'ರಸ್ತೆ ಗುಂಡಿ ಮುಚ್ಚಲು 1,100 ಕೋಟಿ ಬಿಡುಗಡೆಯ ಲೆಕ್ಕ ಕೊಡಿ'
ಬೆಂಗಳೂರು,ಸೆಪ್ಟೆಂಬರ್ 25: ರಸ್ತೆ ಗುಂಡಿ ಮುಚ್ಚಲು 1,100 ಕೋಟಿ ಬಿಡುಗಡೆ ಮಾಡಿದ್ದಾಗಿ ಹೇಳುತ್ತಾರೆ. ಎಲ್ಲಿ ಮಾಡಿದ್ದೀರಿ. ಯಾರಿಗೆ ಕೊಟ್ಟಿದ್ದೀರೆಂದು ಲೆಕ್ಕ ಕೊಡಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.
ರಸ್ತೆ ಗುಂಡಿಗಳನ್ನು ಮುಚ್ಚುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ ಹಾಗೂ ಅಭಿವೃದ್ಧಿಯನ್ನು ಕಡೆಗಣಿಸಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ಸದಾಶಿವ ನಗರದ 18ನೇ ಕ್ರಾಸ್ ನ ಗಿರಿಯಾಸ್ ಶೋ ರೂಮ್ ಬಳಿ ಗುಂಡಿ ಮುಚ್ಚುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಮ್ಮನೆ ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬೇಡಿ ಎಂದು ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಪ್ರಧಾನಿ ಮನೆ ಮುಂದೆ ಗುಂಡಿ ಇರುವುದು ಕನಸಿನಲ್ಲಿ ಬರುತ್ತದೆ. ನೀವು ಯಾವಾಗ ನೋಡಿದ್ದೀರಿ ಎಂದು ಕೇಳಿದರು. ನಿಮ್ಮ ಮನೆ ಮುಂದೆ ಇರುವ ಗುಂಡಿ ಇವತ್ತು ನಾವು ಮುಚ್ಚಿದ್ದೇವೆ. ಬಂದು ನೋಡಿ ಎಂದು ಹೇಳಿದರು. ಇವತ್ತು ನಮ್ಮ ಪಕ್ಷದ ಕಾರ್ಯಕರ್ತರು ಇಡೀ ಬೆಂಗಳೂರಿನಲ್ಲಿ ಗುಂಡಿ ಮುಚ್ಚುವ ಕಾರ್ಯ ಮಾಡಿದ್ದೇವೆ. ಇದು ರಾಜ್ಯಾದ್ಯಂತ ನಡೆಯುತ್ತಿದೆ. ಈ ಗುಂಡಿ ಸರಕಾರ, ಬುರುಡೆ ಸರಕಾರ, ಸುಳ್ಳುಗಳನ್ನು ಹೇಳುವ ಸರಕಾರ, ವಂಚನೆ ಮಾಡುವ ಸರಕಾರದ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ ಎಂದು ಹೇಳಿದರು.
