ಸಿಡಿ ಗದ್ದಲಕ್ಕೆ ಮಂಗಳವಾರದ ವಿಧಾನಸಭೆ ಕಲಾಪ ಬಲಿ
ಬೆಂಗಳೂರು, ಮಾರ್ಚ್ 23: ರಮೇಶ್ ಜಾರಕಿಹೊಳಿ ಸಿಡಿ ವಿಚಾರದಲ್ಲಿ ಕಾಂಗ್ರೆಸ್ ಸದಸ್ಯರು ಬಿಗಿಪಟ್ಟನ್ನು ಮುಂದುವರೆಸಿದ್ದಾರೆ. ವಿಧಾನಸಭೆಯಲ್ಲಿ ಗದ್ದಲ ಮುಂದುವರೆದ ಹಿನ್ನಲೆಯಲ್ಲಿ ಕಲಾಪವನ್ನು ಬುಧವಾರ ಬೆಳಗ್ಗೆ 11ಕ್ಕೆ ಮುಂದೂಡಲಾಗಿದೆ.
ಮಂಗಳವಾರ ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ಆರಂಭಿಸಿದರು. ಕೈಯಲ್ಲಿ ಸಿಡಿ ಹಿಡಿದು, ಸಿಡಿ ಸರ್ಕಾರ, ಸಿಡಿ ಸಿಡಿ ಎಂದು ಘೋಷಣೆಗಳನ್ನು ಕೂಗುತ್ತಾ ಸದಸನದ ಬಾವಿಗೆ ಬಂದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆಯನ್ನು ನಡೆಸಿದರು. ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರರಕರಣ ದಾಖಲು ಮಾಡಬೇಕು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ಸ್ವತಂತ್ರ ತನಿಖೆ ನಡೆಸಬೇಕು. ಕೋರ್ಟ್ ಮೊರೆ ಹೋಗಿರುವ 6 ಸಚಿವರು ರಾಜೀನಾಮೆ ನೀಡಬೇಕು ಎಂದು ಬೇಡಿಕೆ ಇಟ್ಟರು.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು. ಸ್ಪೀಕರ್ ಕೊಠಡಿಯಲ್ಲಿ ಕಾಂಗ್ರೆಸ್ ನಾಯಕರ ಜೊತೆ ಸಂಧಾನ ಸಭೆ ನಡೆಯಿತು. ಆದರೆ, ಸದಸ್ಯರು ತಮ್ಮ ಪಟ್ಟು ಸಡಿಲಿಸಲಿಲ್ಲ.
ಪುನಃ ವಿಧಾನಸಭೆ ಕಲಾಪ ಆರಂಭವಾದಾಗ ಸ್ಪೀಕರ್ ಪ್ರಶ್ನೋತ್ತರ ಕಲಾಪವನ್ನು ನಡೆಸಲು ಬಿಡಿ ಎಂದು ಕಾಂಗ್ರೆಸ್ ಸದಸ್ಯರಿಗೆ ಮನವಿ ಮಾಡಿದರು. ಆದರೆ, ಸದನದ ಬಾವಿಯಲ್ಲಿ ಸಿಡಿ ಸಿಡಿ ಎಂದು ಕಾಂಗ್ರೆಸ್ ಸದಸ್ಯರಿಂದ ಗದ್ದಲ ಮುಂದುವರೆಯಿತು.
ಸ್ಪೀಕರ್ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು. ಸದನ ಮತ್ತೆ ಸಮಾವೇಶಗೊಂಡರೂ ಕಾಂಗ್ರೆಸ್ ಸದಸ್ಯರು ಹೋರಾಟವನ್ನು ಮುಂದುವರೆಸಿದರು. ಗದ್ದಲದ ನಡುವೆಯೇ ಕೆಲವು ವಿಧೇಯಕಗಳನ್ನು ಮಂಡನೆ ಮಾಡಿ, ಅನುಮೋದನೆಯನ್ನು ಪಡೆಯಲಾಯಿತು.
ಕಾಂಗ್ರೆಸ್ ಸದಸ್ಯರ ಪ್ರತಿಭಟನೆ, ಗದ್ದಲದ ಕಾರಣ ಚರ್ಚೆಗೆ ಅವಕಾಶ ಸಿಗಲಿಲ್ಲ. ಆಗ ಜೆಡಿಎಸ್ ನಾಯಕ ಎಚ್. ಡಿ. ರೇವಣ್ಣ ಚರ್ಚೆಗೆ ಅವಕಾಶ ಸಿಗುತ್ತಿಲ್ಲ ಎಂದು ಸಭಾತ್ಯಾಗ ಮಾಡಿದರು. ಉಳಿದ ಶಾಸಕರು ಅವರನ್ನು ಹಿಂಬಾಲಿಸಿದರು.
ಸರ್ಕಾರದ ವಿರುದ್ಧ ನಿಮ್ಮ ಹೋರಾಟವನ್ನು ಸದನದ ಹೊರಗೆ ಮಾಡಿ, ಇಲ್ಲಿ ಚರ್ಚೆ ನಡೆಯಲು ಅವಕಾಶ ಕೊಡಿ ಎಂದು ಸ್ಪೀಕರ್ ಮತ್ತೊಮ್ಮೆ ಮನವಿ ಮಾಡಿದರು. ಆದರೆ, ಕಾಂಗ್ರೆಸ್ ಸದಸ್ಯರು ಒಪ್ಪಲಿಲ್ಲ. ಇದರಿಂದಾಗಿ ಬುಧವಾರ ಬೆಳಗ್ಗೆ 11 ಗಂಟೆಗೆ ಕಲಾಪವನ್ನು ಮುಂದೂಡಲಾಯಿತು.












Click it and Unblock the Notifications