New Railway Line: ರೂ.3340 ಕೋಟಿ ವೆಚ್ಚದ ಬಳ್ಳಾರಿ-ಚಿಕ್ಕಜಾಜೂರು ರೈಲ್ವೆ ದ್ವಿಪಥ ಯೋಜನೆ..
ಬೆಂಗಳೂರು, ಜೂನ್ 12: ನೆರೆಯ ತೆಲಂಗಾಣ ರಾಜಧಾನಿ ಹೈದರಾಬಾದ್ ನಿಂದ ಕರ್ನಾಟಕದ ಕರಾವಳಿ ನಗರ ಮಂಗಳೂರಿಗೆ ಸಂಪರ್ಕ ಇನ್ನು ಮತ್ತಷ್ಟು ಸುಲಭವಾಗಲಿದೆ. ಏಕೆಂದರೆ ಕೇಂದ್ರ ಸಚಿವ ಸಂಪುಟ ಸಭೆಯು ಕರ್ನಾಟಕದ ಮತ್ತೊಂದು ರೈಲ್ವೆ ಮಾರ್ಗದ ದ್ವಿಪಥೀಕರಣಕ್ಕೆ ಅನುಮೋದನೆ ನೀಡಿದೆ. ಒಟ್ಟು 185 ಕಿಲೋ ಮೀಟರ್ ಉದ್ದದ ರೈಲು ಮಾರ್ಗದಲ್ಲಿ ಕಾಮಗಾರಿಗೆ ಬಹುಕೋಟಿ ಅನುದಾನ ಸಹಿತ ಗ್ರೀನ್ ಸಿಗ್ನಲ್ ನೀಡಿದೆ.
ಕೇಂದ್ರ ಸಚಿವ ಸಂಪುಟದಲ್ಲಿ ಬಳ್ಳಾರಿ-ಚಿಕ್ಕಜಾಜೂರು ನಡುವಿನ ರೈಲ್ವೆ ಮಾರ್ಗದಲ್ಲಿದ್ದ ಒಂದು ಮಾರ್ಗವನ್ನು ದ್ವಿಪಥ ಮಾರ್ಗವಾಗಿ (Railway Line Doubling) ಅಭಿವೃದ್ಧಿಗೊಳಿಸಲು ಅನುಮತಿ ನೀಡಲಾಗಿದೆ. ಈ ಯೋಜನೆಗೆ 3,340 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿ ಅನುಮೋದನೆ ನೀಡಿದೆ ಎಂದು ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಅವರು ಮಾಹಿತಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ರಾಜ್ಯದ ಜನರ ಪರ ಅಭಿನಂದನೆ ತಿಳಿಸಿದ್ದಾರೆ.

ಈ ರೈಲ್ವೆ ಮಾರ್ಗದ ದ್ವಿಪಥೀಕರಣ ದಿಂದ ಹೊಸಪೇಟೆ - ಬಳ್ಳಾರಿ ಕೈಗಾರಿಕಾ ಪ್ರದೇಶ, ಬಳ್ಳಾರಿ - ಚಿತ್ರದುರ್ಗ ಗಣಿಗಾರಿಕೆ ಪ್ರದೇಶ ಹಾಗೂ ಮಂಗಳೂರು ಬಂದರು ಮತ್ತು ಹೈದರಾಬಾದ್ ಪ್ರದೇಶಗಳ ನಡುವೆ ನೇರ ಸಂಪರ್ಕ ಮತ್ತಷ್ಟು ಗಟ್ಟಿಯಾಗಲಿದೆ. ಪ್ರವಾಸೋದ್ಯಮ, ಸರಕು ಸಾಗಣೆ ಸೇರಿದಂತೆ ಸಾರಿಗೆ ಸಂಪರ್ಕಕ್ಕೆ ಅನುಕೂಲ ಕಲ್ಪಿಸಲಿದೆ ಎಂದು ವಿ.ಸೋಮಣ್ಣ ಹರ್ಷ ವ್ಯಕ್ತಪಡಿಸಿದ್ದಾರೆ.
