ಅನ್ನಭಾಗ್ಯ ಯೋಜನೆ: ಮೋದಿ ಜೀ “ಸ್ವಾಭಿಮಾನದ ಭಾಗ್ಯ” ಎಂದ ಬಿ.ವೈ ವಿಜಯೇಂದ್ರ
ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಸಚಿವ ಮಧುಬಂಗಾರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ನಡುವೆ ವಾಕ್ಸಮರ ಮುಂದುವರಿದಿದೆ. ಇದೀಗ ಈ ವಿಚಾರವಾಗಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ಸಚಿವ ಮಧು ಬಂಗಾರಪ್ಪ ಅವರೇ ಅನ್ನ ಭಾಗ್ಯ ಕಾಂಗ್ರೆಸ್ಸಿಗರ ಕಿಸೆಯಿಂದ ಬಂದ ಭಾಗ್ಯವಲ್ಲ, ಪ್ರಧಾನಿ ನರೇಂದ್ರ ಜೀ ಅವರು 'ಹಸಿವು ಮುಕ್ತ ಭಾರತ'ಕ್ಕಾಗಿ ತೊಟ್ಟ ಮಹಾ ಸಂಕಲ್ಪದ ಫಲ 'ಗರೀಬ್ ಕಲ್ಯಾಣ್' ಯೋಜನೆಯ ಮೂಲಕ ದೇಶದ ಉದ್ದಗಲಕ್ಕೂ ಪಸರಿಸಿದ ಬಡವರ "ಸ್ವಾಭಿಮಾನದ ಭಾಗ್ಯ" ಎಂದು ಹೇಳಿದ್ದಾರೆ.
ನಿಮ್ಮ ಕಲ್ಪನೆಯಲ್ಲಿ "ಅನ್ನಭಾಗ್ಯ ಜನರಿಗೆ ನೀಡುವ ಭಿಕ್ಷೆ ಎಂದು ಭಾವಿಸಿದಂತಿದೆ, ಅದು ಭಿಕ್ಷೆಯಲ್ಲ ಜನರ ಹಕ್ಕು" ಎಂಬ ಪರಿಜ್ಞಾನ ನಿಮಗಿರಲಿ, ಈ ಹಕ್ಕು ಪಡೆಯಲು ನಿಮ್ಮ ಮನೆಯ ಕೆಲಸಗಾರನಿಂದಿಡಿದು ದೇಶದ ಕಟ್ಟ ಕಡೆಯ ಪ್ರಜೆಗೂ ದಕ್ಕುವ ಸಂವಿಧಾನದ ಸೌಭಾಗ್ಯ. ತ್ರಿವಿಧ ದಾಸೋಹದ ಈ ನಾಡಿನಲ್ಲಿ ಅನ್ನಭಾಗ್ಯದ ಹೆಸರಿನಲ್ಲಿ ಬಡವರನ್ನು ಹಂಗಿಸುವ ಮೂಲಕ ಚಾಲನೆ ವೃತ್ತಿ ಆರಿಸಿಕೊಂಡಿರುವ ಶ್ರಮಿಕ ಚಾಲಕ ಸಮೂಹವನ್ನು ನೀವು ಅವಮಾನಿಸಿದ್ದೀರಿ.

ರಾಜ್ಯದಲ್ಲಿ ಮಕ್ಕಳು'ಅಕ್ಷರಭಾಗ್ಯ'ಪಡೆಯುವಲ್ಲಿ ನಿತ್ಯ ಬವಣೆ ಅನುಭವಿಸುತ್ತಿದ್ದಾರೆ, ಮೊದಲು ಅದರತ್ತ ಗಮನ ಕೊಡಿ, ಸಾವಿರಾರು ಸರ್ಕಾರಿ ಶಾಲೆಗಳು ಮೂಲಭೂತ ಸೌಲಭ್ಯಗಳಿಲ್ಲದೇ ನಲುಗುತ್ತಿವೆ, ಕಟ್ಟಡಗಳ ಮೇಲ್ಛಾವಣಿ ಕುಸಿದು ಅವಘಡಗಳು ಸಂಭವಿಸುತ್ತಿವೆ, ಇಂದಿಗೂ ಅದೆಷ್ಟೋ ಶಾಲೆಗಳಲ್ಲಿ ಶೌಚಾಲಯಗಳಿಲ್ಲದೆ ಮಕ್ಕಳು ಮುಜುಗರ ಅನುಭವಿಸುತ್ತಿದ್ದಾರೆ.
