"ಮುಂದಿನ ಬಜೆಟ್‌ನಲ್ಲಿ ಮಾನಸಿಕ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ಅನುದಾನ'
ಬೆಂಗಳೂರು, ಅ. 10: ಗ್ರಾಮೀಣ ಭಾಗದ ಮಹಿಳೆಯರಿಗೆ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ ಎಂಬ ಸಮೀಕ್ಷಾ ವರದಿಗಳಿವೆ. ಹೀಗಾಗಿ ಗ್ರಾಮೀಣ ಭಾಗದ ಮಹಿಳೆಯಲ್ಲಿ ಮಾನಸಿಕ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂಬ ಮಾಹಿತಿಯಿದೆ. ಆದರಿಂದಾಗಿ ಹಳ್ಳಿಗಳ ಜನರ ಸ್ವಾಸ್ಥ್ಯದ ಬಗ್ಗೆ ಕೇಂದ್ರ ಹಾಗೂ ರಾಜ್ಯ ಆರೋಗ್ಯ ಇಲಾಖೆ ಹೆಚ್ಚಿನ ಗಮನ ಕೊಡಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ನಡೆದ ನಿಮ್ಹಾನ್ಸ್ ಸಂಸ್ಥೆಯ 25 ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
"ಗ್ರಾಮೀಣ ಪ್ರದೇಶದವರಿಗೆ ಸುಲಭವಾಗಿ ಆರೋಗ್ಯ ಸೇವೆಗಳು ದೊರಕಬೇಕು. ವೈದ್ಯರಾಗಿ ಕಾರ್ಯನಿರ್ವಹಿಸುವಾಗ ಈ ಅಂಶ ಸದಾ ನೆನೆಪಿನಲ್ಲಿಡಬೇಕು. ಸ್ವಸ್ಥ ದೇಶ ನಿರ್ಮಾಣಕ್ಕೆ ಸ್ವಸ್ಥ ಜನತೆ ಅಗತ್ಯ" ಎಂದು ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವೀಯ ಇದೇ ಸಂದರ್ಭದಲ್ಲಿ ವೈದ್ಯರಿಗೆ ಸಲಹೆ ನೀಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಗ್ರಾಮೀಣ ಭಾಗದ ಜನರ ಆರೋಗ್ಯದ ಕುರಿತು ನಿಮ್ಹಾನ್ಸ್ ಘಟಿಕೋತ್ಸವದಲ್ಲಿ ಮಾತನಾಡಿದ್ದಾರೆ.

ಮಾನಸಿಕ ಸಮಸ್ಯೆ ಕುರಿತು ಚಿಕಿತ್ಸೆ ಶ್ಲಾಘನೆ!
"ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ತನು-ಮನಗಳೆರಡೂ ಸ್ವಸ್ಥವಾಗಿರಬೇಕು. ಜನರ ಜೀವ ಉಳಿಸುವ ಕೆಲಸ ದೇಶದ ಕೆಲಸ. ಮಾನಸಿಕ ಆರೋಗ್ಯದ ಚಿಕಿತ್ಸೆಗೆ ಸಮಗ್ರವಾದ ರೀತಿಯನ್ನು ಅನುಸರಿಸಬೇಕು. ಕರ್ನಾಟಕದಲ್ಲಿ ಬ್ಲಾಕ್ ಮಟ್ಟದಲ್ಲಿ ಮಾನಸಿಕ ಆರೋಗ್ಯಕ್ಕೆ ಚಿಕಿತ್ಸೆ ಲಭ್ಯವಿರುವುದು ಶ್ಲಾಘನೀಯ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವೀಯ ಹೇಳಿದ್ದಾರೆ.
"ಬದ್ಧತೆ ಹಾಗೂ ಸಮರ್ಪಣಾ ಮನೋಭಾವವಿದ್ದರೆ ಯಾವುದೇ ಹಿನ್ನೆಲೆಯಿಂದ ಬಂದ ವ್ಯಕ್ತಿ ಏನನ್ನು ಬೇಕಾದರೂ ಸಾಧಿಸಬಹುದು. ದೇಶವನ್ನು ಸಮೃದ್ಧಗೊಳಿಸುವ ಪ್ರಧಾನಿ ಮೋದಿ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಇಂದು ಪದವಿ ಪಡೆದ ವೈದ್ಯರ ಪಾತ್ರ ಮಹತ್ವದ್ದು. ಕೋವಿಡ್ ಸಂದರ್ಭದಲ್ಲಿ ವೈದ್ಯರು ಹಾಗೂ ಪ್ಯಾರಾ ಮೆಡಿಕಲ್ ಸಿಬ್ಬಂದಿಯ ಸೇವೆ ಶ್ಲಾಘನೀಯ' ಎಂದರು.

