ಸಿಇಟಿ ಬಿಕ್ಕಟ್ಟು: ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ ಸರಕಾರ
ಬೆಂಗಳೂರು, ಸೆ.14: ಪ್ರಸಕ್ತ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ ಕುರಿತಂತೆ ಉಂಟಾಗಿರುವ ಬಿಕ್ಕಟ್ಟು ಬಗೆಹರಿಸಲು ಒದ್ದಾಡುತ್ತಿರುವ ಸರಕಾರ, ನ್ಯಾಯಾಲಯದಲ್ಲೇ ಅದಕ್ಕೆ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ.
ಈ ಮೊದಲೇ ನಡೆದ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧರಿಸಿದ್ದಂತೆ ಏಕಸದಸ್ಯಪೀಠದ ತೀರ್ಪಿನ ವಿರುದ್ಧ ಸರ್ಕಾರ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ.
2020-21 ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು 2022ನೇ ಸಾಲಿನ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸಲಾಗದು ಎಂದು ತಿಳಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜು.30ರಂದು ಹೊರಡಿಸಿದ್ದ ಟಿಪ್ಪಣಿ ರದ್ದುಪಡಿಸಿದ್ದ ಏಕಸದಸ್ಯಪೀಠದ ತೀರ್ಪು ಪ್ರಶ್ನಿಸಿ ಸರ್ಕಾರವು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆ.

2020-21ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು 2022ನೇ ಸಾಲಿನ ಸಿಇಟಿ ಫಲಿತಾಂಶಕ್ಕೆ ಪರಿಗಣಿಸದ ಕೆಇಎ ಕ್ರಮ ಪ್ರಶ್ನಿಸಿ 50ಕ್ಕೂ ಅಧಿಕ ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಿದ್ದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರ ಏಕಸದಸ್ಯಪೀಠ ಸೆ.3ರಂದು ಆದೇಶ ಹೊರಡಿಸಿತ್ತು.
ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳ ಪಿಯುಸಿಯ ಶೇ.50 ಅಂಕ ಹಾಗೂ ಸಿಇಟಿಯ ಶೇ.50 ಅಂಕಗಳನ್ನು ಪರಿಗಣಿಸಿ ಹೊಸದಾಗಿ Rank ಪಟ್ಟಿ ಪ್ರಕಟಿಸುವಂತೆ ಕೆಇಎಗೆ ಸೆ.3ರಂದು ಆದೇಶಿಸಿತ್ತು. ಈ ಆದೇಶವನ್ನು ರದ್ದುಪಡಿಸುವಂತೆ ಕೋರಿ ಇದೀಗ ರಾಜ್ಯ ಉನ್ನತ ಶಿಕ್ಷಣ ಇಲಾಖೆಗೆ ವಿಭಾಗೀಯಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆ.
ಸಮಾನವಾಗಿ ಪರಿಗಣಿಸಲಾಗದು: ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳು, 2020-2021ನೇ ಸಾಲಿನಲ್ಲಿ ಪಿಯು ಪರೀಕ್ಷೆಯನ್ನೇ ಎದುರಿಸಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿದ್ದ ಆದೇಶದ ಅನುಸಾರ ಅವರು ಅಂಕಗಳನ್ನು ಪಡೆದುಕೊಂಡಿದ್ದಾರೆ. 2020-21ನೇ ಸಾಲಿನಲ್ಲಿ ಪಿಯು ವಿದ್ಯಾರ್ಥಿಗಳು ಅನುತ್ತೀರ್ಣ ಆಗಿರಲಿಲ್ಲ.
2021-22ನೇ ಸಾಲಿನ ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ್ದ ಪರಿಕ್ಷೆಯನ್ನು ಎದುರಿಸಿದ್ದರು. ಹಲವು ವಿದ್ಯಾರ್ಥಿಗಳು 600ಕ್ಕೆ 600 ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ಹಿಂದಿನ ಸಾಲಿನ ವಿದ್ಯಾರ್ಥಿಗಳು ಇಷ್ಟು ಅಂಕಗಳನ್ನು ಪಡೆದುಕೊಂಡಿಲ್ಲ. ಪರೀಕ್ಷೆಯನ್ನೇ ಬರೆಯದೇ ಉತ್ತೀರ್ಣವಾಗಿರುವ ವಿದ್ಯಾರ್ಥಿಗಳನ್ನು ಪರೀಕ್ಷೆ ಎದುರಿಸಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳೊಂದಿಗೆ ಸಮಾನವಾಗಿ ನೋಡಲಾಗದು ಎಂದು ಮೇಲ್ಮನವಿಯಲ್ಲಿ ಆಕ್ಷೇಪಿಸಿದೆ.

