‘ದೇವೇಗೌಡ್ರು ಕೋಲಾರದಲ್ಲಿ ಕುಟುಂಬದವರಿಗೆ ಬಿಟ್ಟು ಕಾರ್ಯಕರ್ತರಿಗೆ ಟಿಕೆಟ್ ಯಾಕೆ ಕೊಟ್ರು ಗೊತ್ತಾ?’
ಹಾಸನ, ಏಪ್ರಿಲ್ 20: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿದೆ. ದೇವೇಗೌಡ್ರು ಅಳಿಯ, ಮಗ, ಮೊಮ್ಮಗನನ್ನು ನಿಲ್ಲಿಸಿದ್ದಾರೆ. ಕೋಲಾರ ಮೀಸಲು ಸ್ಥಾನವಾಗಿರುವುದರಿಂದ ಬಿಟ್ಟಿದ್ದಾರೆ ಅಷ್ಟೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಜಂತರ್ ಮಂತರ್ ಬಳಿ ಕರ್ನಾಟಕಕ್ಕೆ ಅನ್ಯಾಯವಾಗಿರುವ ಬಗ್ಗೆ ಪ್ರತಿಭಟನೆಯಾದಾಗ ಪ್ರಜ್ವಲ್ ರೇವಣ್ಣ, ದೇವೇಗೌಡ ಬಾಯಿ ಬಿಟ್ಟರೇ? ಜನಗಳ ಪ್ರತಿನಿಧಿಯಾಗಿ ಲೊಕಸಭೆಯಲ್ಲಿ ಮಾತನಾಡದಿದ್ದರೆ ಯಾಕೆ ಹೋಗಬೇಕು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಎತ್ತಿನಹೊಳೆ ಯೋಜನೆಯನ್ನು ಹೆಚ್.ಡಿ ಕುಮಾರಸ್ವಾಮಿ ವಿರೋಧಿಸಿದ್ದರು. ಜನರ ದಾರಿ ತಪ್ಪಿಸಿ ಅಧಿಕಾರ ಮಾಡಿದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಪರವಾಗಿ ಮತಯಾಚಿಸಿದ್ದೆ. ಒಂದು ವೇಳೆ ನಾನು ಬರದೇ ಹೋಗಿದ್ದರೆ ಅವರು ಗೆಲ್ಲುತ್ತಿರರಲಿಲ್ಲ. ಈ ಬಾರಿ ಅವರನ್ನು ಸೋಲಿಸಿ ಎಂದು ಕರೆ ಕೊಡಲು ನಾನು ಬಂದಿದ್ದೇನೆ ಎಂದರು.

ಈ ಬಾರಿ ನೂರಕ್ಕೆ ನೂರು ಕಾಂಗ್ರೆಸ್ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ. ಈ ಬಾರಿ ಮೋದಿ ಅಲೆ ಇಲ್ಲ. ಅವರು ಕೊಟ್ಟ ಮಾತುಗಳಂತೆ ನಡೆದುಕೊಂಡಿಲ್ಲ. 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಈವರಗೆ 20 ಕೋಟಿ ಉದ್ಯೋಗ ಸೃಷ್ಟಿಸಬೇಕಿತ್ತು. ಆದರೆ ಮಾಡಲಿಲ್ಲ. ಎಂಬಿಬಿಎಸ್, ಇಂಜಿನಿಯರಿಂಗ್ ಮಾಡಿ ಪಕೋಡಾ ಮಾಡಲು ಹೋಗಬೇಕೇ? ಯುವ ಸಮೂಹ ನರೇಂದ್ರ ಮೋದಿ ಅಸಾಧ್ಯ ಸುಳ್ಳು ಹೇಳುತ್ತಾರೆಂದು ಅರ್ಥ ಮಾಡಿಕೊಂಡಿದೆ. ನಾವು ನಿರುದ್ಯೋಗಿ ಯುವಕರಿಗೆ ಯುವನಿಧಿ ಜಾರಿ ಮಾಡಿದ್ದೇವೆ.
ಬಡವರ ಹೊಟ್ಟೆಯ ಮೇಲೆ ಹೊಡೆಯಬೇಡಿ ಎಂದಾಗಲೂ ಅವರು ಒಪ್ಪಲಿಲ್ಲ. ಹೆಚ್.ಡಿ.ಕುಮಾರಸ್ವಾಮಿಯವರು ಈ ಬಗ್ಗೆ ಕೇಳಲಿಲ್ಲ. ಅದಕ್ಕಾಗಿ 5 ಗ್ಯಾರಂಟಿಗಳಲ್ಲಿ ಅಕ್ಕಿ ಕೊಡುವುದಾಗಿ ಹೇಳಿದ್ದೆವು. ಆದರೆ ಕೇಂದ್ರ ಸರ್ಕಾರದ ರಾಜಕೀಯದಿಂದಾಗಿ ಅಕ್ಕಿ ಕೊಡದೇ ಹೋದರು. ನರೇಂದ್ರ ಮೋದಿಯವರಿಂದ ಅಕ್ಕಿ ಕೊಡಬಾರದು ಎಂದು ಆದೇಶವಿದೆ ಎಂದು ಅಧಿಕಾರಿಗಳು ತಿಳಿಸಿದರು. ಗೃಹ ಜ್ಯೋತಿ ಮೂಲಕ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿಗೆ 2000 ರೂ.ಗಳನ್ನು ನೀಡಲಾಗುತ್ತಿದೆ. ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಓಡಾಡುತ್ತಿದ್ದಾರೆ. ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಯಾರಿಗೆ ಮತ ಹಾಕಬೇಕೆಂದು ನೀವೇ ತೀರ್ಮಾನ ಮಾಡಬೇಕು ಎಂದರು.
ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ತಾರೆ. ಶ್ರೀಧರ್ ಗೌಡ ಮತ್ತು ಕೃಷ್ಣೇಗೌಡರು ಇಬ್ಬರೂ ಒಟ್ಟಾಗಿ ಸಮಾನ ಮನಸ್ಕರಾಗಿ ಕೆಲಸ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಇವರಿಬ್ಬರೂ ಒಟ್ಟಾಗಿ ಅರಕಲಗೋಡು ಕ್ಷೇತ್ರದಲ್ಲಿ 30 ಸಾವಿರಕ್ಕೂ ಅಧಿಕ ಮತಗಳ ಲೀಡ್ ಕೊಡಿಸುತ್ತಾರೆ ಎನ್ನುವ ಭರವಸೆ ನನಗಿದೆ ಎಂದರು.
ವಿಧಾನಸಭಾ ಚುನಾವಣೆ ವೇಳೆ ರಾಹುಲ್ ಗಾಂಧಿಯವರು ಜೆಡಿಎಸ್ ಪಕ್ಷವನ್ನು ಬಿಜೆಪಿಯ "ಬಿ" ಟೀಮ್ ಎಂದಿದ್ದರು. ಆಗ ದೇವೇಗೌಡರು ಈ ಮಾತನ್ನು ವಿರೋಧಿಸಿದ್ದರು. ಈಗ ಅದೇ ದೇವೇಗೌಡರು ಹೋಗಿ ಮೋದಿಯವರ ಜತೆ ಜಮೆಯಾಗಿದ್ದಾರೆ. ರಾಹುಲ್ ಗಾಂಧಿ ಅವರ ಮಾತನ್ನು ದೇವೇಗೌಡರು ಸಾಬೀತು ಮಾಡಿದ್ದಾರೆ ಎಂದರು.
ರಾಜ್ಯದ ಪರವಾಗಿ-ಹಾಸನ ಪರವಾಗಿ ಪ್ರಜ್ವಲ್ ರೇವಣ್ಣ ಪಾರ್ಲಿಮೆಂಟಿನಲ್ಲಿ ಬಾಯೇ ಬಿಡಲಿಲ್ಲ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಚಕಾರವನ್ನೇ ಎತ್ತಲಿಲ್ಲ. ಹೀಗಾಗಿ ಈ ಬಾರಿ ಇವರನ್ನು ಸೋಲಿಸಿ ರಾಜ್ಯದ ಪರವಾಗಿ ಧ್ವನಿ ಎತ್ತುವ ಸಾಮರ್ಥ್ಯ ಇರುವ ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸಿ ಎಂದು ಕರೆ ನೀಡಿದರು.
ರಾಜ್ಯದ ಪಾಲಿನ ತೆರಿಗೆ ಪಾಲನ್ನೂ ಕೇಂದ್ರ ಸರ್ಕಾರ ಕೊಡಲಿಲ್ಲ. ಬರಗಾಲ ಬಂದಿದ್ದರೂ ನಮ್ಮ ಪಾಲನ್ನು ಕೊಟ್ಟಿಲ್ಲ. ಹೀಗಾಗಿ ನರೇಂದ್ರ ಮೋದಿಯವರು ಮತ್ತು ಬಿಜೆಪಿಯವರು ಯಾವ ಮುಖ ಹೊತ್ಕೊಂಡು ರಾಜ್ಯದ ಜನರಿಂದ ಮತ ಕೇಳುತ್ತಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಡೀ ದೇಶದ ರೈತರ ಸಾಲ ಮನ್ನಾ ಮಾಡಲಾಗುವುದು. ಮೋದಿಯವರು ಅತ್ಯಂತ ಶ್ರೀಮಂತರ ಸಾಲವನ್ನು ಮಾತ್ರ ಮನ್ನಾ ಮಾಡಿದರು. ಆದರೆ ಕಾಂಗ್ರೆಸ್ ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತದೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದರು. ಈ ಬಾರಿ ಇದು ಮರುಕಳಿಸುತ್ತದೆ ಎಂದರು. ಹಾಗೆಯೇ ಮಹಿಳೆಯರ ಖಾತೆಗೆ ವರ್ಷಕ್ಕೆ 1 ಲಕ್ಷ ರೂಪಾಯಿ ಹಾಕುವುದೂ ಸೇರಿ 25 ಗ್ಯಾರಂಟಿಗಳನ್ನು ಕಾಂಗ್ರೆಸ್ ಘೋಷಿಸಿದೆ. ಇವೆಲ್ಲವನ್ನೂ ಜಾರಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರು ಮಾಡಿದ್ದೇನು?
ಕೆಂಪೇಗೌಡ ಜಯಂತಿ ಆರಂಭಿಸಿದ್ದು ನಾವು, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದು ನಾವು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಟ್ಟಿದ್ದು ನಾವು: ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಮಾಡಿದ್ದೇನು ಹೇಳಿ ಎಂದು ಸಿ.ಎಂ ಪ್ರಶ್ನಿಸಿದರು.
ಪ್ರತಾಪ್ ಸಿಂಹ, ಸದಾನಂದಗೌಡರಿಗೆ ಟಿಕೆಟ್ ತಪ್ಪಿಸಿ ಒಕ್ಕಲಿಗರಿಗೆ ಅನ್ಯಾಯ ಮಾಡಿದ್ದು ಯಾರು ದೇವೇಗೌಡರೇ? ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ಒಕ್ಕಲಿಗ ಸಮುದಾಯದ ನಾಯಕರಿಗೆ ಅತಿ ಹೆಚ್ಚು ಅನ್ಯಾಯ ಆಗಿರುವುದು ಬಿಜೆಪಿ, ಜೆಡಿಎಸ್ ನಿಂದಲೇ ಎಂದು ವಿವರಿಸಿದರು.












Click it and Unblock the Notifications