ಮಾನಸಿಕ ಕೇಂದ್ರಗಳ ಸ್ಥಾಪನೆಗೆ ಬಜೆಟ್‌ನಲ್ಲಿ ಅನುದಾನ'
ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, "ನಿಮ್ಹಾನ್ಸ್ ಪ್ರಾದೇಶಿಕವಾಗಿ ವಿಸ್ತರಿಸಬೇಕು. ನಿಮ್ಹಾನ್ಸ್ ಗ್ರಾಮೀಣ ಪ್ರದೇಶದ ಬಡವರಿಗೆ, ಹೆಣ್ಣುಮಕ್ಕಳಿಗೆ ಹಾಗೂ ರೈತರಿಗೆ ತಲುಪಬೇಕು. ಮುಂದಿನ ಆಯವ್ಯಯದಲ್ಲಿ ಮಾನಸಿಕ ಕೇಂದ್ರಗಳ ಸ್ಥಾಪನೆಗೆ ಅನುದಾನ ಮೀಸಲಿರಿಸಲಾಗುವುದು. ಮಾನಸಿಕ ಆರೋಗ್ಯ ಕೇಂದ್ರ ವಿಕೇಂದ್ರೀಕರಣಗೊಂಡು ಸಾಮಾನ್ಯರನ್ನು ತಲುಪಲು ಆಗತ್ಯ ಕ್ರಮ ಕೈಗೊಳ್ಳಲಾಗುವುದು" ಎಂದರು. ಇದೇ ಸಂದರ್ಭದಲ್ಲಿ ಮತ್ತೊಂದು ಮಹತ್ವದ ಪ್ರಕಟಣೆಯನ್ನು ಸಿಎಂ ಬೊಮ್ಮಾಯಿ ಮಾಡಿದ್ದಾರೆ.

ನಿಮ್ಹಾನ್ಸ್‌ಗೆ 100 ವೆಂಟಿಲೇಟರ್‌ಗಳ ಪೂರೈಕೆ
ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ 6 ತಿಂಗಳೊಳಗೆ ನಿಮ್ಹಾನ್ಸ್‌ಗೆ ಎರಡು ಹಂತಗಳಲ್ಲಿ 100 ವೆಂಟಿಲೇಟರ್ ಗಳನ್ನು ಪೂರೈಸುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಒಂದು ದಿನಕ್ಕಿಂತ ಹೆಚ್ಚು ಕಾಲ ಎಕ್ಸ್-ರೇ, ವೆಂಟಿಲೇಟರ್ ಮುಂತಾದ ಸೌಲಭ್ಯಗಳಿಗೆ ಕಾಯುವ ಪರಿಸ್ಥಿತಿ ಇರಬಾರದು ಎಂದು ಸಿಎಂ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.
ರಾಜ್ಯದಲ್ಲಿ ಹೆಲ್ತ್ ವಿಷನ್ ರೂಪಿಸಲಾಗಿದ್ದು, ಇದರಲ್ಲಿ ಮಾನಸಿಕ ಆರೋಗ್ಯಕ್ಕೂ ಮಹತ್ವ ನೀಡಲಾಗಿದೆ. ನವಭಾರತದಲ್ಲಿ ಎಲ್ಲಾರಿಗೂ ಸಮಾನ ಅವಕಾಶ, ಶೈಕ್ಷಣಿಕ ಹಾಗೂ ಆರ್ಥಿಕ ಸುಸ್ಥಿರತೆ ದೊರಕುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ.

ಒತ್ತಡದಲ್ಲಿ ಗ್ರಾಮೀಣ ಮಹಿಳೆಯರು!
ಮಹಿಳೆಯರು, ಅದರಲ್ಲೂ ಗ್ರಾಮೀಣ ಮಹಿಳೆಯರು ಒತ್ತಡದಲ್ಲಿದ್ದು, ಅವರ ಒತ್ತಡವನ್ನು ಕಡಿಮೆ ಮಾಡಲು ಪ್ರತ್ಯೇಕ ಕೋರ್ಸ್ ಒಂದನ್ನು ಪ್ರಾರಂಭಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿಮ್ಹಾನ್ಸ್ ನಿರ್ದೇಶಕರಿಗೆ ಸಲಹೆ ನೀಡಿದ್ದಾರೆ. ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಸಂಸದರಾದ ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ, ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಘಟಿಕೋತ್ಸವದಲ್ಲಿ ಭಾಗವಹಿಸಿದ್ದರು.












Click it and Unblock the Notifications