ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿ ವೆಸ್ಟ್ ಎಂಡ್ ಹೋಟೆಲ್ನಲ್ಲಿದ್ದಿದ್ದು ಯಾಕೆ? ಸಿದ್ದರಾಮಯ್ಯ
ಬೆಂಗಳೂರು, ಅಕ್ಟೋಬರ್ 23: ಕಳೆದ ವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಸ್ಟ್ರೇಲಿಯ ಮತ್ತು ಪಾಕಿಸ್ತಾನದ ನಡುವೆ ನಡೆದ ಐಸಿಸಿ ವಿಶ್ವಕಪ್ 2023 ಟೂರ್ನಿಯ ರೌಂಡ್ ರಾಬಿನ್ ಪಂದ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವೀಕ್ಷಿಸಿದ್ದಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದು, ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಹೌದು, ಈ ಕುರಿತು ಸೋಮವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿದ್ದರಾಮಯ್ಯ, ಕ್ರೀಡೆಯನ್ನು ಬೆಂಬಲಿಸಲು ನಾವು ಹೋಗಿದ್ದು ಬೇರೆ ಯಾವ ಕಾರಣಕ್ಕೂ ಅಲ್ಲ ಎಂದು ಹೇಳಿದರು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ, ವೆಸ್ಟ್ ಎಂಡ್ ಹೋಟೆಲ್ನಲ್ಲಿದ್ದರಲ್ಲ ಅದ್ಯಾಕೆ ಅಂತ ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. ಅಲ್ಲದೇ ಕಾವೇರಿ ನಿವಾಸವನ್ನು ಅವರು ಕೇಳಿದ್ದರೆ ಬಿಟ್ಟು ಕೊಡುತ್ತಿದ್ದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮುಖ್ಯಮಂತ್ರಿಗಳು ವಸತಿಗೃಹವನ್ನು ಹಿಂದಿರುಗಿಸಿಲ್ಲ ಎಂಬ ಅವರ ಟೀಕೆಗೆ ಉತ್ತರಿಸಿದ ಅವರು, ಬಿ ಎಸ್ ಯಡಿಯೂರಪ್ಪನವರೂ ಕಾವೇರಿಯಲ್ಲಿ ಕಡೆಯತನಕ ವಾಸವಿದ್ದರು. ಜಾರ್ಜ್ ಅವರಿಗೆ ಹಂಚಿಕೆಯಾಗಿದ್ದ ವಸತಿಗೃಹದಲ್ಲಿ ನಾನು ವಾಸವಿದ್ದೆ. ನಾನು ವಾಸವಿದ್ದ ವಸತಿಗೃಹ ಮೀಸಲಾದ ವಸತಿಗೃಹವಲ್ಲ. ಅದರಲ್ಲಿ ಯಾರು ಬೇಕಾದರೂ ವಾಸವಿರಬಹುದು ಎಂದು ಹೇಳಿದರು.

ತಮ್ಮ ಹಿಂದಿನ ಸರ್ಕಾರವನ್ನು ಕೆಡವಲು ಸಿದ್ದರಾಮಯ್ಯರವರೂ ಕಾರಣರು ಎಂಬ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಕುಣಿಯಲಾರದವರು ನೆಲಡೊಂಕು ಎಂದು ಹೇಳುವಂತೆ ತಮಗೆ ಸರ್ಕಾರವನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಕಾರಣ , ಬೇರೆಯವರ ಮೇಲೆ ಆರೋಪವನ್ನು ಹೊರಿಸಿರುವುದು ನಿರರ್ಥಕ ಎಂದು ತಿಳಿಸಿದರು. ಇನ್ನೂ ನಾಳೆ ನಡೆಯಲಿರುವ ಚಾಮುಂಡೇಶ್ವರಿ ದೇವಿ ಮೆರವಣಿಗೆ, ನಂದಿಕಂಬದ ಪೂಜೆ, ಪಂಜಿನ ಮೆರವಣಿಗೆ ಸೇರಿದಂತೆ ದಸರಾ ಮಹೋತ್ಸವದಲ್ಲಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಭಾಗವಹಿಸಲಿದ್ದೇನೆ ಎಂದರು.












Click it and Unblock the Notifications