ಮೊದಲು ಊರು ಸುತ್ತಿಬನ್ನಿ, ಹಳ್ಳಿಗಾಡಿನ ಶಾಲೆಗಳ ಸ್ಥಿತಿ ನೋಡಿ ಬನ್ನಿ, ಅಗತ್ಯ ಶಿಕ್ಷಕರಿಲ್ಲದೇ ಮಕ್ಕಳು ಅಕ್ಷರ ವಂಚಿತರಾಗುತ್ತಿರುವ ಬಗ್ಗೆ ನಿತ್ಯ ವರದಿಯಾಗುತ್ತಿದೆ 'ವಿದ್ಯಾಭಾಗ್ಯ'ಕ್ಕೆ ಆಗುತ್ತಿರುವ ಕಂಟಕವನ್ನು ತಪ್ಪಿಸುವ ಸಾಮರ್ಥ್ಯವಿಲ್ಲದ ನೀವು 'ಅನ್ನ ಭಾಗ್ಯ'ದ ಹೆಸರಿನಲ್ಲಿ ಬಡವರನ್ನು ಅವಮಾನಿಸಲು ಲಜ್ಜೆಗೇಡಿತನದ ವರ್ತನೆ ಪ್ರದರ್ಶಿಸಿದ್ದೀರಿ. ಶಿಕ್ಷಣ ಸಚಿವ ಸ್ಥಾನದ ಸಜ್ಜನಿಕೆ ಬಿಟ್ಟು ಮಾತನಾಡುವ ನಿಮ್ಮಿಂದ "ಶಿಕ್ಷಣ ಇಲಾಖೆಯನ್ನು ದೇವರೇ ಕಾಪಾಡಬೇಕಾದ ಸ್ಥಿತಿ ಬಂದೊದಗಿರುವುದು ಈ ನಾಡಿನ ದೌರ್ಭಾಗ್ಯವಾಗಿದೆ" ಎಂದು ಹೇಳಿದ್ದಾರೆ.ಇದೀಗ ಈ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಜನರ ರಿಯಾಕ್ಷನ್ ಏನಿದೆ ?
ಇನ್ನು ಈ ಟ್ವೀಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನ್ನಭಾಗ್ಯ ಯೋಜನೆ 2013. ಮೋದಿ ಪ್ರಧಾನಿ ಮಂತ್ರಿ ಆಗಿದ್ದು 2014 ಎಂದು ಕಮೆಂಟ್ ಮಾಡಿದ್ದಾರೆ. ಅನ್ನ ಭಾಗ್ಯ ಬಂದಿದ್ದು 2013ರಲ್ಲಿ ಮೋದಿಯವರು ಪ್ರಧಾನಿಯಾಗಿದ್ದು 2014ರಲ್ಲಿ ಬಿಜೆಪಿಯ ರವರು ಕಾಂಗ್ರೆಸ್ ಮಾಡಿದ ಯೋಜನೆಯನ್ನು ಹೆಸರು ಬದಲಿಸಿ ಯೋಜನೆ ತರುತ್ತಾರೆ ಅಷ್ಟೇ ಮಾನ್ಯ ಬಿಜೆಪಿ ರಾಜ್ಯಾಧ್ಯಕ್ಷರು ಸ್ವಲ್ಪ ತಿಳಿದುಕೊಂಡು ಮಾತಾಡಬೇಕು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಇನ್ನು ಮಧುಬಂಗಾರಪ್ಪ ಅವರ ಹೇಳಿಕೆಗೂ ವಿರೋಧ ವ್ಯಕ್ತವಾಗಿದೆ. ಈ ಸಂದೇಶಕ್ಕೆ ಏನು ಉತ್ತರ ನೀಡಬೇಕು ಗೊತ್ತಿಲ್ಲ ಕಾರಣ ಡ್ರೈವರಗೆ ಅನ್ನಭಾಗ್ಯ ಆಗಲಿ , ಅಥವಾ ಕುಟುಂದ ಆದಾಯ ಅರ್ಹತೆ ಇರುವ ವ್ಯಕ್ತಿ ಡ್ರೈವರ ಆದ ಮಾತ್ರಕ್ಕೆ ಸರಕಾರಿ ಸೌಲಭ್ಯ ಪಡಿಯಬೇಡ ಎಂಬ ಮಾನದಂಡ ಇದೇಯೇ. ನಿಮ್ಮ ನಿಮ್ಮ ರಾಜಕೀಯ ಧೋರಣೆಗೆ ಆ ಚಾಲಕನ ಕುಟುಂಬಕ್ಕೆ ಅನ್ನಭಾಗ್ಯ ಪಲಾನುಭವಿ ಕಣ್ಣು ಏಕೆ. ಈ ವಿಷಯದ ಮೇಲೆ ರಾಜಕೀಯವೇ ಎಂದೂ ಕೆಲವರು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications