CM Post: ಜೋರಾಯ್ತು ಸಿಎಂ ಸ್ಥಾನಕ್ಕೆ ಡಿಮ್ಯಾಂಡ್; ನಿನ್ನೆ ಒಕ್ಕಲಿಗ ಸ್ವಾಮೀಜಿ.. ಇಂದು ಲಿಂಗಾಯತ ಶ್ರೀಗಳಿಂದ ಆಗ್ರಹ
ಬೆಳಗಾವಿ, ಜೂನ್ 28: ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಮುಖ್ಯಮಂತ್ರಿ ಬದಲಾವಣೆ, ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ವಿಚಾರ ಕರ್ನಾಟಕ ಕಾಂಗ್ರೆಸ್ನಲ್ಲಿ ಗೊಂದಲಕ್ಕೆ ಕಾರಣವಾಗಿದೆ. ನಿನ್ನೆಯಷ್ಟೇ (ಜೂನ್28) ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಒಕ್ಕಲಿಗ ಸ್ವಾಮೀಜಿಯೊಬ್ಬರು ಸಿದ್ದರಾಮಯ್ಯ ಅವರ ಮುಂದೆ ಮನವಿ ಮಾಡಿದ್ದು, ಇದೀಗ ವೀರಶೈವ ಲಿಂಗಾಯತರಿಗೆ ಆದ್ಯತೆ ನೀಡಬೇಕೆಂದು ಶ್ರೀಶೈಲ ಜಗದ್ಗುರುಗಳು ಒತ್ತಾಯಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಮಾತನಾಡಿದ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತರಾದ್ಯ ಶಿವಾಚಾರ್ಯ ಸ್ವಾಮೀಜಿ, ಮುಖ್ಯಮಂತ್ರಿ ಬದಲಾವಣೆ ಮಾಡುವುದೇ ಆದರೆ ವೀರಶೈವ ಲಿಂಗಾಯತರಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ನಿನ್ನೆ(ಜೂನ್ 27) ಚಂದ್ರಶೇಖರ ಸ್ವಾಮೀಜಿ ಡಿ.ಕೆ ಶಿವಕುಮಾರಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವಂತೆ ಹೇಳಿಕೆ ನೀಡಿದ ಬೆನ್ನಲೆ. ಸ್ವಾಮೀಜಿಗಳ ಮೂಲಕವೇ ಲಿಂಗಾಯತ ಮುಖ್ಯಮಂತ್ರಿ ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನದಲ್ಲಿ ಬದಲಾವಣೆ ಹಾಗೂ ಡಿಸಿಎಂ ಸ್ಥಾನಗಳನ್ನ ಹೆಚ್ಚುವರಿ ಮಾಡಿದರೆ. ಲಿಂಗಾಯತ ಮಂತ್ರಿಗಳಿಗೆ ಹೆಚ್ಚಿನ ಸ್ಥಾನ ನೀಡಬೇಕು.ಚುನಾವಣೆ ಸಂದರ್ಭದಲ್ಲಿ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿದ್ದಾರೆ.
ಲಿಂಗಾಯತ ನಾಯಕರಾದ ಎಂ.ಬಿ. ಪಾಟೀಲ್, ಈಶ್ವರ ಖಂಡ್ರೆ, ಎಸ್.ಎಸ್. ಮಲ್ಲಿಕಾರ್ಜುನ ಹಾಗೂ ಶಾಮನೂರು ಶಿವಶಂಕರಪ್ಪ ಇಂತಹವರಿಗೆ ಅವಕಾಶ ನೀಡಬೇಕು. ಕಾಶಿ, ಉಜ್ಜಯಿನಿ, ಜಗದ್ಗುರುಗಳ ಜೊತೆಗೂ ಈ ವಿಚಾರದಲ್ಲಿ ಚರ್ಚೆ ಮಾಡಲಾಗಿದೆ. ಒಂದು ವೇಳೆ ಮುಖ್ಯಮಂತ್ರಿ ಆಗುವ ಸಂದರ್ಭದಲ್ಲಿ ಒಂಡಂಬಡಕೆ ಆಗಿದ್ದರೆ ಒಡಂಬಡಿಕೆಯ ಪ್ರಕಾರ ನಡೆದುಕೊಳ್ಳಲಿ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತರಾದ್ಯ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದ್ದಾರೆ.












Click it and Unblock the Notifications