ಕಾಂಗ್ರೆಸ್ ಪ್ರಕಟಿಸಿದ್ದು ದಗಲ್‌ಬಾಜಿ ಪ್ರಣಾಳಿಕೆ ಎಂದು ಸಿಎಂ ಬೊಮ್ಮಾಯಿ ವ್ಯಂಗ್ಯ
ಧಾರವಾಡ, ಮೇ 02: ಕರ್ನಾಟಕ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ ಪ್ರಣಾಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯ ವಾಡಿದ್ದಾರೆ. ಇದು ದಗಲ್‌ಬಾಜಿ ಪ್ರಣಾಳಿಕೆ ಎಂದು ಅವರು ಕರೆದಿದ್ದಾರೆ.
ಇಂದು ಕುಂದಗೋಳದಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಆರ್ ಪಾಟೀಲ್ ಪರ ಪ್ರಚಾರ ನಡೆಸಿ ಮತಯಾಚಿಸಿದರು. ಈ ವೇಳೆ ಮಾತನಾಡಿದ ಅವರು, ಬಿಜೆಪಿ ಯೋಜನೆಗಳೇ ಇಂದು ಕಾಂಗ್ರೆಸ್ ಪ್ರಣಾಳಿಕೆಗಳಾಗಿವೆ. ಇದಕ್ಕೂ ಮೊದಲು ಗ್ಯಾರೆಂಟಿ ಕಾರ್ಡ್ ನೀಡಿದ್ದ ಕಾಂಗ್ರೆಸ್ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದಾರೆ. ಕೋವಿಡ್ ನಂತರ ನಾವು ಈಗಾಗಲೇ 10 ಕೆಜಿ ಅಕ್ಕಿ ಕೊಡುತ್ತಿದ್ದೇವೆ. ಮೋದಿ ಅಕ್ಕಿಗೆ ತಮ್ಮ ಗೋಣಿ ಚೀಲ ಹಾಕಿ ಅದಕ್ಕೆ ತಮ್ಮ ಫೋಟೊ ಹಾಕಿ ಕೊಂಡಿದ್ದಾರೆ ಎಂದು ಟೀಕಿಸಿದರು.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಬಿಜೆಪಿ ಈಗಾಗಲೇ ಘೊಷಣೆ ಮಾಡಿದೆ. ಅದನ್ನೇ ಬೇರೆ ಹೆಸರಲ್ಲಿ ಘೋಷಣೆ ಮಾಡಿದ್ದಾರೆ. ಕಳಸಾ ಬಂಡೂರಿ ಐದು ವರ್ಷದಲ್ಲಿ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ. ನಾವು ಈಗಾಗಲೇ ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ವಿವರಿಸಿದರು.
250 ಹಾಸಿಗೆಯ ಜಯದೇವ ಆಸ್ಪತ್ರೆ ಆರಂಭ
ರಾಜ್ಯದಲ್ಲಿ ನಾಲ್ಕು ಕಂದಾಯ ವಿಭಾಗದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ತೆರೆಯುತ್ತಿದ್ದೇವೆ. ಹುಬ್ಬಳ್ಳಿ ಯಲ್ಲಿ 250 ಹಾಸಿಗೆಗಳ ಜಯದೇವ ಆಸ್ಪತ್ರೆ ಆರಂಭಿಸಲು ಕ್ರಮ ಕೈಗೊಂಡಿದ್ದೇವೆ. ಇಲ್ಲಿನ ಬಿಜೆಪಿ ಅಭ್ಯರ್ಥಿ ಎಂಆರ್ ಪಾಟೀಲ್ ಅವರನ್ನು ಗೆಲ್ಲಿಸಿ. ಕುಂದಗೋಳ ಕ್ಷೇತ್ರದ ಅಭಿವೃದ್ಧಿಗೆ ಬೇಕಾದ ಎಲ್ಲ ಅನುದಾನ ಒದಗಿಸುತ್ತೇವೆ. ನನ್ನ ತವರೂರಾದ ಕುಂದಗೋಳ ಅಭಿವೃದ್ಧಿಗೆ ಎಲ್ಲ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಕುಂದಗೋಳದಲ್ಲಿ ನನ್ನ ಬಾಲ್ಯವನ್ನು ಕಳೆದಿದ್ದು, ಹೀಗಾಗಿಯೇ ನಾನು ತಾಲೂಕಿಗೆ ಬಂದಾಗ ಭಾವನಾತ್ಮಕವಾಗುತ್ತೇನೆ. ಬಾಲ್ಯದಲ್ಲಿ ನಾವು ಕಮಡೊಳ್ಳಿ, ಸಂಶಿ, ಗುಡಗೇರಿ ಇಲ್ಲಿಯೇ ತಿರುಗಾಡುತ್ತಿದ್ದೇವು. ನಮ್ಮ ತಂದೆ ಇಲ್ಲಿನ ರೈತರ ಸುಮಾರು 30 ಸಾವಿರ ಎಕರೆ ಜಮೀನು ಬಿಡಿಸಿ ಕೊಟ್ಟಿದ್ದರು. ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಜಯ ಗಳಿಸಿದ್ದರು ಎಂದು ಹಳೆ ನೆನಪುಗಳನ್ನು ಅವರು ಸ್ಮರಿಸಿದರು.
