ಡಿ.22ಕ್ಕೆ ಸಂಪುಟ ವಿಸ್ತರಣೆ ಅಲ್ಲ, ಪುನಾರಚನೆ: ಸಚಿವರಿಗೆ ಆತಂಕ
Recommended Video

ಬೆಳಗಾವಿ, ಡಿಸೆಂಬರ್ 18: ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಹೇಳಿರುವ ಮಾತು ಕಾಂಗ್ರೆಸ್ ಸಚಿವರು ಕೆಲವರಿಗೆ ನಡುಕ ಹುಟ್ಟಿಸಿದೆ.
ಡಿಸೆಂಬರ್ 22 ರಂದು ನಡೆಯುವುದು ಸಂಪುಟ ವಿಸ್ತರಣೆ ಅಲ್ಲ ಸಂಪುಟ ಪುನಾರಚನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅವರ ಮಾತಿನ ಒಳ ಅರ್ಥ ಕೆಲವು ಸಚಿವರು ತಮ್ಮ ಸ್ಥಾನ ಕಳೆದುಕೊಂಡು ಹೊಸಬರಿಗೆ ಸ್ಥಳ ಬಿಟ್ಟುಕೊಡಲಿದ್ದಾರೆ.
ಸಚಿವ ಸ್ಥಾನ ಕಳೆದುಕೊಳ್ಳುವ ಪಟ್ಟಿಯಲ್ಲಿ ಮೊದಲ ಹೆಸರು ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾಗಿದ್ದು, ಅವರ ಅಶಿಸ್ತನ್ನು ಮುಂದೆ ಇಟ್ಟುಕೊಂಡು ಕೆಪಿಸಿಸಿ ಈ ನಿರ್ಣಯ ಕೈಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ರಾಹುಲ್ ಗಾಂಧಿ ಅವರೇ ಈ ನಿಯಮ ಪಾಲಿಸುವಂತೆ ಕೆಪಿಸಿಸಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಉತ್ತಮ ಪ್ರದರ್ಶನ ತೋರದ ಸಚಿವರನ್ನು ಬದಲಾಯಿಸಿ ಹೊಸಬರಿಗೆ ಸ್ಥಾನ ನೀಡುವಂತೆ ಅವರೇ ಹೇಳಿದ್ದಾರೆ.

ಪರಮೇಶ್ವರ್ ಸಹ ಒಂದು ಖಾತೆ ಬಿಡಬೇಕು?
ಎರಡೆರಡು ಖಾತೆಯನ್ನು ಹೊಂದಿರುವ ಕಾಂಗ್ರೆಸ್ ಸಚಿವರಿಂದ ಒಂದು ಖಾತೆಯನ್ನು ವಾಪಸ್ ಪಡೆದು ಹೊಸಬರಿಗೆ ಅವಕಾಶ ನೀಡಲಾಗುತ್ತದೆ ಎನ್ನಲಾಗಿದೆ. ಉಪಮುಖ್ಯಮಂತ್ರಿಗಳು ಸಹ ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನವನ್ನು ಬಿಟ್ಟುಕೊಡಬೇಕಾಗಿ ಬಂದಿದೆ ಎಂದು ಮೂಲಗಳು ಹೇಳುತ್ತಿವೆ.

ಶಿವಾನಂದ ಪಾಟೀಲ್ ಸ್ಥಾನಕ್ಕೆ ಕುತ್ತು ಸಾಧ್ಯತೆ?
ಕಾಂಗ್ರೆಸ್‌ನ ಸಚಿವ ಶಿವಾನಂದ ಪಾಟೀಲ್ ಅವರು ತಮ್ಮ ಆರೋಗ್ಯ ಮಂತ್ರಿ ಸಹ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅವರ ಪ್ರದರ್ಶನ ಕೆಪಿಸಿಸಿಗೆ ತೃಪ್ತಿ ತಂದಿಲ್ಲವಾದ ಕಾರಣ ಅವರನ್ನು ಬದಲಾಯಿಸುವ ನಿರ್ಣಯ ಕೈಗೊಳ್ಳುವ ಸಾಧ್ಯತೆ ಸಹ ಇದೆ.

ಸಂಪುಟಕ್ಕೆ ಮತ್ತೊಬ್ಬ ಮಹಿಳೆ
ಸಂಪುಟಕ್ಕೆ ಮಹಿಳೆ ಒಬ್ಬರನ್ನು ಸೇರಿಸಿಕೊಳ್ಳಬೇಕು ಎಂಬ ಉದ್ದೇಶ ಕೆಪಿಸಿಸಿಗೆ ಇದ್ದು, ಜಯಮಾಲಾ ಅವರ ಬಳಿ ಇರುವ ಎರಡು ಖಾತೆಗಳಲ್ಲಿ ಒಂದನ್ನು ಹಿಂಪಡೆಯಲಾಗುತ್ತದೆ. ಅರಣ್ಯ ಸಚಿವ ಆರ್.ಶಂಕರ್ ಅವರ ಸಚಿವ ಸ್ಥಾನದ ಮೇಲೆಯೂ ಕತ್ತಿ ತೂಗುತ್ತಿದೆ ಎನ್ನಲಾಗಿದೆ.

ಡಿಸೆಂಬರ್ 22 ಸಂಪುಟ ವಿಸ್ತರಣೆ ಪಕ್ಕಾ
ಡಿಸೆಂಬರ್ 22 ರಂದು ಸಂಪುಟ ವಿಸ್ತರಣೆ ಪಕ್ಕಾ ಎಂದು ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ಇಬ್ಬರೂ ಹೇಳಿದ್ದಾರೆ. ಅಂದೇ ನಿಗಮ ಮಂಡಳಿಗಳಿಗೂ ನೇಮಕಾತಿ ಅಂತಿಮವಾಗಲಿದೆ. ಅತೃಪ್ತ ಶಾಸಕರು ಬಂಡಾಯ ಏಳದಂತೆ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಮುಖಂಡರು ಯತ್ನಿಸುತಿದ್ದಾರೆ.











Click it and Unblock the Notifications