ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ: ವಿಜಯೇಂದ್ರ ಹೇಳಿದ್ದೇನು?
ಬೆಂಗಳೂರು, ಅಕ್ಟೋಬರ್ 12: ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಶೂನ್ಯ ಆಡಳಿತದಿಂದ ಕಂಗೆಟ್ಟ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸುದ್ದಿಯನ್ನಷ್ಟೇ ಇದುವರೆಗೂ ನಾವು ಕೇಳುತ್ತಿದ್ದೆವು. ಆಡಳಿತ ಪಕ್ಷದ ಶಾಸಕರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿರುವುದು ಈ ಸರ್ಕಾರದ ದಿವಾಳಿ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಹೇಳಿದ್ದಾರೆ.
ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಟ್ವೀಟ್ ಮಾಡಿದ್ದು, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಆಡಳಿತ ಪಕ್ಷದ ಶಾಸಕರೇ ಹತಾಶೆಯ ಅಂಚಿಗೆ ತಲುಪಿರುವುದನ್ನು ಶಾಸಕ ರಾಜು ಕಾಗೆ ಪ್ರತಿನಿಧಿಸಿದ್ದಾರೆ.

ಕಾಗವಾಡ ಶಾಸಕ ರಾಜು ಕಾಗೆ ಅವರು ವಸ್ತು ಸ್ಥಿತಿಯನ್ನು ಬಿಚ್ಚಿಟ್ಟು, ಕಾಂಗ್ರೆಸ್ ಸರ್ಕಾರದ ದುಸ್ಥಿತಿಯನ್ನು ಅನಾವರಣ ಮಾಡಿದ್ದಾರೆ. ಜಲಸಂಪನ್ಮೂಲ, ಉದ್ಯೋಗ ಸೃಷ್ಠಿ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಯೋಜನೆಗಳು ಸಂಪೂರ್ಣ ನೆನೆಗುದಿಗೆ ಬಿದ್ದಿವೆ.
ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಆಡಳಿತ ಪಕ್ಷದ ಶಾಸಕರೇ ಹತಾಶೆಯ ಅಂಚಿಗೆ ತಲುಪಿರುವುದನ್ನು ಶಾಸಕ ರಾಜು ಕಾಗೆ ಪ್ರತಿನಿಧಿಸಿದ್ದಾರೆ. @INCKarnataka ಸರ್ಕಾರದ ಅಭಿವೃದ್ಧಿ ಶೂನ್ಯ ಆಡಳಿತದಿಂದ ಕಂಗೆಟ್ಟ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸುದ್ದಿಯನ್ನಷ್ಟೇ ಇದುವರೆಗೂ ನಾವು ಕೇಳುತ್ತಿದ್ದೆವು.… pic.twitter.com/TTaouQrN77
— Vijayendra Yediyurappa (@BYVijayendra) October 11, 2024
ನಡೆಯುತ್ತಿರುವಾಗ ಬಿದ್ದರೆ ಏಳಿಸ ಬಹುದು ಆದರೆ ಕಳ್ಳ ನಿದ್ರೆಗೆ ಜಾರಿರುವ ಸರ್ಕಾರವನ್ನು ಎದ್ದು ನಿಲ್ಲಿಸುವುದು ಹೇಗೆ ಸಾಧ್ಯ? ಎಂಬ ಪರಿಸ್ಥಿತಿ ರಾಜ್ಯದಲ್ಲಿ ಉದ್ಭವಿಸಿರುವುದನ್ನು ರಾಜು ಕಾಗೆಯವರ ಮಾತುಗಳು ಸಾಕ್ಷೀಕರಿಸುತ್ತಿವೆ. ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಳ್ಳದೆಯೂ ಸರಣೀ ಭ್ರಷ್ಟಾಚಾರಗಳನ್ನು ಹೇಗೆ ನಡೆಸಬಹುದು ಎಂಬುದರ ನಿಪುಣತೆಯನ್ನು ಕಾಂಗ್ರೆಸ್ ಕರಗತ ಮಾಡಿಕೊಂಡಿದೆ.
ಅನೈತಿಕ ಹಾಗೂ ಅರಾಜಕತೆ ಸ್ಥಿತಿಯ ನಡುವೆ ರಾಜ್ಯದ ಆಡಳಿತ ಸಿಲುಕಿಕೊಂಡು ನರಳುತ್ತಿದೆ. ಶಾಸಕರೊಬ್ಬರ ತಾಳ್ಮೆಯ ಸಹನೆ ಒಡೆದಿರುವುದು ಆರಂಭವಷ್ಟೆ, ಜನಾಕ್ರೋಶದ ಪ್ರವಾಹಕ್ಕೆ ಸಿಲುಕಿ ಕಾಂಗ್ರೆಸ್ ಸರ್ಕಾರ ಧೂಳಿಪಟ ಆಗುವುದಕ್ಕೆ ಮುನ್ನ ಅಧಿಕಾರ ಬಿಟ್ಟು ತೊಲಗಿ, ಜನವಿರೋಧಿ ಹಾಗೂ ಅಭಿವೃದ್ಧಿ ಶೂನ್ಯ ಆಡಳಿತಕ್ಕೆ ತಿಲಾಂಜಲಿ ನೀಡಬೇಕು ಎನ್ನುವುದು ರಾಜ್ಯದ ಜನತೆಯ ಆಗ್ರಹವಾಗಿದೆ. ಕಾಂಗ್ರೆಸ್ ಸರ್ಕಾರದ ದಿವಾಳಿ ಪರಿಸ್ಥಿತಿಯ ಹೂರಣವನ್ನು ಶಾಸಕ ರಾಜು ಕಾಗೆ ಬಯಲಿಗೆಳೆದು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.