ಕುಂದಗೋಳದಲ್ಲಿ ಮೆಣಸಿನಕಾಯಿ ಖರೀದಿಗೆ ವ್ಯವಸ್ಥೆ
ಕುಂದಗೋಳದಲ್ಲಿ ಹೆಚ್ಚು ಮೆಣಸಿನಕಾಯಿ ಬೆಳೆಯುತ್ತಾರೆ. ಆದರೆ ಬ್ಯಾಡಗಿ ಮೆಣಸಿನಕಾಯಿಗೆ ಹೆಸರುವಾಸಿಯಾಗಿದೆ. ಮುಂದಿನ ವರ್ಷದಿಂದ ಕುಂದಗೋಳದಲ್ಲಿಯೇ ಮೆಣಸಿನಕಾಯಿ ಖರೀದಿ ಮಾಡುವ ವ್ಯವಸ್ಥೆ ಮಾಡಲಾಗುವುದು. ಒಂದೆಡೆ ದೇಶಭಕ್ತಿ, ದೇಶದ ಅಭಿವೃದ್ಧಿ ಭದ್ರತೆಯ ಆಧಾರದಲ್ಲಿ ನಾವು ಮತ ಕೇಳುತ್ತಿದ್ದೇವೆ. ಇನ್ನೊಂದೆಡೆ ದೇಶ ವಿರೋಧಿಗಳ ಜೊತೆ ಕೈ ಜೋಡಿಸಿ, ದೇಶ ವಿಭಜನೆ ಮಾಡುವ ಅಭಿವೃದ್ಧಿ ಶೂನ್ಯ ಕಾಂಗ್ರೆಸ್ ಇನ್ನೊಂದು ಕಡೆ ಇದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆ ಕುಂದಗೊಳದಲ್ಲಿ 20 ಸಾವಿರ ರೈತರಿಗೆ ತಲುಪಿದೆ ಎಂದು ತಿಳಿಸಿದರು.
ಕುಂದಗೋಳ ತಾಲೂಕು 20 ವರ್ಷದಿಂದ ಅಭಿವೃದ್ಧಿ ವಂಚಿತ ಆಗಿದೆ. ಬೇಧ-ಭಾವ ಮಾಡದೇ ಪ್ರತಿ ತಾಲೂಕಿನ ಶಾಸಕರಿಗೆ ಅನುದಾನ ಒದಗಿಸಲಾಗಿದೆ. ವಿರೋಧ ಪಕ್ಷದ ಶಾಸಕರಿಗೆ 25 ಕೋಟಿ ರೂಪಾಯಿ ನೀಡಿದ್ದೇನೆ. ಕುಂದಗೋಳ ತಾಲೂಕಿಗೆ 250 ಕೋಟಿಗೂ ಹೆಚ್ಚು ಅನುದಾನ ನೀಡಿದ್ದು, ಬಿಜೆಪಿ ನಾಯಕರು ಶಾಸಕರಲ್ಲದಿದ್ದರೂ ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ. ಅವರು ಕೇಳುವ ಎಲ್ಲ ಅನುದಾನವನ್ನು ನೀಡಿದ್ದೇನೆ ಎಂದರು.












Click it and Unblock the Notifications