ಕರ್ನಾಟಕದಲ್ಲಿ ಚರ್ಮಗಂಟು ರೋಗ: 13 ಕೋಟಿ ಬಿಡುಗಡೆಗೆ ಸಿಎಂ ಸೂಚನೆ
ಬೆಂಗಳೂರು, ಅಕ್ಟೋಬರ್ 14: ರಾಜ್ಯದಲ್ಲಿ ಹರಡುತ್ತಿರುವ ಜಾನುವಾರುಗಳ ಚರ್ಮಗಂಟು ರೋಗದ ನಿರ್ವಹಣೆಗಾಗಿ ಒಟ್ಟು 13 ಕೋಟಿ ರೂ. ಬಿಡುಗಡೆಗೆ ಆದೇಶಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಆರ್ಥಿಕ ಇಲಾಖೆಗೆ ಸೂಚಿಸಿದರು.
ಶುಕ್ರವಾರ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಜಾನುವಾರುಗಳ ಚರ್ಮಗಂಟು ರೋಗದ ಕುರಿತು ಪರಿಶೀಲನಾ ಸಭೆ ನಡೆಸಿದರು. ಕರ್ನಾಟಕದಲ್ಲಿ ಜಾನುವಾರಿಗಳಿಗೆ ಚರ್ಮಗಂಟು ರೋಗ ಕಾಡುತ್ತಿದ್ದು, ರೈತರನ್ನು ನಡುಗಿಸಿದೆ. ಈ ರೋಗವನ್ನು ತಡೆಯಲು, ರೋಗಕ್ಕೆ ಲಸಿಕೆ ಹಾಕಲು, ಚಿಕಿತ್ಸೆಗಾಗಿ ಹಾಗೂ ಮೃತಪಟ್ಟ ರಾಸುಗಳಿಗೆ ಪರಿಹಾರ ಒದಗಿಸಲು ಒಟ್ಟು 13 ಕೋಟಿ ರೂ. ಬಿಡುಗಡೆ ಮಾಡುವಂತೆ ಅವರು ಹಣಕಾಸು ಇಲಾಖೆಗೆ ತಿಳಿಸಿದರು.
ಈ ಚರ್ಮಗಂಟು ರೋಗದಿಂದ ಮೃತಪಟ್ಟ ರಾಸುಗಳ ಪರಿಹಾರಕ್ಕೆ ಈಗಾಗಲೇ ರಾಜ್ಯ ಸರ್ಕಾರದಿಂದ 2 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇನ್ನೂ ಹೆಚ್ಚುವರಿಯಾಗಿ 5 ಕೋಟಿ ರೂ. ಹಾಗೂ ಜಾನುವಾರುಗಳ ಚಿಕಿತ್ಸೆಗೆ ಮತ್ತು ಲಸಿಕೆ ಪೂರೈಸುವ ಸಲುವಾಗಿ ಒಟ್ಟು 8 ಕೋಟಿ ರೂ. (ಒಟ್ಟು 13ಕೋಟಿ ರೂ.) ಬಿಡುಗಡೆ ಮಾಡುವಂತೆ ಬಸವರಾಜ ಬೊಮ್ಮಾಯಿ ಸೂಚಿಸಿದರು.

28 ಜಿಲ್ಲೆಗಳಲ್ಲಿ ವ್ಯಾಪಿಸಿದ ಚರ್ಮಗಂಟು ರೋಗ
ಕರ್ನಾಟಕದ ಒಟ್ಟು 31 ಜಿಲ್ಲೆಗಳ ಪೈಕಿ ಈಗಾಗಲೇ 28 ಜಿಲ್ಲೆಗಳ 160 ತಾಲ್ಲೂಕುಗಳಲ್ಲಿ ಈ ಚರ್ಮಗಂಟು ರೋಗ ವ್ಯಾಪ್ತಿಸಿದೆ. ಇಷ್ಟು ತಾಲೂಕುಗಳ ವ್ಯಾಪ್ತಿಯ 4,380 ಗ್ರಾಮಗಳಲ್ಲಿ ರೋಗ ಕಾಣಿಸಿಕೊಂಡಿವೆ. ಒಟ್ಟು ಸುಮಾರು 45,645 ಜಾನುವಾರುಗಳು ಈ ಚರ್ಮ ಗಂಟು ರೋಗಕ್ಕೆ ತುತ್ತಾಗಿ ಬಳಲಿವೆ. ಅದರಲ್ಲಿ 26,135 ರಾಸುಗಳು ಗುಣಮುಖವಾಗಿದ್ದರೆ, ಒಟ್ಟು 2,070 ಜಾನುವಾರುಗಳು ಗುಣಮುಖವಾಗದೇ ಸಾವಗೀಡಾಗಿವೆ. ಇದು ರೈತರ ಆತಂಕಕ್ಕೆ ಕಾರಣವಾಗಿದೆ.

