ಬಿಜೆಪಿ ಮಾಜಿ ಶಾಸಕ ಕೆ.ಲಕ್ಷ್ಮೀನಾರಾಯಣ ನಿಧನ
ಉಡುಪಿ, ಸೆಪ್ಟೆಂಬರ್ 27: ಬೈಂದೂರಿನ ಮಾಜಿ ಶಾಸಕ ಕೆ ಲಕ್ಷ್ಮೀ ನಾರಾಯಣ ಅವರು( 86 ವರ್ಷ) ಇಂದು (ಶುಕ್ರವಾರ) ತಮ್ಮ ಬೆಂಗಳೂರಿನ ನಿವಾಸದಲ್ಲಿ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ವಾಸವಾಗಿದ್ದ, ಲಕ್ಷ್ಮೀ ನಾರಾಯಣ ಅವರು ಕೆಲ ಸಮಯದಿಂದ ಆನಾರೋಗ್ಯದಿಂದ ಬಳಲುತ್ತಿದ್ದರು.
ಆನಾರೋಗ್ಯದ ಹಿನ್ನೆಲೆ ಚಿಕಿತ್ಸೆ ಪಡೆಯುತ್ತಿದ್ದ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಕೆ ಲಕ್ಷ್ಮೀ ನಾರಾಯಣ ಅವರು ಇಂದು ನಿಧನರಾಗಿದ್ದು, ಮೃತರು ಓರ್ವ ಪುತ್ರ, ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಲಕ್ಷ್ಮೀ ನಾರಾಯಣ ಅವರು 2008ರಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದರು.

ಮಾಜಿ ಶಾಸಕ ಲಕ್ಷ್ಮೀ ನಾರಾಯಣ ಅವರ ಮೃತದೇಹವನ್ನು ಬೆಳಿಗ್ಗೆ 10.30 ರಿಂದ ಬೆಂಗಳೂರಿನ ಡಾಲರ್ ಕಾಲನಿಯಲ್ಲಿರುವ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಸಂಜೆ 4.30 ಕ್ಕೆ ಬನಶಂಕರಿಯ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕೆ.ಲಕ್ಷ್ಮೀನಾರಾಯಣ ಅವರ ನಿಧನಕ್ಕೆ ವಿಜಯೇಂದ್ರ ಸಂತಾಪ
ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ಮುಖಂಡ ಕೆ.ಲಕ್ಷ್ಮೀನಾರಾಯಣ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಬಿಜೆಪಿ ಶಾಸಕರಾಗಿದ್ದ ಅವರು, ಉದ್ಯಮಿಯೂ ಆಗಿದ್ದರು. ತಾವು ಶಾಸಕರಾಗಿದ್ದಾಗ ಅವರು, ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದರು. ಅಲ್ಲದೆ, ಬೈಂದೂರು ತಾಲ್ಲೂಕು ರಚನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ನಮ್ಮನ್ನಗಲಿದ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಲಕ್ಷ್ಮೀನಾರಾಯಣ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲಾಯಿತು. ಬೈಂದೂರಿನಲ್ಲಿ ಬಿಜೆಪಿ ಸಂಘಟನೆ ಕಟ್ಟಿ ಬೆಳೆಸುವಲ್ಲಿ ಶ್ರಮಿಸಿ, ಕ್ಷೇತ್ರದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿ ಪ್ರಾಮಾಣಿಕ ಹಾಗೂ ಸಜ್ಜನ ವ್ಯಕ್ತಿತ್ವಕ್ಕೆ ಹೆಸರಾಗಿದ್ದ ಮಾನ್ಯ ಲಕ್ಷ್ಮಿನಾರಾಯಣ್… pic.twitter.com/2SeAdZg6Pa
— Vijayendra Yediyurappa (@BYVijayendra) September 27, 2024
ವಿಶ್ವ ರಾಮಕ್ಷತ್ರಿಯ ಮಹಾಸಂಘದ ಸ್ಥಾಪಕಾಧ್ಯಕ್ಷರಾದ ಅವರು, ಶ್ರೀರಾಮ ವಿವಿಧೋದ್ದೇಶ ಟ್ರಸ್ಟಿನ ಗೌರವಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ವಿವಿಧ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿ ಜನಪ್ರಿಯತೆ ಪಡೆದವರು ಎಂದು ತಿಳಿಸಿದ್ದಾರೆ. ಅವರ ಕುಟುಂಬಸ್ಥರು ಬಂಧುಗಳು, ಹಿತೈಷಿಗಳು ಹಾಗೂ ಅಭಿಮಾನಿಗಳಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.












Click it and Unblock the Notifications