ರಮೇಶ್ ಜಾರಕಿಹೊಳಿ V/S ಲಕ್ಷ್ಮಿ ಹೆಬ್ಬಾಳ್ಕರ್; ಶಿವಾಜಿ ಪ್ರತಿಮೆ ಕ್ರೆಡಿಟ್ ಫೈಟ್ ನಡುವೆ ಸ್ಟ್ಯಾಚು ಅನಾವರಣ
ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರತಿಮೆ ಪಾಲಿಟಿಕ್ಸ್ ಜೋರಾಗಿದ್ದು, ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಶಿವಾಜಿ ಪ್ರತಿಮೆ ಕ್ರೆಡಿಟ್ ಫೈಟ್ ಮುಂದುವರೆದಿದೆ.
ಬೆಳವಾಗಿ,ಮಾರ್ಚ್1: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಪ್ರತಿಮೆ ಪೊಲಿಟಿಕ್ಸ್ ಜೋರಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ನಿರ್ಮಾಣವಾಗಿರುವ ಶಿವಾಜಿ ಪ್ರತಿಮೆ ಕ್ರೆಡಿಟ್ ಫೈಟ್ ಮುಂದುವರೆದಿದ್ದು, ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಜಟಾಪಟಿ ಜೋರಾಗಿದೆ.
ಐತಿಹಾಸಿಕ ರಾಜಹಂಸಗಡ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ವಿಚಾರವಾಗಿ ಗೋಕಾಕ್ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಕದನ ಶುರುವಾಗಿತ್ತು. ಸದ್ಯ ರಾಜಹಂಸಗಡ ಶಿವಾಜಿ ಪ್ರತಿಮೆ ಅನಾವರಣಕ್ಕೆ ಮುಹೂರ್ತ ನಿಗದಿಯಾಗಿದೆ.

ನಾಳೆ(ಮಾರ್ಚ್2) ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಮೆ ಅನಾವರಣ ಮಾಡಲಿದ್ದಾರೆ. ಬೆಳಗಾವಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೆಆರ್‌ಐಡಿಎಲ್ ಬೆಳಗಾವಿ ಇವರ ಸಹಯೋಗದೊಂದಿಗೆ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಸಮಾರಂಭ ಮಾ.2ರಂದು ಬೆಳಗ್ಗೆ 10 ಗಂಟೆಗೆ ರಾಜಹಂಸಗಡದ ಕೋಟೆ ಆವರಣದಲ್ಲಿ ನಡೆಯಲಿದೆ.
43 ಅಡಿ ಎತ್ತರದ ಬೃಹತ್ ಶಿವಾಜಿ ಪ್ರತಿಮೆ ಅನಾವರಣ ಹಾಗೂ 4.5 ಕೋಟೆ ವೆಚ್ಚದಲ್ಲಿ ರಾಜಹಂಸಗಡ ಕೋಟೆಯಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ. ಪ್ರತಿಮೆ ಅನಾವರಣ ವಿಚಾರವಾಗಿ ಕಾಂಗ್ರೆಸ್, ಬಿಜೆಪಿ ನಡುವೆ ಕ್ರೆಡಿಟ್ ಫೈಟ್ ನಡೆದಿದ್ದು, ಬೆಳಗಾವಿ ಜಿಲ್ಲಾಡಳಿತದಿಂದಲೇ ಪ್ರತಿಮೆ ಅನಾವರಣಕ್ಕೆ ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದರು.
ಕೆಲ ದಿನಗಳ ಹಿಂದೆ ಶಾಸಕ ರಮೇಶ್ ಜಾರಕಿಹೊಳಿ ಬಿಜೆಪಿ ನಾಯಕರೊಂದಿಗೆ ರಾಜಹಂಸಗಡ ಕೋಟೆ ವಿಕ್ಷೀಸಿದ್ರು. ರಾಜಹಂಸಗಡ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮೂರ್ತಿ ಪ್ರತಿಷ್ಠಾಪನೆಗೆ ಎಂದಿಗೂ ವಿರೋಧ ಮಾಡಿಲ್ಲ, ಆದರೆ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಕಾಂಗ್ರೆಸ್ ಮಯ ಮಾಡಲು ಹೊರಟಿದ್ದಕ್ಕಾಗಿ ಧ್ವನಿ ಎತ್ತಿದ್ದೆ, ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಶಿವಾಜಿ ಪ್ರತಿಮೆ ಲೋಕಾರ್ಪಣೆ ಸಮಾರಂಭ ಸಣ್ಣ ಪ್ರಮಾಣದಲ್ಲಿ ನಡೆಯಲಿದೆ. ಶಿಷ್ಟಾಚಾರದ ಪ್ರಕಾರ ಗ್ರಾಮೀಣ ಶಾಸಕಿಗೆ ಕಾರ್ಯಕ್ರಮದಲ್ಲಿ ಗೌರವ ಕೊಡುತ್ತೇವೆ. ಇದರಲ್ಲಿ ನಾನೂ ಭಾಗವಹಿಸುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಇತ್ತ ಸರ್ಕಾರದ ವತಿಯಿಂದ ಸಿಎಂ ಬೊಮ್ಮಾಯಿ ಅವರು ಶಿವಾಜಿ ಪ್ರತಿಮೆ ಅನಾವರಣಗೊಳ್ಳುತ್ತಿದ್ದು, ಮಾರ್ಚ್ 5 ರಂದು ಮತ್ತೊಮ್ಮೆ ಕಾಂಗ್ರೆಸ್ ಕಾರ್ಯಕರ್ತರನ್ನ ಒಗ್ಗೂಡಿಸಿ ಪ್ರತಿಮೆ ಅನಾವರಣಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಮುಂದಾಗಿದ್ದು, ರಾಜಕೀಯ ಎದುರಾಳಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಟಕ್ಕರ್ ಕೊಡಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.












Click it and Unblock the Notifications