ಪ್ರತ್ಯೂಷಾ ಸಾವು : ನಂದಿಬೆಟ್ಟದಲ್ಲಿ ಸಾತ್ವಿಕ್ ಶವ ಪತ್ತೆ
ಚಿಕ್ಕಬಳ್ಳಾಪುರ, ಡಿಸೆಂಬರ್ 24 : ಪ್ರತ್ಯೂಷಾ ಪುತ್ರ ಸಾತ್ವಿಕ್ ಶವ ಗುರುವಾರ ಮಾಧ್ಯಾಹ್ನ ನಂದಿ ಬೆಟ್ಟದಲ್ಲಿ ಪತ್ತೆಯಾಗಿದೆ. ಚಿಕ್ಕಬಳ್ಳಾಪುರ ಡಿವೈಎಸ್ಪಿ ಪುರುಷೋತ್ತಮ್ ಅವರ ನೇತೃತ್ವದಲ್ಲಿ ಭಾನುವಾರದಿಂದ ಸಾತ್ವಿಕ್ ಶವಕ್ಕಾಗಿ ಹುಡುಕಾಟ ನಡೆಯುತ್ತಿತ್ತು. ಸಾತ್ವಿಕ್ ಶವವನ್ನು ಗುರುತಿಸುವಂತೆ ಪ್ರತ್ಯೂಷಾ ಅವರ ಪೋಷಕರಿಗೆ ಪೊಲೀಸರು ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಭಾನುವಾರ ಪ್ರತ್ಯೂಷಾ ಶವ ಪತ್ತೆಯಾಗಿತ್ತು.
ಹಿಂದಿನ ಸುದ್ದಿ : ಗೌರಿಬಿದನೂರಿನ ಪ್ರತ್ಯೂಷಾ ಸಾವಿನ ನಿಗೂಢತೆ ಇನ್ನೂ ಬಗೆಹರಿದಿಲ್ಲ. ಪ್ರತ್ಯೂಷಾ ಆತ್ಮಹತ್ಯೆ ಮಾಡಿಕೊಂಡಿಲ್ಲ ಅವಳನ್ನು ಕೊಲೆ ಮಾಡಲಾಗಿದೆ ಎಂದು ಆಕೆಯ ಪೋಷಕರು ಆರೋಪಿಸಿದ್ದು, ಪತಿ ಸುಮನ್ ಮತ್ತು ಅವರ ಕುಟುಂಬದ ವಿರುದ್ಧ ದೂರು ನೀಡಿದ್ದಾರೆ.
ಬಾಗೇಪಲ್ಲಿಯ ನಿವಾಸಿಯಾದ ಪ್ರತ್ಯೂಷ ತಂದೆ ನಾಗರಾಜ್ ಅವರು, ಪ್ರತ್ಯೂಷಾ ಪತಿ ಸುಮನ್ ಮತ್ತು ಅವರ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ನೀಡಿದ್ದಾರೆ. ವರದಕ್ಷಿಣೆ ತರಲಿಲ್ಲ ಎಂದು ಮಗಳನ್ನು ಕೊಲೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. [ಉತ್ತರಾದಿಮಠದ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ]

ನಂದಿಬೆಟ್ಟದ ಟಿಪ್ಪುಡ್ರಾಪ್‌ನಿಂದ ಹಾರಿ ಪ್ರತ್ಯೂಷಾ (25) ಮತ್ತು ಸಾತ್ವಿಕ್ (2) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದ್ದು, ಚಿಕ್ಕಬಳ್ಳಾಪುರ ಡಿವೈಎಸ್ಪಿ ಪುರುಷೋತ್ತಮ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಪ್ರತ್ಯೂಷಾ ಶವ ಡಿಸೆಂಬರ್ 20ರ ಭಾನುವಾರ ಬೆಳಗ್ಗೆ ದೊರೆತಿದ್ದು, ಸಾತ್ವಿಕ್ ಶವಕ್ಕಾಗಿ ಹುಡುಕಾಟ ಮುಂದುವರೆದಿದೆ. [ಗಂಡನ ಮೇಲಿನ ಕೋಪಕ್ಕೆ ಹೆತ್ತ ಮಗುವನ್ನು ಕೊಂದಳೆ?]
