'ದಳಪತಿ'ಯಾದ ಎಚ್.ವಿಶ್ವನಾಥ್ ಮುಂದಿರುವ ಸವಾಲುಗಳು!
Recommended Video

ಬೆಂಗಳೂರು, ಆಗಸ್ಟ್ 06 : ಮಾಜಿ ಸಚಿವ, ಸಂಸದ ಮತ್ತು ಹುಣಸೂರು ಕ್ಷೇತ್ರದ ಹಾಲಿ ಶಾಸಕ ಎಚ್.ವಿಶ್ವನಾಥ್ (69) ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಲೋಕಸಭೆ ಚುನಾವಣೆ ಎದುರಾಗಿರುವಾಗ ವಿಶ್ವನಾಥ್ ಅವರ ಮುಂದೆ ಹಲವು ಸವಾಲುಗಳು ಇವೆ.
ಅಡಗೂರು ಹುಚ್ಚೇಗೌಡ ವಿಶ್ವನಾಥ್ (ಎಚ್.ವಿಶ್ವನಾಥ್) 2018ರ ಕರ್ನಾಟಕ ವಿಧಾನಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿದವರು. ಒಕ್ಕಲಿಗರ ನೆಚ್ಚಿನ ಪಕ್ಷವಾದ ಜೆಡಿಎಸ್‌ಗೆ ಕುರುಬ ಸಮುದಾಯಕ್ಕೆ ಸೇರಿದ ನಾಯಕನನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಭಾವ ತಗ್ಗಿಸಲು ಎಚ್.ಡಿ.ದೇವೇಗೌಡ ಅವರು ಕುರುಬ ಸಮಯದಾಯಕ್ಕೆ ಸೇರಿದ ವಿಶ್ವನಾಥ್ ಅವರನ್ನು ಜೆಡಿಎಸ್ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸಿದ್ದರಾಮಯ್ಯ ಅವರು ಅಹಿಂದವನ್ನು ಕಟ್ಟಿ ಜೆಡಿಎಸ್‌ನಿಂದ ಉಚ್ಛಾಟನೆಗೊಂಡರು. ಆಗ ಅವರನ್ನು ಕಾಂಗ್ರೆಸ್‌ಗೆ ಕರೆತರುವಲ್ಲಿ ವಿಶ್ವನಾಥ್ ಅವರ ಪಾತ್ರವೂ ಮುಖ್ಯವಾದದ್ದು. ಆದರೆ, ವಿಶ್ವನಾಥ್ ಅವರು ಕಾಂಗ್ರೆಸ್ ತೊರೆಯಲು ಸಿದ್ದರಾಮಯ್ಯ ಅವರು ಕಾರಣ ಎಂಬುದು ಗುಟ್ಟಾಗಿ ಉಳದಿಲ್ಲ. ನೂತನ ಅಧ್ಯಕ್ಷರ ಮುಂದಿರುವ ಸವಾಲುಗಳು ಏನು? ಚಿತ್ರಗಳಲ್ಲಿ ನೋಡಿ...

ರಾಜ್ಯದಲ್ಲಿ ಪಕ್ಷ ಸಂಘಟನೆ
2018ರ ಕರ್ನಾಟಕ ವಿಧಾನಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ರಾಜ್ಯದಲ್ಲಿ ಜೆಡಿಎಸ್ ಪಕ್ಷ ಸಂಘಟನೆ ಪ್ರಬಲವಾಗಿಲ್ಲ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಗಳಿಸಿದ ಸೀಟು ಕೇವಲ 37. ಆದ್ದರಿಂದ, ನೂತನ ಅಧ್ಯಕ್ಷರಾದ ಎಚ್.ವಿಶ್ವನಾಥ್ ಅವರು ರಾಜ್ಯ ಸಂಚಾರವನ್ನು ಮಾಡಿ ಪಕ್ಷವನ್ನು ಸಂಘಟನೆ ಮಾಡಬೇಕಿದೆ. ಸಮ್ಮಿಶ್ರ ಸರ್ಕಾರದ ಬಗ್ಗೆ ಕೆಲವು ಕಾರ್ಯಕರ್ತರಲ್ಲಿ ಇರುವ ಅಸಮಾಧಾನವನ್ನು ಸರಿಪಡಿಸಬೇಕಿದೆ.

