CET 2024: ಅಭ್ಯರ್ಥಿಗಳಿಗೆ ಮಹತ್ವದ ಸೂಚನೆ ಕೊಟ್ಟ ಕೆಇಎ
ಬೆಂಗಳೂರು, ಮಾರ್ಚ್ 10: ಸಿಇಟಿ 2024ರ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಹತ್ವದ ಸೂಚನೆ ನೀಡಿದೆ. ನೋಂದಣಿ ಮತ್ತು ಅರ್ಜಿ ಶುಲ್ಕ ಸಲ್ಲಿಕೆ ದಿನಾಂಕ ವಿಸ್ತರಣೆ ಮಾಡಿದೆ. ಇನ್ನು ಮುಂದೆ ದಿನಾಂಕ ವಿಸ್ತರಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕರು ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಯುಜಿಸಿಇಟಿ-2024ಕ್ಕೆ ನೋಂದಣಿ ಮಾಡಲು ಕೊನೆಯ ಅವಕಾಶ ಎಂದು ಹೇಳಿದ್ದಾರೆ. ಈಗಾಗಲೇ 2024ರ ಸಿಇಟಿ ಪರೀಕ್ಷೆ ದಿನಾಂಕವನ್ನು ಘೋಷಣೆ ಮಾಡಲಾಗಿದೆ.

ದಿನಾಂಕ ವಿಸ್ತರಣೆ: ಇಂಜಿನಿಯರಿಂಗ್, ಯೋಗ ಮತ್ತು ನ್ಯಾಚುರೋಪತಿ, ಪಶು ವೈದ್ಯಕೀಯ ಮತ್ತು ಪಶುಸಂಗೋಪನೆ, ಕೃಷಿ ವಿಜ್ಞಾನ ಕೋರ್ಸುಗಳು, [ಬಿ.ಎಸ್. (ಆನರ್ಸ್) ಕೃಷಿ, ಬಿ.ಎಸ್. (ಆನರ್ಸ್) (ರೇಷ್ಮೆ ಕೃಷಿ) ಮುಂತಾದ], [ಬಿ.ಎಸ್.ಸಿ (ನರ್ಸಿಂಗ್) ಬಿ.ಫಾರ್ಮ, 2ನೇ ವರ್ಷದ ಬಿ-ಫಾರ್ಮ ಮತ್ತು ಫಾರ್ಮಾ-ಡಿ ಮುಂತಾದ ಕೋರ್ಸುಗಳಿಗೆ ದಿನಾಂಕ 18/04/2024 ಮತ್ತು 19/04/2024 ರಂದು ನಡೆಸಲಾಗುವ ಸಿಇಟಿ-2024ಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಹಲವು ಅಭ್ಯರ್ಥಿಗಳು ಹಾಗು ಪೋಷಕರು ಸಲ್ಲಿಸಿರುವ ಮನವಿಗಳನ್ನು ಪರಿಗಣಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಭ್ಯರ್ಥಿಗಳ ಹಿತದೃಷ್ಟಿಯಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ಹಾಗು ಅಂತಿಮ ಅವಕಾಶವನ್ನು ನೀಡಿದೆ. ಇಲ್ಲಿಯವರೆಗೆ ಅರ್ಜಿ ಸಲ್ಲಿಸದಿರುವ ಅಥವಾ ಅರ್ಜಿ ಪೂರ್ಣಗೊಳಿಸದೇ ಇರುವ ಅಥವಾ ಶುಲ್ಕ ಪಾವತಿಸದೆ ಇರುವ ಅಭ್ಯರ್ಥಿಗಳು ದಿನಾಂಕ 12/03/2024ರ ಬೆಳಗ್ಗೆ 11 ರಿಂದ 15/03/2024ರ ರಾತ್ರಿ 11.59 ರವರೆಗೆ ನೋಂದಣಿ ಮಾಡಿ ಅರ್ಜಿ ಸಲ್ಲಿಸಲು ಹಾಗು 16/03/2024ರ ಸಂಜೆ 5.30 ರವರೆಗೆ ಶುಲ್ಕ ಪಾವತಿಸಲು ದಿನಾಂಕವನ್ನು ವಿಸ್ತರಿಸಲಾಗಿರುತ್ತದೆ ಎಂದು ತಿಳಿಸಿದೆ.
ಸಿಇಟಿ-2024ಕ್ಕೆ ಅರ್ಜಿ ಸಲ್ಲಿಸಲು ಯಾವುದೇ ಸಂದರ್ಭದಲ್ಲಿ ಮತ್ತೆ ದಿನಾಂಕವನ್ನು ವಿಸ್ತರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಈ ಬಾರಿಯ ಸಿಇಟಿ ಪರೀಕ್ಷೆಯ ಪ್ರವೇಶ ಪತ್ರವನ್ನು ಏಪ್ರಿಲ್ 7ರಂದು ಕೆಇಎ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಈಗಾಗಲೇ ತಿಳಿಸಲಾಗಿದೆ.
