ಜಾತಿ ಗಣತಿ ವರದಿ; ಪ್ರಮಾಣ ಪತ್ರ ಸಲ್ಲಿಸಿ ಎಂದ ಹೈಕೋರ್ಟ್
ಬೆಂಗಳೂರು, ಮಾರ್ಚ್ 02: ರಾಜ್ಯಾದ್ಯಂತ ಜನಗಣತಿ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿರುವುದರ ಮಧ್ಯೆಯೇ ಹೈಕೋರ್ಟ್ ಕರ್ನಾಟಕ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ 2015ರಲ್ಲಿ ನಡೆಸಿದ ಜಾತಿ ಗಣತಿ ವರದಿ ಸ್ವೀಕರಿಸಿರುವ ಕುರಿತು ಪ್ರಮಾಣ ಪತ್ರ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ಹಾಗಾಗಿ ಇದೀಗ ಸರ್ಕಾರ ಅಧಿಕೃತವಾಗಿ ವರದಿ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಲೇಬೇಕಾಗಿದೆ. ಈ ಮಧ್ಯೆ, ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ಮಾಡುವ ಅಧಿಕಾರವೇ ಇಲ್ಲ ಎಂದು ಅರ್ಜಿದಾರರ ಪರ ವಕೀಲರು ತೀವ್ರ ಆಕ್ಷೇಪ ಎತ್ತಿದ್ದಾರೆ.
ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವಂತೆ (ಜಾತಿ ಗಣತಿ) ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚಿಸಿ 2014ರ ಜ.23ರಂದು ಸರ್ಕಾರ ಹೊರಡಿಸಿದ ಆದೇಶ ರದ್ದು ಕೋರಿ ಬೀದರ್‌ನ ಶಿವರಾಜ್ ಕಣಶೆಟ್ಟಿ ಮತ್ತಿತರರು ಸಲ್ಲಿಸಿರುವ ಅರ್ಜಿ ವಿಚಾರಣೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಮಾರ್ಚ್ 5ಕ್ಕೆ ಮುಂದೂಡಿದೆ.

ಕೇಂದ್ರಕ್ಕೆ ಮಾತ್ರ ಅಧಿಕಾರ: ಅರ್ಜಿದಾರರ ವಕೀಲರು, 2015ರ ಮೇ 5ರಂದು ಜಾತಿ ಗಣತಿ ಮುಗಿದಿದೆ ಎಂದು ಮತ್ತೋರ್ವ ಅರ್ಜಿದಾರ ಡಾ. ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ. ಈ ವರದಿಯು 9 ವರ್ಷಗಳಿಂದ ಹಾಗೇ ಇತ್ತು. ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರು ಗುರುವಾರ ಸಂಜೆ ವರದಿ ಸಲ್ಲಿಸಿದ್ದಾರೆ. ಜಾತಿ ಗಣತಿ ನಡೆಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ ಎಂಬ ವಿಚಾರ ಸಹ ಅರ್ಜಿಯಲ್ಲಿ ಒಳಗೊಂಡಿದೆ ಎಂದು ವಿವರಿಸಿದರು.
ಅಲ್ಲದೆ, ಸಂವಿಧಾನದ ಪರಿಚ್ಛೇಧ 245 ಮತ್ತು 246ರ ಪ್ರಕಾರ ಜಾತಿ ಸಮೀಕ್ಷೆ ನಡೆಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ. ರಾಜ್ಯ ಸರ್ಕಾರಕ್ಕೆ ಆ ಅಧಿಕಾರ ಇಲ್ಲ. ಕೇಂದ್ರ ಸರ್ಕಾರ ಸಹ ಆಕ್ಷೇಪಣೆ ಸಲ್ಲಿಸಿ ನಮ್ಮ ಅರ್ಜಿಯನ್ನು ಬೆಂಬಲಿಸಿದೆ ಹಾಗೂ ನಮ್ಮ ಅರ್ಜಿಯನ್ನು ಪುರಸ್ಕರಿಸಲು ನ್ಯಾಯಾಲಯವನ್ನು ಕೋರಿದೆ.