ಕೈಗಾರಿಕೆ, ಸಂಚಾರಕ್ಕೆ & 28 ಲಕ್ಷ ಮಂದಿಗೆ ಅನುಕೂಲ
ಚಿಕ್ಕಜಾಜೂರಿನಿಂದ ಈ ರೈಲ್ವೆ ಮಾರ್ಗವು ಚಿತ್ರದುರ್ಗ, ಬಳ್ಳಾರಿ, ಹೊಸಪೇಟೆ ಮತ್ತು ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆ ಮಾರ್ಗವಾಗಿ ಸಾಗುತ್ತದೆ. ಈ ಮಾರ್ಗವನ್ನು ದ್ವಿಪಥ ಮಾಡುವುದರಿಂದ ಸಂಚಾರ ಸಮಯ ತಗ್ಗುತ್ತದೆ. ಪ್ರಯಾಣಿಕರಿಗೆ, ವ್ಯಾಪಾರ ವಹೀವಾಟು, ಸರಕು ಸಾಗಾಣೆಗೆ ಸಮಯ ಕಡಿಮೆ ಹಿಡಿಯುತ್ತದೆ. ಈ ಮಾರ್ಗ ಮಧ್ಯೆ ಬರುವ ಜಿಲ್ಲೆಗಳಲ್ಲಿ ಕೈಗಾರಿಕೆಗೆ, ಸಾರ್ವಜನಿಕ ಸಂಚಾರಕ್ಕೆ ಹಾದಿ ಮತ್ತಷ್ಟು ಸುಗಮವಾಗುತ್ತದೆ. ಈ 185 ಕಿಲೋ ಮೀಟರ್ ಮಾರ್ಗದ ರೈಲ್ವೆ ಡಬ್ಲಿಂಗ್ ಕಾರ್ಯದಿಂದಾಗಿ ಈ ಭಾಗದ ಸುಮಾರು 28 ಲಕ್ಷ ಮಂದಿಗೆ ಸಾಕಷ್ಟು ಸಹಾಯವಾಗಲಿದೆ ಎಂದು ಕೇಂದ್ರ ಸರ್ಕಾರ ವಿವರಿಸಿದೆ.
ಪ್ರಧಾನಿ ಮೋದಿಯವರ ಕನಸಿನ ಆತ್ಮ ನಿರ್ಭರ ಭಾರತ ನಿರ್ಮಾಣದ ಕಡೆಗೆ ಒಂದು ಮಹತ್ವ ಹೆಜ್ಜೆ ಇಡಲು ಈ ಯೋಜನೆ ಸಹಾಯ ಮಾಡುತ್ತದೆ. ಜನರ ಓಡಾಟ ಹೆಚ್ಚಿಸುತ್ತದೆ. ಸಮಯ ಉಳಿತಾಯ ಜೊತೆಗೆ ಈ ಭಾಗದ ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಸಹಾಯವಾಗುತ್ತದೆ ಎಂದು ಕೇಂದ್ರ ತಿಳಿಸಿದೆ.
ಇಂದಿನ ಸಚಿವ ಸಂಪುಟದಲ್ಲಿ ಬಳ್ಳಾರಿ–ಚಿಕ್ಕಜಾಜೂರು ನಡುವಿನ 185 ಕಿ.ಮೀ ಉದ್ದದ ರೈಲ್ವೆ ಮಾರ್ಗದ ದ್ವಿಪಥೀಕರಣಕ್ಕೆ ಅನುಮತಿ ನೀಡಿ, 3,340 ಕೋಟಿ ರೂ.ಗಳ ಅನುದಾನ ಮಂಜೂರು ಮಾಡಿರುವ ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಹಾಗೂ ಮಾನ್ಯ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
— V. Somanna (@VSOMANNA_BJP) June 11, 2025
ಈ ರೈಲ್ವೆ… pic.twitter.com/PAipCMSpzm
ಧಾರ್ಮಿಕ ಸ್ಥಳ, ಪ್ರವಾಸೋದ್ಯಮಕ್ಕೆ ಉತ್ತೇಜನ
ಬಳ್ಳಾರಿ, ಹಂಪಿ, ಜೋಗ, ಅಂಜನಾದ್ರಿ ಬೆಟ್ಟ, ಹೈದರಾಬಾದ್ ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳಿಗೆ ಹಾಗೂ ಪ್ರವಾಸಿ ಸ್ಥಳಗಳಿಗೆ ಬರುವವ ಪ್ರವಾಸಿಗರಿಗೆ ಈ ಯೋಜನೆಯಿಂದ ಉತ್ತೇಜನ ಸಿಕ್ಕಂತಾಗುತ್ತದೆ. ಸಾರಿಗೆ ಸಂಚಾರ ಸುಲಭವಾಗಿದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡಲು ಸಾಧ್ಯವಾಗುತ್ತದೆ. ಇದರಿಂದ ಆಯಾ ಪ್ರದೇಶಗಳ ಅಭಿವೃದ್ಧಿಗೆ ಸಹಾಯವಾಗುತ್ತದೆ.
ಜೋಡಿ ಹಳಿ ನಿರ್ಮಾಣದಿಂದ 470ಕ್ಕೂ ಹಳ್ಳಿಗಳ ಲಕ್ಷಾಂತರ ಜನರಿಗೆ ಸಹಾಯವಾಗುತ್ತದೆ. ಮಂಗಳೂರು ಬಂದರುವಿನಿಂದ ಬೇರೆ ಬೇರೆಡೆಗೆ ಕಬ್ಬಿಣ, ಅದಿರು ಸೇರಿದಂತೆ ಕೈಗಾರಿಕೆ ಉತ್ಪಾದನೆಗಳನ್ನು ಸಾಗಿಸಲು ಹೆಚ್ಚಿನ ಲಾಭವಾಗಲಿದೆ.












Click it and Unblock the Notifications