15 ಲಕ್ಷ ಲಸಿಕೆ ಒದಗಿಸಲು ಸೂಚನೆ
ಈಗಾಗಲೇ ರೋಗಪೀಡಿತ 6.57 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಭಾರತ ಸರ್ಕಾರದ ಮಾರ್ಗಸೂಚಿಯಂತೆ ರೋಗ ಕಾಣಿಸಿಕೊಂಡ 5 ಕಿ.ಮೀ. ಸುತ್ತಳತೆಯಲ್ಲಿ ಆರೋಗ್ಯವಂತ ಜಾನುವಾರುಗಳಿಗೆ ಲಸಿಕೆ ಹಾಕಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ರೋಗ ತೀವ್ರವಾಗಿರುವ ಜಿಲ್ಲೆಗಳಲ್ಲಿ ಆದ್ಯತೆಯ ಮೇರೆಗೆ ಲಸಿಕೆಯನ್ನು ಹಾಕಲಾಗುತ್ತಿದೆ. ಅದಕ್ಕಾಗಿ ಕೂಡಲೇ 15 ಲಕ್ಷ ಡೋಸ್ ಲಸಿಕೆಗಳನ್ನು ಒದಗಿಸುವಂತೆ ಬೊಮ್ಮಾಯಿ ತಿಳಿಸಿದರು.
ಇನ್ನು ಜಾನುವಾರುಗಳಿಗೆ ಲಸಿಕೆ ಹಾಕಲು ಭಾರತಕ್ಕೆ ಪೂರೈಕೆ ಮಾಡುವ ಕುರಿತು ಕೇಂದ್ರ ಸರ್ಕಾರ ಅನುಮೋದಿತ ಕಂಪೆನಿಗಳೊಂದಿಗೆ ಮಾತುಕತೆ ನಡೆಸಿದೆ. ಲಸಿಕೆ ಒದಗಿಸಲು ಕ್ರಮ ಕೈಗೊಳ್ಳುವಂತೆ ಪಶುಸಂಗೋಪನೆ ಇಲಾಖೆ ಕಾರ್ಯದರ್ಶಿಗಳಿಗೆ ಅವರು ಸೂಚಿಸಿದರು. ಅಲ್ಲದ ರೋಗಪೀಡಿತ ಜಾನುವಾರುಗಳನ್ನು ಪ್ರತ್ಯೇಕಿಸಲು ಪ್ರತಿ ಗ್ರಾಮದಲ್ಲಿ ವ್ಯವಸ್ಥೆ ಮಾಡಬೇಕು ಎಂದರು.

ಹಾಲಿನಿಂದ ಮನುಷ್ಯರಿಗೆ ರೋಗ ಹರಡಲ್ಲ: ಜಾಗೃತಿ
ಈಗಾಗಲೇ ರೋಗದಿಂದ ಮರಣ ಹೊಂದಿದ ಒಟ್ಟು ಜಾನುವಾರುಗಳಿಗೆ 2 ಕೋಟಿ ರೂ. ನೀಡಲಾಗಿದೆ. 46.15 ಲಕ್ಷ ರೂ. ಪರಿಹಾರವನ್ನು ಸಮರ್ಪಕವಾಗಿ ರೈತರಿಗೆ ವಿತರಿಸಲಾಗಿದೆ. ಬಾಕಿ ಪರಿಹಾರ ಮೊತ್ತವನ್ನು ತ್ವರಿತವಾಗಿ ಅರ್ಹರಿಗೆ ವಿತರಿಸುವ ಕೆಲಸವಾಗಬೇಕಿದೆ. ರೋಗಪೀಡಿತ ರಾಸುಗಳ ಹಾಲನ್ನು ಕುಡಿದರೆ ಆ ಚರ್ಮಗಂಟು ರೋಗ ಮನುಷ್ಯರಿಗೆ ಹರಡುವುದಿಲ್ಲ. ಈ ಬಗ್ಗೆ ತಜ್ಞರು ಸ್ಪಷ್ಟಪಡಿಸಿದ್ದಾರೆ. ಈ ವಿಚಾರವನ್ನು ಸಾಧ್ಯವಾದಷ್ಟು ಹೆಚ್ಚು ಜನರಿಗೆ ತಲುಪಿಸಿ ಜಾಗೃತಿ ಮೂಡಿಸದರು ಕ್ರಮ ಕೈಗೊಳ್ಳಿ ಎಂದು ಮುಖ್ಯಮಂತ್ರಿ ಹೇಳಿದರು.

ಹಾವೇರಿ, ಕೋಲಾರದಲ್ಲಿ ರೋಗ ನಿಯಂತ್ರಣಕ್ಕೆ ಕ್ರಮ
ಚರ್ಮಗಂಟು ರೋಗ ತೀವ್ರವಾಗಿರುವ ಹಾವೇರಿ ಮತ್ತು ಕೋಲಾರ ಜಿಲ್ಲೆಗಳಲ್ಲಿ ರೋಗನಿಯಂತ್ರಣಕ್ಕೆ ತೀವ್ರ ಕ್ರಮ ಕೈಗೊಳ್ಳಬೇಕು. ಇತರ ಜಿಲ್ಲೆಗಳಿಗೆ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಲಸಿಕೆ ಅಭಿಯಾನವನ್ನು ಸಹ ತೀವ್ರಗೊಳಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕೂಡಲೇ ಕಾರ್ಯೋನ್ಮುಖರಾಗುವಂತೆ ಅಧಿಕಾರಿಗಳಿಗೆ ಬಸವರಾಜ ಬೊಮ್ಮಾಯಿ ಕಟ್ಟು ನಿಟ್ಟಾಗಿ ಸೂಚನೆ ನೀಡಿದರು.
ಸಭೆಯಲ್ಲಿ ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಹಣಕಾಸು ಇಲಾಖೆ ಕಾರ್ಯದರ್ಶಿ ಪಿ.ಸಿ.ಜಾಫರ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಕಾರ್ಯದರ್ಶಿ ಸಲ್ಮಾ ಫಾಹಿಂ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.












Click it and Unblock the Notifications