ಇದನ್ನು ನಿಮಗೆ ಎಚ್ಚರಿಕೆ ಇಲ್ಲವೇ ಪಾಠ ಎಂದು ತಿಳಿದುಕೊಳ್ಳಿ. ಇಲ್ಲವೇ ಇದೊಂದು ಸೂಚನೆ ಎಂದು ತಿಳಿದುಕೊಳ್ಳಿ. ಬರಿಯ ಲೂಟಿ ಸರಕಾರವನ್ನು ಜನರು ಒಪ್ಪುವುದಿಲ್ಲ ಎಂದು ಎಚ್ಚರಿಸಿದರು. ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಕಾಪಾಡುವುದಕ್ಕೆ ಇದ್ದಾರೆಯೇ? ಅಥವಾ ಲೂಟಿ ಮಾಡಲು ಇದ್ದಾರೆಯೇ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ರಸ್ತೆ ಗುಂಡಿ ಮುಚ್ಚುವ ಸ್ಥಿತಿಯಲ್ಲಿ ಇಲ್ಲ. ಏಕೆಂದರೆ ಸರ್ಕಾರದ ಖಜಾನೆ ಖಾಲಿಯಾಗಿದ್ದು, ರಸ್ತೆ ಗುಂಡಿ ಮುಚ್ಚುವುದಕ್ಕೆ ಅವರ ಬಳಿ ಹಣವಿಲ್ಲ, ಅವರಿಗೆ ಇರುವ ಹಣವನ್ನು ನುಂಗಿ ಸಾಕಾಗಿದೆ ಎಂದು ಅವರು ಟೀಕಿಸಿದರು. ನ್ಯಾಯಾಲಯ ಆದೇಶ ನೀಡಿದ್ದರೂ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಸರ್ಕಾರ ಮಾಡಲಿಲ್ಲ. ಆಗಿದ್ದ ಹಾಗೆ ರಸ್ತೆ ಗುಂಡಿ ಮುಚ್ಚುವ ಕೆಲಸ ಸರ್ಕಾರ ಮಾಡಿದ್ದರೆ ಇಂದು ಈ ಪರಿಸ್ಥಿತಿ ಇರುತ್ತಿರಲಿಲ್ಲ. ಆದರೆ ಸರ್ಕಾರಕ್ಕೆ ಎಷ್ಟು ಬಾರಿ ಹೇಳಿದರು ಕೂಡ ಬಿಜೆಪಿಯವರು ಏನಾದರು ಹೇಳಲಿ ನಾವು ಕೇರ್ ಮಾಡುವುದಿಲ್ಲ ಎಂದು ಹೇಳುತ್ತಾರೆ. ಅಂದರೆ ಬಿಜೆಪಿ ಇರುವುದೇಕೆ?; ಬಿಜೆಪಿ ವಿರೋಧ ಪಕ್ಷವಾಗಿ ಕೆಲಸ ಮಾಡಬಾರದೇ ಎಂದು ಪ್ರಶ್ನಿಸಿದರು.
ಇಂದು ಬೆಂಗಳೂರಿನ ಎಲ್ಲ ಉದ್ಯಮಿಗಳು ರಸ್ತೆ ಗುಂಡಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರಿನ ಈ ಪರಿಸ್ಥಿತಿಯಿಂದ ಬೆಂಗಳೂರು ಬಿಟ್ಟು ಹೋಗಬೇಕಾಗುತ್ತದೆ ಎಂದು ಟ್ವೀಟ್ ಮಾಡುತ್ತಿದ್ದಾರೆ. ಅಂತಹ ಪರಿಸ್ಥಿತಿ ಸರ್ಕಾರಕ್ಕೆ ಇದ್ದರೆ, ಸರ್ಕಾರವು ರಸ್ತೆಗಳನ್ನು ಸರಿಪಡಿಸಿ ಅನುಕೂಲ ಮಾಡಿಕೊಡುತ್ತೇವೆ ಎಂದು ಹೇಳುವುದನ್ನು ಬಿಟ್ಟು, ಯಾರು ಬೇಕಾದರು ಹೋಗುವವರ ಹೋಗಬಹುದು ಎಂದು ಉದ್ಧಟತನದ ಹೇಳಿಕೆಯನ್ನು ನೀಡಿದ್ದಾರೆ ಎಂದು ಆಕ್ಷೇಪಿಸಿದರು.
ಬೆಂಗಳೂರು ನಗರದ ಮಂತ್ರಿಗಳು ಪ್ರಧಾನಮಂತ್ರಿಗಳ ಮನೆಯ ಮುಂದೆ ಗುಂಡಿ ಇದೆ ಎಂದು ಹೇಳಿಕೆ ನೀಡಿದ್ದಾರೆ. ಗುಂಡಿ ಇರುವ ಬಗ್ಗೆ ಇವರೇನಾದರು ಹೋಗಿ ನೋಡಿದ್ದಾರೆಯೇ? ಎಂದು ಕೇಳಿದರು. ಸರ್ಕಾರದ ಈ ಉದ್ಧಟತನ ಮತ್ತು ಬೆಂಗಳೂರು ನಗರದ ಅಭಿವೃದ್ಧಿ ಮಂತ್ರಿಗಳ ಹೇಳಿಕೆಯನ್ನು ವಿರೋಧಿಸಿ ರಸ್ತೆ ಗುಂಡಿ ಮುಚ್ಚುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.












Click it and Unblock the Notifications