ರಾಜ್ಯ ಬಜೆಟ್: ನೇಕಾರರ ಅಭಿವೃದ್ಧಿಗೆ ಯೋಜನೆ ಘೋಷಣೆ: ಸಿಎಂ ಭರವಸೆ
ಬೆಂಗಳೂರು, ಜನವರಿ 22: ನೇಕಾರರ ಮೂಲ ವೃತ್ತಿ ಉಳಿಯಬೇಕು ಮತ್ತು ಬೆಳೆಯಬೇಕು. ಅದಕ್ಕಾಗಿ ಮುಂದಿನ ಆಯವ್ಯಯದಲ್ಲಿ ನೇಕಾರರ ಅಭಿವೃದ್ಧಿಗೆ ಸಂಬಂದಿಸಿದಂತೆ ಇನ್ನಷ್ಟು ಯೋಜನೆ ಘೋಷಿಸಲಾಗುವುದು. ಕಚ್ಚಾ ವಸ್ತುವಿನಿಂದ ಹಿಡಿದು, ತಂತ್ರಜ್ಞಾನ ಅಭಿವೃದ್ಧಿಯವರಿಗೆ ಸರ್ಕಾರ ಅವರಿಗೆ ಸಹಾಯ ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಭಾನುವಾರ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ತೊಗಟವೀರ ಕ್ಷತ್ರಿಯ ನೇಕಾರ ಸಂಘದ ವತಿಯಿಂದ ಸೆಂಟ್ರಲ್ ಕಾಲೇಜಿನಲ್ಲಿ ನಡೆದ "ಅಮೃತ ಮಹೋತ್ಸವ 2023" ಉದ್ಘಾಟಿಸಿ ಅವರು ಮಾತನಾಡಿದರು. ನೇಕಾರರ ಮೂಲ ವೃತ್ತಿ ಉಳಿದು ಬೆಳೆಯಬೇಕು. ನೇಕಾರರು ಬೆಳೆಯಬೇಕು ಅವರ ಮಕ್ಕಳು ಬೇರೆ ಬೇರೆ ವೃತ್ತಿಗೆ ಹೋಗುವ ವಾತಾವರಣ ನಿರ್ಮಾಣವಾಗಬೇಕು. ಜಾಗತಿಕರಣದ ನಂತರ ನೇಕಾರರ ವೃತ್ತಿಗೆ ಹೊಡೆತ ಬಿದ್ದಿದೆ. ಪಾಲಿಯಸ್ಟರ್ ಬಟ್ಟೆಗಳ ಉತ್ಪಾದನೆಯಾಗುತ್ತಿದ್ದಂತೆ ಮೂಲ ನೇಕಾರಿಕೆಗೆ ತೊಂದರೆಯಾಗಿದೆ. ನೇಕಾರರರು ಬೆಳೆಯಲು ಅವರ ಉತ್ಪನ್ನಗಳಿಗೆ ಅಗತ್ಯ ಮಾರುಕಟ್ಟೆ ನಿರಂತರವಾಗಿ ದೊರೆಯಬೇಕು ಎಂದರು.

ಪ್ರತಿ ವರ್ಷ ನೇಕಾರರು ಉತ್ಪಾದಿಸುವ ಅಷ್ಟೂ ಬಟ್ಟೆಗಳನ್ನು ಖರೀದಿಸಲು ಆದೇಶಿಸಲಾಗಿದೆ. ಈ ಸಂಬಂಧ ಆರು ತಿಂಗಳು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಿಂದೆ ನಮ್ಮ ತಂದೆ ಕೈಗಾರಿಕಾ ಸಚಿವರಾಗಿದ್ದ ಸಂದರ್ಭದಲ್ಲಿ ಜನತಾ ಧೋತಿ, ಸಮವಸ್ತ್ರ, ಸೀರೆ ನೀಡುವ ಕಾರ್ಯಕ್ರಮ ರೂಪಿಸಿದ್ದರು. ನೇಕಾರರಿಂದ ನೆಯಿಸಿ ಬಡಪಾಯಿಗೆ ನೀಡಿದರೆ ನೇಕಾರರೂ ಉಳಿದು ಬಡವರ ಗೌರವವೂ ಉಳಿಯಲಿದೆ ಎಂದಿದ್ದರು ಎಂದು ಬೊಮ್ಮಾಯಿ ಸ್ಮರಿಸಿದರು.
ಕೈಮಗ್ಗ ನೇಕಾರರಿಗೆ ನೇಕಾರ ಸಮ್ಮಾನ್ ಯೋಜನೆಯಡಿ ಅನುದಾನ 5 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. ಅವರ ಬೇಡಿಕೆ ಈಡೇರಿಸುವತ್ತ ಸರ್ಕಾರ ಚಿತ್ತ ಹರಿಸಿದೆ. ಈ ಕುಲ ಕಸುಬುಗಳಾದ ಕಂಬಾರರು, ಬಡಿಗೇರರು, ವಿಶ್ವಕರ್ಮರು ಇವರನ್ನು ಉಳಿಸಿದಾಗ ಗ್ರಾಮೀಣ ಪ್ರದೇಶದ ಬಡವರ ಆರ್ಥಿಕ ಅಭಿವೃದ್ಧಿಯಾಗುತ್ತದೆ. ದುಡಿಯುವ ವರ್ಗಕ್ಕೆ ಶಕ್ತಿಯನ್ನು ತುಂಬಿದಾಗ ಮಾತ್ರ ದೇಶವನ್ನು ಉಳಿಸಲು ಸಾಧ್ಯ. ದೊಡ್ಡ ಕಾರ್ಖಾನೆಗಳಿಂದ ಉತ್ಪಾದನೆ ಅಗತ್ಯವಿಲ್ಲ. ಆದರೆ ದೊಡ್ಡ ಪ್ರಮಾಣದ ಜನರಿಂದ ಉತ್ಪಾದನೆಯಾಗಬೇಕು ಎಂದು ಹೇಳಿದರು.