ಸಮನ್ವಯ ಸಾಧಿಸುವುದು
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದೆ. ಆದ್ದರಿಂದ, ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯತೆ ಸಾಧಿಸುವ ಸವಾಲು ವಿಶ್ವನಾಥ್ ಅವರ ಮುಂದಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿರುವುದರಿಂದ ಕಾರ್ಯಕರ್ತರ ನಿರೀಕ್ಷೆಗಳು ಹೆಚ್ಚಿರುತ್ತವೆ. ಪಕ್ಷದ ಕಚೇರಿಯಲ್ಲಿ ಅಧ್ಯಕ್ಷರು ಅವರಿಗೆ ಲಭ್ಯವಾಗುವಂತೆ ಇರಬೇಕು, ಅವರ ಅಹವಾಲುಗಳನ್ನು ಸ್ವೀಕರಿಸಿ ಅದನ್ನು ಸರ್ಕಾರಕ್ಕೆ ಮುಟ್ಟಿಸುವ ಕೆಲಸವನ್ನು ಮಾಡಬೇಕಿದೆ.

ಲೋಕಸಭೆ ಚುನಾವಣೆ 2019
ಎಚ್.ವಿಶ್ವನಾಥ್ ಅವರು ಆಗಸ್ಟ್ 5ರಂದು ಜೆಡಿಎಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ವರ್ಷದ ಅಂತ್ಯ ಅಥವ 2019ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಅದನ್ನು ಎದುರಿಸುವ ಸವಾಲು ಅವರ ಮುಂದಿದೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಾಗಿ ಜೆಡಿಎಸ್ ಈಗಾಗಲೇ ಘೋಷಣೆ ಮಾಡಿದೆ. ಸೀಟು ಹಂಚಿಕೆ, ಪ್ರಚಾರ ಹೀಗೆ ಹಲವಾರು ಸವಾಲುಗಳನ್ನು ಎಚ್.ವಿಶ್ವನಾಥ್ ಅವರು ಎದುರಿಸಬೇಕಾಗುತ್ತದೆ.
2014ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಗಳಿಸಿದ್ದು 2 ಸ್ಥಾನಗಳನ್ನು ಮಾತ್ರ. ವಿಧಾನಸಭೆ ಚುನಾವಣೆ ಬಳಿಕ ಮಂಡ್ಯ ಸಂಸದ ಸ್ಥಾನಕ್ಕೆ ಸಿ.ಎಸ್.ಪುಟ್ಟರಾಜು ರಾಜೀನಾಮೆ ನೀಡಿದ್ದಾರೆ. ಈಗ ಉಳಿದಿರುವುದು ಕೇವಲ 1 ಸ್ಥಾನ (ಹಾಸನ).

ಉತ್ತರ ಕರ್ನಾಟಕ ಭಾಗದತ್ತ ಚಿತ್ತ
ಜೆಡಿಎಸ್ ಪಕ್ಷ ಹಳೇ ಮೈಸೂರು ಭಾಗಕ್ಕೆ ಮಾತ್ರ ಸೀಮಿತ ಎಂಬ ಆರೋಪವಿದೆ. ಕಳೆದ ವಾರ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂಬ ವಿಚಾರದಲ್ಲಿ ಸುಧೀರ್ಘ ಚರ್ಚೆ ನಡೆದಿದೆ. ಉತ್ತರ ಕರ್ನಾಟಕ ಭಾಗದತ್ತ ಅವರು ಗಮನ ಹರಿಸಬೇಕಾದ ಸವಾಲು ಇದೆ.
ಪಕ್ಷ ಸಂಘಟನೆಯಾಗಿರಬಹುದು, ಲೋಕಸಭೆ ಚುನಾವಣೆಯಾಗಿರಬಹುದು ಅವರು ಉತ್ತರ ಕರ್ನಾಟಕದತ್ತ ಹೆಚ್ಚು ಗಮನ ಹರಿಸಲೇಬೇಕಾಗಿದೆ. ಇದರಿಂದಾಗಿ ಮುಂದಿನ ಚುನಾವಣೆಗೂ ಸಹಾಯಕವಾಗಲಿದೆ.

ಅಪ್ಪ ಮಕ್ಕಳ, ಕುಟುಂಬದ ಪಕ್ಷ
ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ ಎಂಬ ಆರೋಪ ಹಿಂದಿನಿಂದಲೂ ಇದೆ. ಈ ಆರೋಪವನ್ನು ದೂರ ಮಾಡಲು ಎಚ್.ಡಿ.ದೇವೇಗೌಡರು ಎಚ್.ವಿಶ್ವನಾಥ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಆದರೆ, ಪಕ್ಷದ ಚಟುವಟಿಕೆಯಲ್ಲಿ ಗೌಡರ ಕುಟುಂಬದ ಹಸ್ತಕ್ಷೇಪವಿದ್ದರೆ ಅದನ್ನು ತಡೆದು, ಇದು ಕಾರ್ಯಕರ್ತರ ಪಕ್ಷ ಎಂದು ಅದನ್ನು ಕಟ್ಟುವ ಸವಾಲು ಎಚ್.ವಿಶ್ವನಾಥ್ ಅವರ ಮುಂದಿದೆ.











Click it and Unblock the Notifications