ಏಕ ಸದಸ್ಯಪೀಠದ ಆದೇಶ ಅನುಷ್ಠಾನ ಮಾಡಿದರೆ, 2022ನೇ ಸಾಲಿನಲ್ಲಿ ಮೆರಿಟ್ ಪಡೆದಿರುವ ಒಂದು ಲಕ್ಷಕ್ಕೂ ವಿದ್ಯಾರ್ಥಿಗಳು Rank ಲಿಸ್ಟ್‌ನಲ್ಲಿ ಕೆಳಗೆ ಹೋಗುತ್ತಾರೆ. ಯಾವುದೇ ತಪ್ಪು ಮಾಡದ ಅವರಿಗೆ ಅನ್ಯಾಯವಾಗಲಿದ್ದು, ಅವರ ಭವಿಷ್ಯಕ್ಕೆ ಮಾರಕವಾಗಲಿದೆ. ಏಕ ಸದಸ್ಯಪೀಠವು 2021-22ನೇ ಸಾಲಿನ ವಿದ್ಯಾರ್ಥಿಗಳ ವಾದವನ್ನು ಆಲಿಸಿಲ್ಲ.
ಮುಖ್ಯವಾಗಿ 'ಕರ್ನಾಟಕ ಅಭ್ಯರ್ಥಿಗಳ ಆಯ್ಕೆ ನಿಯಮಗಳು-2006' (ಸಿಇಟಿ ಪ್ರವೇಶಾತಿ ನಿಯಮಗಳು-2006ರ ನಿಯಮ 1(1)(ಸಿ) ವಿನ ಧ್ಯೇಯೋದ್ದೇಶವನ್ನೇ ಏಕ ಸದಸ್ಯ ಪೀಠ ಪರಿಗಣಿಸಿಲ್ಲ. ಆದ್ದರಿಂದ ಏಕ ಸದಸ್ಯ ನ್ಯಾಯಪೀಠದ ಸೆ.3ರ ಆದೇಶ ರದ್ದುಪಡಿಸಬೇಕು ಎಂದು ಸರ್ಕಾರ ಮೇಲ್ಮನವಿಯಲ್ಲಿ ಕೋರಿದೆ.
ಆದೇಶವೇನು?: 2020-21ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು 2022-23ನೇ ಸಾಲಿನ ವೃತ್ತಿಪರ ಕೋರ್ಸ್‌ಗಳ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸಲಾಗದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 2022 ಜು.30ರಂದು ಹೊರಡಿಸಿದ್ದ ಟಿಪ್ಪಣಿಯನ್ನು ರದ್ದುಗೊಳಿಸಿದೆ.
2022-23ನೇ ಸಾಲಿನ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಿಇಟಿ ರಾರಯಂಕಿಂಗ್ ಅನ್ನು 'ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿನ ಸರ್ಕಾರಿ ಸೀಟುಗಳ ಪ್ರವೇಶಕ್ಕಾಗಿ ಕರ್ನಾಟಕ ಅಭ್ಯರ್ಥಿಗಳ ಆಯ್ಕೆ ನಿಯಮಗಳು-2006' (ಸಿಇಟಿ ನಿಯಮಗಳು-2006)ರ ನಿಯಮ 3 ಮತ್ತು 4ರ ಅನ್ವಯ 'ಮರು' (ರೀಡು) ಮಾಡಬೇಕು. 2020-21ನೇ ಸಾಲಿನಲ್ಲಿ ಪಿಯುಸಿ ತೇರ್ಗಡೆಯಾದ ವಿದ್ಯಾರ್ಥಿಗಳು ಗಣಿಸಿದ ಶೇ.50 ಅಂಕಗಳು ಮತ್ತು ಸಿಇಟಿಯಲ್ಲಿಪಡೆದ ಶೇ.50 ಅಂಕಗಳನ್ನು ಪರಿಗಣಿಸಿ ಹೊಸ ಶ್ರೇಯಾಂಕ ಪಟ್ಟಿ ಪ್ರಕಟಿಸಬೇಕು ಎಂದು ಸರ್ಕಾರ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ.












Click it and Unblock the Notifications