AI ಬಳಸಿ ಕರ್ನಾಟಕ ಸಿವಿಲ್ ಜಡ್ಜ್ ಪರೀಕ್ಷೆಗಳು ಯಶಸ್ವಿ: KEA
ಬೆಂಗಳೂರು, ಅಕ್ಟೋಬರ್ 12: ಕರ್ನಾಟಕ ರಾಜ್ಯದ ಸಿವಿಲ್ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಸದ್ಯ ಸಿವಿಲ್ ನ್ಯಾಯಾಧೀಶರ ಲಿಖಿತ ಪರೀಕ್ಷೆಯನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಂಡು ಅತ್ಯಂತ ಯಶಸ್ವಿಯಾಗಿ ಶನಿವಾರ ನಡೆಸಲಾಯಿತು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)ದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ತಿಳಿಸಿದ್ದಾರೆ.
ರಾಜಧಾನಿ ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ನಗರಗಳು ಸೇರಿದಂತೆ ಒಟ್ಟು 21 ಕೇಂದ್ರಗಳಲ್ಲಿ ಸಿವಿಲ್ ನ್ಯಾಯಾಧೀಶರ ಪರೀಕ್ಷೆಗಳು ನಡೆದಿವೆ. ಈ ನೇಮಕಾತಿಗೆ ಒಳಪಟ್ಟು ಅರ್ಜಿ ಸಲ್ಲಿಸಿದ್ದ 10,069 ಮಂದಿ ಅಭ್ಯರ್ಥಿಗಳ ಪೈಕಿ 8,408 ಅಂದರೆ ಶೇಕಡಾ .83.5ರಷ್ಟು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದರು.

ಮುಖಚಹರೆ ಪತ್ತೆ ತಂತ್ರಜ್ಞಾನದ ಮೂಲಕ ಅಭ್ಯರ್ಥಿಗಳನ್ನು ತಪಾಸಣೆ ಮಾಡಿಯೇ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಲಾಯಿತು. ಬ್ಲೂಟೂತ್ ಇತ್ಯಾದಿ ಡಿಜಿಟಲ್ ಸಾಧನಗಳು ಕಾರ್ಯ ನಿರ್ವಹಿಸದಂತೆ ಪರೀಕ್ಷಾ ಕೇಂದ್ರಗಳ ಸುತ್ತ ಜಾಮರ್ ಅಳವಡಿಸಲಾಗಿತ್ತು. ಇಡೀ ಪ್ರಕ್ರಿಯೆಯನ್ನು ಕೆಇಎ ಕಚೇರಿಯಲ್ಲಿನ ಕಮಾಂಡ್ ಸೆಂಟರ್ ಮೂಲಕ ನಿರ್ವಹಿಸಲಾಯಿತು. ಪರೀಕ್ಷಾ ಕೊಠಡಿಗಳಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾಗಳ ವೆಬ್ ಕಾಸ್ಟಿಂಗ್ ಮೂಲಕ ಕಟ್ಟುನಿಟ್ಟಿನ ನಿಗಾ ವಹಿಸಿದ್ದನ್ನು ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಂ, ಹೈಕೋರ್ಟ್ ರಿಜಿಸ್ಟ್ರಾರ್ ಚಂದ್ರಕಲಾ ಖುದ್ದು ವೀಕ್ಷಿಸಿದರು.
ಇದಲ್ಲದೆ, ಪ್ರತಿ ಪರೀಕ್ಷಾ ಕೇಂದ್ರಕ್ಕೂ ಒಬ್ಬರು ಜಿಲ್ಲಾ ನ್ಯಾಯಾಧೀಶರನ್ನು ಉಸ್ತುವಾರಿಗಳಾಗಿ ನಿಯೋಜಿಸಲಾಗಿತ್ತು. ನ್ಯಾಯಾಂಗ ಇಲಾಖೆಯ ಸಹಕಾರದಿಂದ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಹಾಗೂ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ಖುದ್ದು ಮೇಲ್ವಿಚಾರಣೆ ನಡೆಸಿದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
BDA Recruitment: ಕೆಇಎ ಅರ್ಜಿ ಆಹ್ವಾನ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ಕಾರ್ಖಾನೆ, ರಾಜೀವ್ ಗಾಂಧಿ ಆರೋಗ್ಯ ವಿವಿ ಹೀಗೆ 8 ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ 708 ಹುದ್ದೆಗಳ ನೇಮಕಾತಿಗೆ ಆನ್ ಲೈನ್ ಮೂಲಕ ಕೆಇಎ ಅರ್ಜಿಗಳನ್ನು ಆಹ್ವಾನಿಸಿದೆ. ಅಕ್ಟೋಬರ್ 9 ರಿಂದ ನವೆಂಬರ್ 11ರವರೆಗೆ ಅರ್ಜಿ ಸಲ್ಲಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕ ಮಾಡಲಾಗುತ್ತದೆ. OMR ಆಧಾರಿತ ಪರೀಕ್ಷೆ. ಋಣಾತ್ಮಕ ಮೌಲ್ಯಮಾಪನ ಇದ್ದು ಪ್ರತಿ ತಪ್ಪು ಉತ್ತರಕ್ಕೆ ನಾಲ್ಕನೇ ಒಂದರಷ್ಟು (1/4) ಅಂಕ ಕಡಿತ ಮಾಡಲಾಗುತ್ತದೆ ಎಂದು ಕೆಇಎ ತಿಳಿಸಿದೆ.
ಒಂದೇ ಪಠ್ಯಕ್ರಮ ಇರುವ ವಿವಿಧ ಇಲಾಖೆಗಳ ಹುದ್ದೆಗಳಿಗೆ ಒಂದೇ ಪರೀಕ್ಷೆ ನಡೆಸಿ ಸಂಬಂಧಪಟ್ಟ ಇಲಾಖೆಗಳಿಗೆ ಮೆರಿಟ್ ಪಟ್ಟಿ ನೀಡಲಾಗುವುದು. ಪರೀಕ್ಷಾ ದಿನಾಂಕವನ್ನು ನಂತರದ ದಿನಗಳಲ್ಲಿ ಕೆಇಎ ಮಾಹಿತಿ ನೀಡಲಿದೆ. ಹೆಚ್ಚಿನ ವಿವರಕ್ಕಾಗಿ http://cetonline.Karnataka.gov.in/kea/ ಭೇಟಿ ನೀಡುವಂತೆ ಪ್ರಕಟಣೆ ತಿಳಿಸಿದೆ.












Click it and Unblock the Notifications