ಹೆಚ್ಚು ಉದ್ಯೋಗ ಸೃಜಿಸುವ ಕ್ಷೇತ್ರ ಜವಳಿ ಉದ್ದಿಮೆ ಎಂದ ಸಿಎಂ
ಜವಳಿ ಕ್ಷೇತ್ರ, ನೇಕಾರರು ಗಾರ್ಮೆಂಟ್ಸ್ ದೇಶದಲ್ಲಿಯೇ ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ಉದ್ದಿಮೆಗಳಾಗಿವೆ. ಇವುಗಳಿಂದ ಹೆಚ್ಚು ಉದ್ಯೋಗ ಒದಗಿಸಬಹುದು. ಬಾಂಗ್ಲಾದೇಶ ನೇಕಾರಿಕೆಯಿಂದಲೇ ತನ್ನ ಆರ್ಥಿಕತೆಯನ್ನು ನಿಭಾಯಿಸುತ್ತಿದೆ. ಅದೇ ರೀತಿ ಕರ್ನಾಟಕದಲ್ಲಿಯೂ ಆಗಬೇಕಿದೆ. ಅದಕ್ಕಾಗಿ ಎಲ್ಲಾ ಬೇಡಿಕೆಗಳನ್ನು ಒಪ್ಪಲಾಗಿದೆ. ಪವರ್ ಲೂಮ್ ಪ್ರತಿ ಯೂನಿಟ್ ಗೆ ನೇಕಾರರಿಗೆ ನೀಡುವ ವಿದ್ಯುತ್ ಮೊತ್ತವನ್ನು 5 ಸಾವಿರಕ್ಕೆ ಇಳಿಸಲಾಗಿದೆ. 2 ಲಕ್ಷ ರೂ.ವರೆಗಿನ ಸಹಾಯಧನವನ್ನು ಶೇ.30ರಿಂದ ಶೇ.50 ಕ್ಕೆ ಹೆಚ್ಚಿಸುವ ಮನವಿ ಪರಿಗಣಿಸಲಾಗಿದೆ ಎಂದು ತಿಳಿಸಿದರು.
ಮಾರುಕಟ್ಟೆ ಸೃಷ್ಟಿಯಿಂದ ನೇಕಾರರಿಗೆ ಅಧಿಕ ಲಾಭ
ದೊಡ್ಡ ಪ್ರಮಾಣದಲ್ಲಿ ಗ್ರಾಮೀಣ ಮತ್ತು ನಗರದ ಕೊಳಗೇರಿಗಳಲ್ಲಿ ಮಹಿಳೆಯರಿಗೆ ನೇಕಾರಿಕೆ ತರಬೇತಿ ನೀಡಿದರೆ ಅವರ ಮನೆ ಉದ್ಧಾರವಾಗುತ್ತದೆ. ಶಿಡ್ಲಘಟ್ಟ, ಮೊಳಕಾಲ್ಮೂರು ಪ್ರದೇಶದಲ್ಲಿ ಹೀಗೆ ಮಾಡುತ್ತಾರೆ. ಮಹಿಳಾ ಸಂಘಗಳು ತಯಾರಿಸುವ ಉತ್ಪನ್ನ ಗಳಿಗೆ ಈಗಾಗಲೇ ಅಮೆಜಾನ್, ಪ್ಲಿಪ್ ಕಾರ್ಟ್ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿವೆ. ನೇಕಾರರು ನೇಯ್ದ ಸೀರೆಗಳನ್ನು ಮಹಾನಗರಗಳಲ್ಲಿ ನಾಲ್ಕು ಐದು ಪಟ್ಟು ಹೆಚ್ಚು ದರಕ್ಕೆ ಮಾರಾಟ ಮಾಡುತ್ತಾರೆ. ನಾವೇ ಮಾರುಕಟ್ಟೆ ಸೃಷ್ಟಿಸಿದರೆ, ಅದರ ಲಾಭ ನೇಕಾರರಿಗೆ ಸಿಗಬೇಕು. ಬೆಂಗಳೂರಿನಲ್ಲಿ ಸ್ಥಳಾವಕಾಶ ಕೋರಿದ್ದು, ಈ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಅವರು ವಿವರಿಸಿದರು.












Click it and Unblock the Notifications