ಜಾತಿ ಗಣತಿ ವರದಿ ಸಲ್ಲಿಕೆ ಅಥವಾ ಅದರ ಸ್ವೀಕಾರದ ಸಂದರ್ಭದ ಬಗ್ಗೆ ನಾವು ಆಕ್ಷೇಪಿಸುವುದಿಲ್ಲ. ಜಾತಿ ಸಮೀಕ್ಷೆ ನಡೆಸುವ ಸಾಂವಿಧಾನಿಕ ಮತ್ತು ಕಾನೂನಾತ್ಮಕ ಅಧಿಕಾರದ ವಿಚಾರಕ್ಕಷ್ಟೇ ನಮ್ಮ ವಾದ ಸೀಮಿತವಾಗಿದೆ. ಆದ್ದರಿಂದ ಆಯೋಗದ ವರದಿ ಆಧರಿಸಿ ಮುಂದೆ ಯಾವುದೇ ಕ್ರಮ ಕೈಗೊಳ್ಳದಂತೆ ಸರ್ಕಾರಕ್ಕೆ ನಿರ್ದೇಶಿಸಿ ಮಧ್ಯಂತರ ಆದೇಶ ಮಾಡಬೇಕು ಎಂದು ಕೋರಿದರು.
ಮಾಹಿತಿ ಇಲ್ಲವೆಂದ ಸರ್ಕಾರಿ ವಕೀಲರು: ರಾಜ್ಯ ಸರ್ಕಾರ ಪರ ವಕೀಲರು, ಸರ್ಕಾರಕ್ಕೆ ಗುರುವಾರ ಜಾತಿ ಗಣತಿ ಸಲ್ಲಿಸಲಾಗಿದೆ ಎಂಬ ವಿಚಾರ ನಮಗೆ ತಿಳಿದಿಲ್ಲ. ಈ ಮಾಹಿತಿ ಅರ್ಜಿದಾರರಿಗೆ ಎಲ್ಲಿಂದ ಬಂದಿದೆಯೋ ಗೊತ್ತಿಲ್ಲ. ಇದೊಂದು ಸೂಕ್ಷ್ಮ ವಿಚಾರವಾಗಿದೆ. ನಮಗೆ ಸಮಯ ನೀಡಿದರೆ, ಅಡ್ವೊಕೇಟ್ ಜನರಲ್ ಅವರನ್ನು ಕರೆತರಲಾಗುವುದು. ಎಲ್ಲಾ ವಿಚಾರವನ್ನು ನ್ಯಾಯಪೀಠಕ್ಕೆ ತಿಳಿಸಲಾಗುವುದು. ಆದರೆ, ವರದಿಗೆ ಸಂಬಂಧಿಸಿದಂತೆ ಮುಂದುವರಿಯುವುದಿಲ್ಲ ಎಂಬುದಾಗಿ ಸರ್ಕಾರದ ಪರವಾಗಿ ಹೇಳಿಕೆ ನೀಡುವಂತೆ ಅರ್ಜಿದಾರರ ಪರ ವಕೀಲರು ಮೌಖಿಕವಾಗಿ ಕೇಳುವುದು ಸೂಕ್ತವಲ್ಲ ಎಂದು ಆಕ್ಷೇಪಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲರು, ಸರ್ಕಾರವು ಜಾತಿ ಸಮೀಕ್ಷಾ ವರದಿ ಸ್ವೀಕರಿಸಿರುವ ಬಗ್ಗೆ ಎಲ್ಲಾ ಸುದ್ದಿ ಮಾಧ್ಯಮ ಮತ್ತು ಪತ್ರಿಕೆಗಳು ವರದಿ ಮಾಡಿವೆ ಎಂದರು. ಅಂತಿಮವಾಗಿ ಅರ್ಜಿದಾರರ ಪರ ವಕೀಲರ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಆಯೋಗದ ಜಾತಿ ಗಣತಿ ವರದಿಯನ್ನು ಸರ್ಕಾರ ಸ್ವೀಕರಿಸಿರುವ ಬಗ್ಗೆ ಸತ್ಯ ಸಂಗತಿಗಳನ್ನು ತಿಳಿಸಿ ಪ್ರಮಾಣ ಪತ್ರ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿತು.












Click it and Unblock the Notifications