ರಾಜು ಕಾಗೆ ಹೇಳಿದ್ದೇನು?
ರೈತರ ಪರ ಯಾವುದೇ ಯೋಜನೆಗಳು ಬರ್ತಿಲ್ಲ. ಮೊದಲು ರೈತರನ್ನು ಬದುಕಿಸುವ ಕೆಲಸ ಮಾಡಿ. ರೈತರು ಬದುಕಿದ್ರೆ ಮಾತ್ರ ಈ ದೇಶ ಪ್ರಗತಿ ಹೊಂದಲು ಸಾಧ್ಯವಿದೆ. ರೈತರು ಬದುಕು ನಡೆಸುವುದು ದುಸ್ತರವಾಗಿದೆ ಎಂದು ತಮ್ಮದೇ ಸರ್ಕಾರದ ವಿರುದ್ಧ ಶಾಸಕ ರಾಜು ಕಾಗೆ ಅವರು ಹರಿಹಾಯ್ದಿದ್ದಾರೆ.
ರೈತರು ಒಂದು ವರ್ಷ ಬೆಳೆಗಳನ್ನು ಬೆಳೆಯುವುದನ್ನು ಬಿಟ್ಟರೇ ನೀವೇನು ತಿಂತಿರೀ..? ನಿಮ್ಮ ಬಳಿ ರೊಕ್ಕ, ಬಂಗಾರ ಬೆಳ್ಳಿ ಸಾಕಷ್ಟು ಇರಬಹುದು, ಆದ್ರೆ ಅದನ್ನ ತಿನ್ನೋಕಾಗುತ್ತಾ..? ಕಳೆದ ಒಂದು ವರ್ಷದಿಂದ ನನ್ನ ಗೋಳನ್ನು ಸರ್ಕಾರ ಆಲಿಸುತ್ತಿಲ್ಲ. ಹೀಗೆ ಪರಿಸ್ಥಿತಿ ಮುಂದುವರೆದ್ರೆ ವಿಧಾನಸೌಧದಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಓರ್ವ ಮಂತ್ರಿಗೆ ಹೇಳಿದೆ. ನಿನ್ಯಾಕೆ ಆತ್ಮಹತ್ಯೆ ಮಾಡಿಕೊಳ್ತಿಯಾ, ನಿನ್ನ ಕೆಲಸ ಮಾಡ್ತಿವಿ ಅಂತ ಹೇಳಿದ ಮಂತ್ರಿಗಳಿದ್ದಾರೆ.
ನಾವೇನು ವಿಧಾನಸೌಧಕ್ಕೆ ಹೋಗಿ ಖಾಲಿ ಕುಂತಿಲ್ಲ, ಚೈನಿ(ಮೋಜು, ಮಸ್ತಿ) ಮಾಡ್ತಿಲ್ಲ. ರೈತರ ಕಷ್ಟ ಸುಖಗಳನ್ನು ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡ್ತಿದ್ದೇನೆ. ಆದ್ರೆ ಸರ್ಕಾರದವರು ನಮಗೆ ಸ್ಪಂದನೆ ಮಾಡ್ತಿಲ್ಲ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಅದರಿಂದ ಏನು ಆಗೋದಿದೆ. ಬೇಕಾದ್ರೆ ನಾನು ನಾಳೆ ಹೋಗಿ ರಾಜೀನಾಮೆ ಕೊಡ್ತಿನಿ ಎಂದು ಹೇಳಿದರು.
ಏತಕ್ಕಾಗಿ ನಾವು ಎಂಎಲ್‌ಎ ಗಳಾಗಿರಬೇಕು, ಏತಕ್ಕಾಗಿ ನಾವು ಅಧಿಕಾರದಲ್ಲಿಬೇಕು. ಆಡಳಿತ ಪಕ್ಷದ ಒಬ್ಬ ಶಾಸಕನಾಗಿ ಅಸಹಾಯಕತೆ ಬಗ್ಗೆ ಹೇಳ್ತಾ ಇದ್ದೀನಿ ಅಂದ್ರೆ ಎಷ್ಟರಮಟ್ಟಿಗೆ ಈ ವ್ಯವಸ್ಥೆಯಲ್ಲಿ ಬದುಕಿದ್ದೇವೆ ಎಂದು ಅರ್ಥ ಮಾಡ್ಕೊಳ್ಳಿ. ಕಾಂಗ್ರೆಸ್ ಸರ್ಕಾರದ ನಡೆಯಿಂದಾಗಿ ನನ್ನ ಮನಸ್ಸಿಗೆ ಬಹಳ ನೋವಾಗಿದೆ. ಹೀಗಾಗಿ ಮುಂದಿನ ಸಲ ನನಗೆ ಎಂಎಲ್ಎ ಆಗುವುದು ಬೇಕಾಗಿಲ್ಲ. ಕ್ಷೇತ್ರದ ಜನತೆ ಮುಂದೆ ತಮ್ಮ ಅಸಹಾಯಕತೆಯನ್ನ ರಾಜು ಕಾಗೆ ಅವರು ತೊಡಿಕೊಂಡಿದ್ದಾರೆ.












Click it and Unblock the Notifications