿಗಳ ಪಟ್ಟಿಯನ್ನು ಸಿದ್ಧಗೊಳಿಸುವುದೇ ಡಿ. ಕೆ. ಶಿವಕುಮಾರ್‌ಗೆ ಸವಾಲಾಗಿದೆ.
ಡಿ. ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಪಕ್ಷದಲ್ಲಿ ಒಂದಷ್ಟು ಬದಲಾವಣೆಯಾಗಿ, ಸಂಘಟನೆಗೊಳ್ಳುತ್ತದೆ ಎಂಬ ನಂಬಿಕೆಯಿತ್ತಾದರೂ ಅಂತಹ ಹೇಳಿಕೊಳ್ಳುವಂತಹ ಬದಲಾವಣೆಗಳು ಇದುವರೆಗೆ ಕಾಣಲಿಲ್ಲ. ಅದಕ್ಕಿಂತ ಹೆಚ್ಚಾಗಿ ಕೆಪಿಸಿಸಿಯಲ್ಲಿ ಪದಾಧಿಕಾರಿಗಳ ನೇಮಕ ಕಗ್ಗಂಟಾಗಿ ಪರಿಣಮಿಸುವಂತಾಯಿತು.
ಕೆಪಿಸಿಸಿಯಲ್ಲಿ ಹಲವು ನಾಯಕರಿಗೆ ಜವಾಬ್ದಾರಿ ನೀಡಿದರೂ ಮಾಜಿ ಸಂಸದ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಹೊರತು ಪಡಿಸಿದರೆ ಬಹಳಷ್ಟು ನಾಯಕರು ಪಕ್ಷ ಸಂಘಟನೆಯತ್ತ ತೊಡಗಿಸಿಕೊಳ್ಳದಿರುವುದು ಎದ್ದು ಕಾಣಿಸುತ್ತಿದೆ. ಮುಂದಿನ ವರ್ಷ ಚುನಾವಣೆ ನಡೆಯುವುದರಿಂದ ಸಂಘಟನೆ ಚುರುಕುಗೊಳಿಸುವುದು ಅನಿವಾರ್ಯವಾಗಿದೆ.

ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ
ಹಳೆ ಮೈಸೂರು ಭಾಗದಲ್ಲಿ ಮಾತ್ರ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಆರ್. ಧ್ರುವನಾರಾಯಣ್ ಆಗಾಗ್ಗೆ ಕಾರ್ಯಕರ್ತರ ಸಭೆ ನಡೆಸಿ ಪಕ್ಷ ಸಂಘಟನೆಯತ್ತ ತೊಡಗಿಸಿಕೊಂಡಿರುವುದು ಕಂಡು ಬರುತ್ತಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸಪ್ರಸಾದ್ ಎದುರು ಸೋಲು ಕಂಡ ಧ್ರುವನಾರಾಯಣ್ ಅಲ್ಲಿಂದ ಇಲ್ಲಿ ವರೆಗೆ ಪಕ್ಷದ ವಿವಿಧ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬರುತ್ತಿದ್ದಾರೆ.

ಹಳೇ ಮೈಸೂರಿನತ್ತ ತಲೆಕೆಡಿಕೊಳ್ಳದ ಸಿದ್ದು
ಈ ನಡುವೆ ವಿ. ಶ್ರೀನಿವಾಸ ಪ್ರಸಾದ್ ಮುಂದಿನ ಚುನಾವಣೆಯಲ್ಲಿ ಕಣಕ್ಕಿಳಿಯುವುದಿಲ್ಲವೆಂದು ಘೋಷಣೆ ಮಾಡಿರುವುದರಿಂದ ಆರ್. ಧ್ರುವನಾರಾಯಣ್ ಹಾದಿ ಸುಗಮವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದು ಏನೇ ಇರಲಿ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಹಳೇ ಮೈಸೂರು ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಧ್ರುವನಾರಾಯಣ್ ಶ್ರಮಿಸುತ್ತಿರುವುದಂತು ಸತ್ಯ.
ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡ ಬಳಿಕ ಸಿದ್ದರಾಮಯ್ಯ ಹಳೇ ಮೈಸೂರು ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಂತ್ತಿಲ್ಲ. ಸದ್ಯ ಅವರಿಗೆ ಮುಂದಿನ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು? ಎಂಬುದೇ ಗೊಂದಲವಾಗಿದೆ.

ಜಿ. ಟಿ. ದೇವೇಗೌಡರು ಕಾಂಗ್ರೆಸ್‌ಗೆ?
ಮೈಸೂರಿನ ವರುಣ ಕ್ಷೇತ್ರದಿಂದ ಸ್ಪರ್ಧಿಸುತ್ತಾ ಬಂದಿದ್ದ ಸಿದ್ದರಾಮಯ್ಯ ವರುಣ ಕ್ಷೇತ್ರವನ್ನು ಪುತ್ರ ಯತೀಂದ್ರಗೆ ಬಿಟ್ಟುಕೊಟ್ಟು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಜಿ. ಟಿ. ದೇವೇಗೌಡರ ಎದುರು 2018ರ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕೆನ್ನುವುದೇ ಸಮಸ್ಯೆಯಾಗಿ ಪರಿಣಮಿಸಿದೆ.
ಬಾದಾಮಿ ಕ್ಷೇತ್ರದಿಂದ ಮರು ಆಯ್ಕೆ ಬಯಸಿ ಸ್ಪರ್ಧಿಸುವ ಲಕ್ಷಣಗಳು ಕಾಣಿಸುತ್ತಿಲ್ಲ. ಈ ನಡುವೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲ್ಲ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಜೆಡಿಎಸ್‌ನಲ್ಲಿ ತಟಸ್ಥವಾಗಿರುವ ಜಿ. ಟಿ. ದೇವೇಗೌಡರು ಕಾಂಗ್ರೆಸ್‌ಗೆ ಸೇರ್ಪಡೆಯಾಗುವುದು ಖಚಿತವಾಗುತ್ತಿದ್ದು, ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುವ ಸಾಧ್ಯತೆಯಿದೆ.