ಅಭ್ಯರ್ಥಿಗಳೇ ಗಮನಿಸಿ: ವೈದ್ಯಕೀಯ, ದಂತ ವೈದ್ಯಕೀಯ, ಆರ್ಯುವೇದ, ಯುನಾನಿ, ಹೋಮಿಯೋಪತಿ, ಆರ್ಕಿಟೆಕ್ಚರ್, ಬಿಪಿಟಿ, ಬಿಪಿಒ, ಬಿಎಸ್ಸಿ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸುಗಳ ಇತ್ಯಾದಿ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಅಭ್ಯರ್ಥಿಗಳು ಸಿಇಟಿ-2024ಕ್ಕೆ ಆನ್‌ಲೈನ್ ಮೂಲಕ ನೋಂದಾಯಿಸಿಕೊಂಡು, ಆನ್‌ಲೈನ್ ಅರ್ಜಿ ಸಲ್ಲಿಸಿ, ಅರ್ಜಿ ಶುಲ್ಕ ಪಾವತಿಸುವುದು ಕಡ್ಡಾಯವಾಗಿರುತ್ತದೆ. ನಂತರದ ದಿನಗಳಲ್ಲಿ ಅರ್ಜಿ ಸಲ್ಲಿಸಲು ಪೋರ್ಟಲ್ ತೆರೆಯಲಾಗುವುದಿಲ್ಲ ಎಂಬುದನ್ನು ಗಮನಿಸಿ ಎಂದು ತಿಳಿಸಲಾಗಿದೆ.
ವೃತ್ತಿಪರ ಕೋರ್ಸುಗಳಿಗೆ ನೋಂದಣಿ, ಆನ್‌ಲೈನ್ ಅರ್ಜಿ ಸಲ್ಲಿಸುವುದು ಮತ್ತು ಅರ್ಹತಾ ಷರತ್ತುಗಳ ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಅರ್ಜಿ ಸಲ್ಲಿಕೆ ಹಾಗು ಪರಿಶೀಲನೆಗೆ ಮಾಹಿತಿ ಪುಸ್ತಕ ಮತ್ತು ದಿನಾಂಕ 09/01/2024ರ ಅಧಿಸೂಚನೆಯನ್ನು ಓದಿಕೊಳ್ಳಲು ಸೂಚಿಸಿದೆ.
ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಗಿಯುತ್ತಿದ್ದಂತೆಯೇ ಸಿಇಟಿ ಪರೀಕ್ಷೆಗಳು ಆರಂಭವಾಗುತ್ತವೆ. ಕೆಇಎ ಸಿಇಟಿ 2024ರ ಪರೀಕ್ಷೆಯನ್ನು ಏಪ್ರಿಲ್ 20 ಮತ್ತು 21ರಂದು ನಿಗದಿ ಮಾಡಿತ್ತು. ಬಳಿಕ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ. ಈಗ ಪರೀಕ್ಷೆಗಳು ಏಪ್ರಿಲ್ 18, 19 ಮತ್ತು 20ರಂದು ನಡೆಯಲಿದೆ.
ವೇಳಾಪಟ್ಟಿಯ ಅನ್ವಯ ಏಪ್ರಿಲ್ 18ರಂದು ಬೆಳಗ್ಗೆ 10.30 ರಿಂದ ಜೀವಶಾಸ್ತ್ರ, ಮಧ್ಯಾಹ್ನ 2.30ರಿಂದ ಗಣಿತ, ಏಪ್ರಿಲ್ 19ರಂದು ಬೆಳಗ್ಗೆ 10.30ರಿಂದ ಭೌತಶಾಸ್ತ್ರ ಮತ್ತು ಮಧ್ಯಾಹ್ನ ರಸಾಯನ ಶಾಸ್ತ್ರ ಪರೀಕ್ಷೆಗಳನ್ನು ತಲಾ 60 ಅಂಕಗಳಿಗೆ ನಡೆಸಲಾಗುತ್ತದೆ ಎಂದು ತಿಳಿಸಲಾಗಿದೆ.
ಉಳಿದಂತೆ ಹೊರನಾಡು ಮತ್ತು ಗಡಿನಾಡು ಕನ್ನಡಿಗ ವಿದ್ಯಾರ್ಥಿಗಳಿಗೆ ಏಪ್ರಿಲ್ 20ರಂದು ಬೆಂಗಳೂರು, ಬೀದರ್, ಬೆಳಗಾವಿ, ಬಳ್ಳಾರಿ, ವಿಜಯಪುರ ಮತ್ತು ಮಂಗಳೂರು ಕೇಂದ್ರಗಳಲ್ಲಿ ಕನ್ನಡ ಭಾಷಾ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.












Click it and Unblock the Notifications