ವರದಕ್ಷಿಣೆ ಕಿರುಕುಳ ಆರೋಪ : ಇಂಜಿನಿಯರಿಂಗ್ ಪದವೀಧರೆ ಪ್ರತ್ಯೂಷಾ ಅವರು ಮೂರು ವರ್ಷಗಳ ಹಿಂದೆ ಗೌರಿ ಬಿದನೂರಿನ ಸುಮನ್ ಅವರನ್ನು ವಿವಾಹವಾಗಿದ್ದರು. ಈ ದಂಪತಿಗಳಿಗೆ ಎರಡು ವರ್ಷದ ಸಾತ್ವಿಕ್ ಎಂಬ ಮಗುವಿದೆ.
'ಇಂಜಿನಿಯರಿಂಗ್ ಮುಗಿದ ತಕ್ಷಣ ಮಗಳನ್ನು ಮದುವೆ ಮಾಡಿಕೊಟ್ಟಿದ್ದೆವು. ವರದಕ್ಷಿಣೆ ಕಿರುಕುಳ ಯಾವಾಗ ಆರಂಭವಾಯಿತು? ಎಂಬ ಬಗ್ಗೆ ತಿಳಿದಿಲ್ಲ. ಆದರೆ, ಮಗಳು ಕೇಳಿದಾಗಲೆಲ್ಲ ಹಣ ನೀಡುತ್ತಿದ್ದೆವು' ಎಂದು ನಾಗರಾಜ್ ಹೇಳಿದ್ದಾರೆ.
'ಇತ್ತೀಚಿನ ದಿನಗಳಲ್ಲಿ ವರದಕ್ಷಿಣೆ ಹಣಕ್ಕಾಗಿ ಬೇಡಿಕೆ ಹೆಚ್ಚಾಗಿತ್ತು. ಈ ಕುರಿತು ಪ್ರತ್ಯೂಷಾ ಪೋನ್‌ನಲ್ಲಿ ಮಾತನಾಡಿದ್ದಳು. ಅನುಸರಿಸಿಕೊಂಡು ಹೋಗುವಂತೆ ನಾವು ಸಲಹೆ ನೀಡಿದ್ದೆವು. ಹಣ ತರಲಿಲ್ಲ ಎಂಬ ಕಾರಣಕ್ಕೆ ಸುಮನ್ ಮತ್ತು ಆತನ ಕುಟುಂಬದವರು ಪ್ರತ್ಯೂಷಾ ಮತ್ತು ಮಗುವನ್ನು ಕೊಲೆ ಮಾಡಿದ್ದಾರೆ' ಎಂದು ನಾಗರಾಜ್ ಆರೋಪಿಸಿದ್ದಾರೆ.
'ಪ್ರತ್ಯೂಷಾ ಡಿಸೆಂಬರ್ 17ರಂದು ಕಡೆಯ ಬಾರಿ ತಾಯಿಯ ಜೊತೆ ಮಾತನಾಡಿದ್ದಳು. ನಂತರ ಆಕೆಯನ್ನು ಸಂಪರ್ಕಿಸಲು ಪ್ರಯತ್ನ ನಡೆಸಿದರೂ ಯಾರೂ ಕರೆ ಸ್ವೀಕರಿಸಲಿಲ್ಲ. ಭಾನುವಾರ ಪೊಲೀಸರು ಕರೆ ಮಾಡಿ ಶವದ ಗುರುತು ಪತ್ತೆ ಹಚ್ಚುವಂತೆ' ತಿಳಿಸಿದಾಗ ಅವಳು ಸಾವನ್ನಪ್ಪಿರುವ ವಿಷಯ ತಿಳಿಯಿತು ಎಂದು ನಾಗರಾಜ್ ಹೇಳಿದ್ದಾರೆ.
ಪ್ರತ್ಯೂಷಾ ಸಾವಿನ ನಂತರ ಪತಿ ಸುಮನ್ ಮತ್ತು ಕುಟುಂಬದವರು ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇತ್ತ ಪ್ರತ್ಯೂಷಾ ಜೊತೆ ಸಾವನ್ನಪ್ಪಿರಬಹುದು ಎಂದು ಶಂಕಿಸಲಾದ ಮಗು ಸಾತ್ವಿಕ್ ಶವ ಪತ್ತೆಯಾಗಿಲ್ಲ.












Click it and Unblock the Notifications