Cabinet reshuffle: ದೆಹಲಿಯಲ್ಲಿ ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ದರಾಮಯ್ಯ ಹೇಳಿದ್ದೇನು?
ರಾಜ್ಯ ಕಾಂಗ್ರೆಸ್‌ನಲ್ಲಿ ನವೆಂಬರ್ ಕ್ರಾಂತಿ, ಸಿಎಂ ಬದಲಾವಣೆ ಚರ್ಚೆಗಳು ಜೋರಾಗಿರುವ ಹೊತ್ತಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ದಿಢೀರ್ ದೆಹಲಿಗೆ ಹಾರಿದ್ದಾರೆ. ಬಿಹಾರ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಮಹತ್ವದ ಬದಲಾವಣೆ ಆಗಲಿವೆ ಎಂದೂ ಹೇಳಲಾಗಿತ್ತು. ನಿನ್ನೆಯಷ್ಟೇ ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಹೊರಬಿದ್ದಿದೆ. ಇದರ ನಡುವೆ ಸಿದ್ದರಾಮಯ್ಯ ಅವರು ದೆಹಲಿ ತಲುಪಿರುವುದು ಮಹತ್ವ ಪಡೆದುಕೊಂಡಿದೆ. ದೆಹಲಿಯಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಮುಖ್ಯವಾಗಿ ಇದೇ ತಿಂಗಳು ಸಚಿವ ಸಂಪುಟ ಪುನರ್‌ರಚನೆಯಾಗಲಿದೆ ಎಂದು ಹೇಳಲಾಗುತ್ತಿದೆ. ಇದೇ ವಿಚಾರವಾಗಿ ಹೈಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸಲು ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಹೌದು, ನಾನು ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದು ನಿಜ. ನಾವು ಬಿಹಾರ ಚುನಾವಣೆಯ ಬಗ್ಗೆ ಮಾತ್ರ ಚರ್ಚಿಸಿದ್ದೇವೆ ಎಂದಿದ್ದಾರೆ.

ರಾಹುಲ್ ಗಾಂಧಿ ಅವರು ನಮ್ಮ ನಾಯಕ. ಆದ್ದರಿಂದ ಬಿಹಾರ ಚುನಾವಣೆಯಲ್ಲಿ ಹಿನ್ನಡೆಯಾದ ಕಾರಣ ನಾವು ಅವರನ್ನು ಪ್ರೋತ್ಸಾಹಿಸಿದೆವು. ಅವರು ಅದರ ಬಗ್ಗೆ ಚಿಂತಿಸುವುದಿಲ್ಲ ಎಂದು ಹೇಳಿದರು. ನಾವು ಅವರಿಗೆ ಉತ್ಸಾಹ ಕಳೆದುಕೊಳ್ಳಬೇಡಿ ಎಂದು ಧೈರ್ಯ ತುಂಬಿದ್ದೇವೆ. ನನಗೆ ಅಪಾಯಿಂಟ್ಮೆಂಟ್ ಸಿಕ್ಕರೆ, ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ನಾನು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಬಿಹಾರ ಚುನಾವಣೆಯ ಬಗ್ಗೆ ಮಾತ್ರ ಚರ್ಚಿಸಿದ್ದೇವೆ. ಇನ್ನು ಸಚಿವ ಸಂಪುಟ ಪುನರ್ ರಚನೆಯ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ನಮ್ಮ ಯಾವುದೇ ಸಚಿವರು ಕೂಡ ಸಂಪುಟ ಪುನರ್‌ರಚನೆ ಬಗ್ಗೆ ಚರ್ಚಿಸಲಿಲ್ಲ. ನಾನು ಇಂದು ಪ್ರಧಾನಿಯನ್ನು ಭೇಟಿ ಮಾಡಬೇಕಿತ್ತು. ಆದರೆ ಬಿಹಾರ ಚುನಾವಣೆಯ ಕಾರಣ, ನಾನು ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ನಾನು ಸೋಮವಾರ ಅವರನ್ನು ಭೇಟಿ ಮಾಡುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಡಿಕೆ.ಶಿವಕುಮಾರ್ ಏನಂದ್ರು?
ದೆಹಲಿಯಲ್ಲೇ ಇರುವ ಡಿ.ಕೆ.ಶಿವಕುಮಾರ್ ಅವರು ಅಚ್ಚರಿ ಹೇಳಿಕೆ ನೀಡಿದ್ದಾರೆ. "ರಾಹುಲ್ ಗಾಂಧಿಯವರೊಂದಿಗಿನ ಸಿಎಂ ಸಿದ್ದರಾಮಯ್ಯ ಅವರ ಭೇಟಿಯ ಬಗ್ಗೆ ನನಗೆ ತಿಳಿದಿಲ್ಲ. ಸಂಪುಟ ಪುನರ್‌ರಚನೆ ಚರ್ಚೆಯ ಬಗ್ಗೆ ನನಗೆ ತಿಳಿದಿಲ್ಲ. ಭಾನುವಾರ ನಾನು ರಾಹುಲ್ ಗಾಂಧಿ ಅವರನ್ನು ಭೇಟಿಯಾಗುತ್ತೇನೋ? ಇಲ್ಲವೋ? ಎಂದು ನನಗೆ ತಿಳಿದಿಲ್ಲ. ನಾಯಕತ್ವ ಬದಲಾವಣೆಯ ವಿಷಯಗಳ ಪುನರ್‌ರಚನೆ ಬಗ್ಗೆ ನೀವು ಏನಾದರೂ ಕೇಳಲು ಬಯಸಿದರೆ, ಸಿಎಂ ಅವರ ಜೊತೆ ಮಾತನಾಡಿ. ಪಕ್ಷ ಹೇಳುವುದನ್ನು ನಾವು ಪಾಲಿಸಬೇಕು. ಮುಖ್ಯಮಂತ್ರಿಗಳಿಗೆ ಗೃಹ ಸಚಿವ ಅಥವಾ ಪ್ರಧಾನಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುವ ಎಲ್ಲ ಹಕ್ಕಿದೆ. ಅದರಲ್ಲಿ ಏನು ತಪ್ಪಿದೆ? ಎಂದಿದ್ದಾರೆ.












Click it and Unblock the Notifications