ಚಾಮುಂಡೇಶ್ವರಿಂದ ಎಚ್‌ಡಿಕೆ ಕಣಕ್ಕೆ?
ಇದೆಲ್ಲದರ ನಡುವೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಚಾಮುಂಡೇಶ್ವರಿ ಕ್ಷೇತ್ರದಿಂದ ಈ ಬಾರಿ ಸ್ಪರ್ಧಿಸುವುದಾಗಿ ಹೇಳುವುದರ ಮೂಲಕ ಗುಮ್ಮ ಬಿಟ್ಟಿದ್ದಾರೆ. ಒಂದು ವೇಳೆ ಜಿ. ಟಿ. ದೇವೇಗೌಡರು ಕಾಂಗ್ರೆಸ್ ನತ್ತ ಮುಖ ಮಾಡಿದರೆ, ಅವರಿಗೆ ಟಕ್ಕರ್ ಕೊಡಲು ಕುಮಾರಸ್ವಾಮಿ ಚಾಮುಂಡೇಶ್ವರಿ ಕ್ಷೇತ್ರದಿಂದ ಕಣಕ್ಕಿಳಿದರೂ ಅಚ್ಚರಿಪಡಬೇಕಾಗಿಲ್ಲ. ಕಾರಣ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಕಡೆಗೆ ಒಲವಿರುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜತೆಗೆ ಜಿ. ಟಿ. ದೇವೇಗೌಡರಿಗೆ ಪೈಪೋಟಿ ನೀಡುವ ನಾಯಕರ ಕೊರತೆಯೂ ಇದೆ.

ಕಾಂಗ್ರೆಸ್‌ನಲ್ಲಿ ಉತ್ತರವಿಲ್ಲ
2023ರ ಏಪ್ರಿಲ್ ವೇಳೆಗೆ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆಯಿದೆ. ಹೀಗಾಗಿ ಮುಂದಿನ ದಿನಗಳನ್ನು ಸದ್ಭಳಕೆ ಮಾಡಿಕೊಂಡು ಪಕ್ಷವನ್ನು ಸಂಘಟಿಸಲೇ ಬೇಕಾಗಿದೆ. ಜೆಡಿಎಸ್ ಎಚ್. ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ, ಬಿಜೆಪಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ತೆರಳುವುದಾಗಿ ಘೋಷಣೆ ಮಾಡಿದೆ. ಆದರೆ ಕಾಂಗ್ರೆಸ್ ಯಾರ ನೇತೃತ್ವದಲ್ಲಿ ತೆರಳುತ್ತದೆ? ಜತೆಗೆ ಮುಂದಿನ ಸಿಎಂ ಅಭ್ಯರ್ಥಿ ಯಾರು? ಈ ಎರಡು ಪ್ರಶ್ನೆಗಳಿಗೆ ಉತ್ತರ ದೊರೆತಿಲ್ಲ. ಸದ್ಯ ಮಟ್ಟಿಗೆ ಈ ಪ್ರಶ್ನೆಗಳಿಗೆ ಕಾಂಗ್ರೆಸ್‌ನಲ್ಲಿ ಉತ್ತರ ಇಲ್ಲದಂತಾಗಿದೆ.
ಕಾಂಗ್ರೆಸ್ ನಾಯಕರಲ್ಲಿ ಭಿನ್ನಾಭಿಪ್ರಾಯಗಳಿದ್ದು ಅದನ್ನು ಶಮನಗೊಳಿಸುವ ಕೆಲಸ ಹೈಕಮಾಂಡ್ ಮಾಡಿಲ್ಲ. ಮೇಲ್ನೋಟಕ್ಕೆ ನಾವೆಲ್ಲ ಒಟ್ಟಾಗಿದ್ದೇವೆ. ಒಟ್ಟಾಗಿಯೇ ಚುನಾವಣೆ ಎದುರಿಸುತ್ತೇವೆ ಎಂಬ ಹೇಳಿಕೆಯನ್ನು ನೀಡುತ್ತಿದ್ದರೂ ಎಲ್ಲವೂ ಸರಿಯಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ.
ದೆಹಲಿಯಿಂದ ಬಂದ ಬಳಿಕ ಡಿ. ಕೆ. ಶಿವಕುಮಾರ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಕೆಪಿಸಿಸಿಯಲ್ಲಿ ಯಾವ ರೀತಿಯ ಬದಲಾವಣೆಯಾಗುತ್ತದೆ? ಮುಂತಾದ ಕುತೂಹಲ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಮೂಡಿದೆ. ಇದೆಲ್ಲದರ ನಡುವೆ ಕಾಂಗ್ರೆಸ್ ಚುನಾವಣೆಗೆ ಮುನ್ನವೇ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತಾ? ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.












Click it and Unblock the Notifications